ಡೇರಿಲ್ ಮಿಚೆಲ್ ಹಾಗೂ ಕೇನ್ ವಿಲಿಯಮ್ಸನ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ.
ಚೆನ್ನೈ (ಅ.13): ಹಾಲಿ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವಾಡಿದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 2019ರ ಏಕದಿನ ವಿಶ್ವಕಪ್‌ನ ರನ್ನರ್‌ಅಪ್ ಟೀಮ್ ನ್ಯೂಜಿಲೆಂಡ್ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ಶುಕ್ರವಾರ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿದ ನ್ಯೂಜಿಲೆಂಡ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ, ಕೇನ್ ವಿಲಿಯಮ್ಸನ್ ಪಂದ್ಯದ ವೇಳೆ ಮತ್ತೊಮ್ಮೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ. ಇದೇ ಕಾರಣಕ್ಕಾಗಿ ಕೇನ್ ವಿಲಿಯನ್ಸ್ 78 ರನ್ ಬಾರಿಸಿದ್ದ ವೇಳೆ ನಿವೃತ್ತಿ ಪಡೆದು ಹೊರನಡೆದಿದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಕಿವೀಸ್‌ನ ಮಹಾಬಲಿಷ್ಠ ಬೌಲಿಂಗ್ ವಿಭಾಗದ ಮುಂದೆ ಪರದಾಟ ನಡೆಸಿತು. ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮುಶ್ಫೀಕರ್ ರಹೀಂ ಆಕರ್ಷಕ 66 ರನ್ ಬಾರಿಸಿದ್ದರಿಂದ ತಂಡ 9 ವಿಕೆಟ್‌ಗೆ 245 ರನ್ ಬಾರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ಇನ್ನೂ 43 ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್‌ಗೆ 248 ರನ್ ಬಾರಿಸಿ ಗೆಲುವು ಕಂಡಿತು.
ನ್ಯೂಜಿಲೆಂಡ್ ಪರವಾಗಿ ಆರಂಭಿಕ ಆಟಗಾರ ಡೆವೋನ್ ಕಾನ್ವೆ 59 ಎಸೆತಗಳಲ್ಲಿ 3 ಬೌಂಡರಿಗಳಿದ್ದ 45 ರನ್ ಬಾರಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಆಲ್ರೌಂಡರ್ ರಚಿನ್ ರವೀಂದ್ರ ಈ ಬಾರಿ ಸಂಪೂರ್ಣ ವೈಫಲ್ಯ ಕಂಡರು. ಬಳಿಕ ಕೇನ್ ವಿಲಿಯಮ್ಸನ್ (78 ರನ್, 107 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಡೇರಿಲ್ ಮಿಚೆಲ್ (89 ರನ್, 67 ಎಸೆತ, 6 ಬೌಂಡರಿ, 4 ಸಿಕ್ಸರ್) ತಂಡಕ್ಕೆ ಅಗತ್ಯವಾಗಿದ್ದ ರನ್ ಬಾರಿಸಿ ಗೆಲುವಿಗೆ ಕಾರಣರಾದರು. ಗೆಲುವಿನ ಹಂತದಲ್ಲಿ ಕೇನ್ ವಿಲಿಯಮ್ಸನ್ ನಿವೃತ್ತಿ ನೀಡಿ ಹೊರನಡೆದಾಗ ಕ್ರೀಸ್‌ಗಿಳಿದ ಗ್ಲೆನ್ ಫಿಲಿಪ್ಸ್ 11 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ನೆರವಿನಿಂದ ಅಜೇಯ 16 ರನ್ ಬಾರಿಸಿದರು.
