ವಿಶ್ವಕಪ್ ಪಂದ್ಯದ ಸ್ಥಳ ಬದಲಿಸುವ ಪಾಕ್ ಮನವಿ ತಿರಸ್ಕಾರ, ಭಾರತ ಪ್ರವಾಸಕ್ಕೆ ಅನುಮತಿ ನೀಡದ ಸರ್ಕಾರ!

By Suvarna News  |  First Published Jun 27, 2023, 5:16 PM IST

ಭಾರತದಲ್ಲಿ ಆಯೋಜನೆಗೊಂಡಿರುವ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಆದರೆ ಪಂದ್ಯದ ಸ್ಥಳಬದಲಿಸುವಂತೆ ಪಾಕಿಸ್ತಾನ ಮಾಡಿದ್ದ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ತಿರಸ್ಕರಿಸಿದೆ. ವೇಳಾಪಟ್ಟಿ ಪ್ರಕಟಗೊಂಡರೂ ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ಶಹಬಾಜ್ ಷರಿಪ್ ಸರ್ಕಾರ ಅನುಮತಿ ನೀಡಿಲ್ಲ.
 


ನವದೆಹಲಿ(ಜೂ.27) ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿಯಲ್ಲಿ ಪಾಕಿಸ್ತಾನ ಪಂದ್ಯಗಳ ಕ್ರೀಡಾಂಗಣ ಬದಲಿಸುವಂತೆ ಪಿಸಿಬಿ ಮಾಡಿದ್ದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಕನಿಷ್ಠ 2 ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಕರಡು ಪ್ರತಿಯಲ್ಲಿ ಉಲ್ಲೇಖಿಸಿದ ಕ್ರೀಡಾಂಗಣದಲ್ಲೇ ಪಂದ್ಯಗಳನ್ನು ನಡೆಸಲು ಐಸಿಸಿ ನಿರ್ಧರಿಸಿದೆ. ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ ಎಲ್ಲಾ ಮನವಿಯನ್ನು ತಿರಸ್ಕರಿಸಿರುವ ಐಸಿಸಿ, ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದೆ.

ಭಾರತದ ವಿರುದ್ದದ ಪಂದ್ಯ ಸೇರಿದಂತೆ ಹಲವು ಪಂದ್ಯದಳ ಸ್ಥಳ ಬದಲಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿ ಹಾಗೂ ಬಿಸಿಸಿಐಗೆ ಮನಿವಿ ಮಾಡಿತ್ತು. ಇದರ ಜೊತೆಗೆ ಭಾರತ ಪ್ರವಾಸದಿಂದ ಹಿಂದೆ ಸರಿಯುವ ಬೆದರಿಕೆ ಹಾಕಿತ್ತು. ಆದರೆ ಐಸಿಸಿ ಈ ಮನವಿಗೆ ಸೊಪ್ಪು ಹಾಕಿಲ್ಲ. ಪಾಕಿಸ್ತಾನ ಎಲ್ಲಾ ಮನವಿ ತಿರಸ್ಕರಿಸಿ ವೇಳಾಪಟ್ಟಿ ಪ್ರಕಟಿಸಿದೆ.

Latest Videos

undefined

ಏಕದಿನ ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸುವ 4 ತಂಡ ಯಾವುದು? ಭವಿಷ್ಯ ನುಡಿದ ಸೆಹ್ವಾಗ್!

ಕರಡು ವೇಳಾಪಟ್ಟಿಯಲ್ಲಿ ಕನಿಷ್ಠ 2 ಬದಲಾವಣೆ ಮಾಡಲೇಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯವನ್ನು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರ ಮಾಡುವಂತೆ ಕೋರಿತ್ತು. ಇನ್ನು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಲು ಮನವಿ ಮಾಡಿತ್ತು. ಈ ಮನವಿ ಹಿಂದೆ ಪಾಕಿಸ್ತಾನದ ತಂತ್ರವೊಂದು ಅಡಗಿತ್ತು.

ಚೆನ್ನೈ ಚಿಪಾಕ್ ಕ್ರೀಡಾಂಗಣ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಸ್ಪಿನ್‌ನಲ್ಲಿ ಆಫ್ಘಾನಿಸ್ತಾನ ಬಲಿಷ್ಠವಾಗಿದೆ. ಹೀಗಾಗಿ ಆಫ್ಘಾನಿಸ್ತಾನಕ್ಕೆ ಹೆಚ್ಚಿನ ಪಿಚ್ ಲಾಭ ಸಿಗಲಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ಪಂದ್ಯವನ್ನು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಮನವಿ ಮಾಡಿತ್ತು. ಇತ್ತ ಆಸ್ಟ್ರೇಲಿಯಾ ತಂಡ ಬೆಂಗಳೂರಿನ ಪಿಚ್ ಲಾಭ ಪಡೆಯುವ ಸಾಧ್ಯತೆ ಹೆಚ್ಚು. ಬ್ಯಾಟಿಂಗ್ ಪಿಚ್ ಹಾಗೂ ಶಾರ್ಟ್ ಬೌಂಡರಿಗಳಿಂದ ಆಸ್ಟ್ರೇಲಿಯಾ ಅಧಿಪತ್ಯ ಸಾಧಿಸಲಿದೆ. ಹೀಗಾಗಿ ಈ ಪಂದ್ಯವನ್ನು ಚೆನ್ನೈಗೆ ಸ್ಥಳಾಂತರಿಸಿದರೆ ತಮ್ಮಲ್ಲಿರುವ ಸ್ಪಿನ್ನರ್‌ಗಳಿಂದ ಆಸಿಸ್ ಕಟ್ಟಿಹಾಕಲು ಪಾಕಿಸ್ತಾನ ಪ್ಲಾನ್ ಮಾಡಿಕೊಂಡಿತ್ತು. ಆದರೆ ಈ ಮನವಿಗಳನ್ನು ಐಸಿಸಿ ತಿರಸ್ಕರಿಸಿದೆ.

ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ, ಅ.15ಕ್ಕೆ ಭಾರತ-ಪಾಕ್, ಅಹಮ್ಮದಾಬಾದ್‌ನಲ್ಲಿ ಫೈನಲ್!

ಮುಂಬೈ ಹಾಗೂ ಕೋಲ್ಕತಾದಲ್ಲಿ ಪಂದ್ಯ ಆಡಲೂ ಪಾಕಿಸ್ತಾನ ನಿರಾಕರಿಸಿತ್ತು. ಸೆಮಿಫೈನಲ್ ಪಂದ್ಯಗಳು ಮುಂಬೈ ಹಾಗೂ ಕೋಲ್ಕತಾದಲ್ಲಿ ನಡೆಯಲಿದೆ. ವೇಳಾಪಟ್ಟಿ ಪ್ರಕಟ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಚುನಾವಣೆಯನ್ನ ಜುಲೈ 17ಕ್ಕೆ ಮುಂದೂಡಿದೆ. ಇದೀಗ  ಈ ವೇಳಾಪಟ್ಟಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಿಲ್ಲ. ಇತ್ತ ಪಾಕಿಸ್ತಾನ ತಂಡಕ್ಕ ಭಾರತ ಪ್ರವಾಸಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಸ್ಥಳ ಬದಲಾವಣೆ ಮಾಡದ ಕಾರಣ ಪಾಕಿಸ್ತಾನ ಸರ್ಕಾರ ಅನುಮತಿ ನೀಡಲು ವಿಳಂಬ ಮಾಡುವ ಸಾಧ್ಯತೆ ಇದೆ. ಈ ಮೂಲಕ ಐಸಿಸಿ ಮೇಲೆ ಒತ್ತಡ ಹೇರುವ ತಂತ್ರ ಹೇರುವ ಸಾಧ್ಯತೆಗಳು ದಟ್ಟವಾಗಿದೆ. 

ಮುಂಬೈನಲ್ಲಿ ಪಂದ್ಯ ಆಡಲು ಪಾಕಿಸ್ತಾನ ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳ ಕಡಿಮೆ. ಆದರೆ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶ ಪಡೆದರೆ ಮುಂಬೈನಲ್ಲೇ ಪಂದ್ಯ ಆಡಬೇಕಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತೀವ್ರ ತಲೆನೋವಾಗಿದೆ. ಇತ್ತ ಪಾಕಿಸ್ತಾನ ಸರ್ಕಾರ ಕೂಡ ಪ್ರತಿ ತಂತ್ರ ಹೆಣೆಯಲು ಸಜ್ಜಾಗಿದೆ.
 

click me!