ನ್ಯೂಜಿಲೆಂಡ್ ಬ್ಯಾಟಿಂಗ್ ವಿಭಾಗಕ್ಕೆ ಸಾಧಾರಣ ಎನಿಸಿದ್ದ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ 12 ರನ್ ಗಳಿಸುವ ವೇಳೆಗಾಗಲೇ ಆಘಾತ ಎದುರಾಯಿತು. 13 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 9 ರನ್ ಬಾರಿಸಿದ್ದ ರಚಿನ್ ರವೀಂದ್ರ, ಮುಸ್ತಾಫಿಜುರ್‌ಗೆ ವಿಕೆಟ್ ನೀಡಿದರು. ಆ ಬಳಿಕ ಆರಂಭಿಕ ಕಾನ್ವೆಗೆ ಜೊತೆಯಾದ ಕೇನ್ ವಿಲಿಯಮ್ಸನ್ 2ನೇ ವಿಕೆಟ್‌ಗೆ ಆಕರ್ಷಕ 80 ರನ್ ಜೊತೆಯಾಟವಾಡಿದರು. ಸಾಕಷ್ಟು ನಿಧಾನಗತಿಯಲ್ಲಿಯೇ ಬ್ಯಾಟಿಂಗ್ ಮಾಡಿದ ಈ ಜೋಡಿ ಚೆನ್ನೈ ಪಿಚ್‌ನ ಮರ್ಮವನ್ನು ಅರಿತವರಂತೆ ಇನ್ನಿಂಗ್ಸ್ ಆಡಿದರು. ಅದರಲ್ಲೂ ಐಸ್ ಕೂಲ್ ಕೇನ್ ವಿಲಿಯಮ್ಸನ್ ಯಾವುದೇ ಹಂತದಲ್ಲೂ ಅಪಾಯಕಾರಿ ಶಾಟ್ ಬಾರಿಸುವ ಪ್ರಯತ್ನವನ್ನೇ ಮಾಡಲಿಲ್ಲ. 21ನೇ ಓವರ್‌ನಲ್ಲಿ ಶಕೀಬ್ ಅಲ್ ಹಸನ್, ಕಾನ್ವೆಯನ್ನು ಎಲ್‌ಬಿ ವಿಕೆಟ್ ಮೂಲಕ ಪೆವಿಲಿಯನ್‌ಗಟ್ಟಿದರು. ಆ ನತರ ಜೊತೆಯಾದ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಾಕ್ ವಿರುದ್ಧ ಶುಭ್‌ಮನ್ ಗಿಲ್ ಆಡ್ತಾರಾ? ಬಿಗ್ ಅಪ್‌ಡೇಟ್ ನೀಡಿದ ಕ್ಯಾಪ್ಟನ್ ರೋಹಿತ್ ಶರ್ಮ
ಬಾಂಗ್ಲಾದೇಶದ ವಿರುದ್ಧ ಕಿವೀಸ್ ದಾಖಲೆ: ವಿಶ್ವಕಪ್‌ನಲ್ಲಿ ತಂಡವೊಂದರ ವಿರುದ್ಧ ಒಂದೂ ಸೋಲು ಕಾಣದೆ ಗರಿಷ್ಠ ಗೆಲುವು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಸ್ಥಾನ ಪಡೆದಿದೆ. ಇದು ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಕಿವೀಸ್ ತಂಡದ 6ನೇ ಗೆಲುವು ಎನಿಸಿದೆ. ವೆಸ್ಟ್ ಇಂಡೀಸ್ ತಂಡ ಕೂಡ ಜಿಂಬಾಬ್ವೆ ವಿರುದ್ಧ ವಿಶ್ವಕಪ್‌ನಲ್ಲಿ ಒಂದೂ ಸೋಲು ಕಾಣದೆ 6 ಗೆಲುವು ಕಂಡಿದೆ. ಇನ್ನು ಭಾರತ ತಂಡ ಪಾಕಿಸ್ತಾನ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಒಂದೂ ಸೋಲು ಕಾಣದೆ 7 ಗೆಲುವು ಕಂಡಿದೆ. ಆದರೆ, ಇದರಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಪಾಕಿಸ್ತಾನ. ಶ್ರೀಲಂಕಾ ವಿರುದ್ಧ ಪಾಕಿಸ್ತಾನ ವಿಶ್ವಕಪ್‌ನಲ್ಲಿ 8 ಗೆಲುವು ಕಂಡಿದೆ.
'ನಾನೀಗ ಬದಲಾಗಿದ್ದೇನೆ..' ಭಾರತೀಯರ ಕ್ಷಮೆ ಕೋರಿದ ಪಾಕಿಸ್ತಾನದ ನಿರೂಪಕಿ ಜೈನಾಬ್ ಅಬ್ಬಾಸ್!