
ನವದೆಹಲಿ (ಅ.25): ಬರೋಬ್ಬರಿ 309 ರನ್‌ಗಳ ಗೆಲುವಿನೊಂದಿಗೆ ಐದು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡ ನೆದರ್ಲೆಂಡ್ಸ್ ತಂಡವನ್ನು ಚಚ್ಚಿ ಬಿಸಾಡಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್‌ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರಹಾರದ ಮುಂದೆ ಸಂಪೂರ್ಣವಾಗಿ ಮಂಡಿಯೂರಿದ ನೆದರ್ಲೆಂಡ್ಸ್ ತಂಡ ಕೇವಲ 90 ರನ್‌ಗೆ ಆಲೌಟ್ ಆಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರ 44 ಎಸೆತಗಳ 106 ರನ್‌ಗಳ ನೆರವಿನಿಂದ 9 ವಿಕೆಟ್‌ಗೆ 399 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದು ವಿಶ್ವಕಪ್ ಇತಿಹಾಸದಲ್ಲಿಯೇ ತಂಡವೊಂದರ ಅತೀದೊಡ್ಡ ಗೆಲುವು ಎನಿಸಿದೆ. ಅದಲ್ಲದೆ, ರನ್ ಅಂತರದಲ್ಲಿ ಏಕದಿನ ಕ್ರಿಕೆಟ್‌ನ 2ನೇ ದೊಡ್ಡ ಗೆಲುವು ಎನಿಸಿದೆ. ಇದೇ ವರ್ಷ ಭಾರತ ತಂಡ ತಿರುವನಂತಪುರದಲ್ಲಿ ಶ್ರೀಲಂಕಾ ತಂಡವನ್ನು 317 ರನ್‌ಗಳಿಂದ ಸೋಲಿಸಿರುವುದು ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರ ಅತೀದೊಡ್ಡ ಗೆಲುವು ಎನಿಸಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್‌ನ ಅಚ್ಚರಿಯ ಫಲಿತಾಂಶ ನೀಡಿದ್ದ ನೆದರ್ಲೆಂಡ್ಸ್ ತಂಡದಲ್ಲಿ ಬುಧವಾರ ಅಂಥ ಆಟ ಕಂಡುಬರಲೇ ಇಲ್ಲ. 400 ರನ್‌ಗಳ ಚೇಸಿಂಗ್ ಸಾಹಸದಲ್ಲಿ ನೆದರ್ಲೆಂಡ್ಸ್ ತಂಡ 21 ಓವರ್‌ಗಳಲ್ಲಿ ಕೇವಲ 90 ರನ್‌ಗೆ ಆಲೌಟ್ ಆಯಿತು.
ಚೇಸಿಂಗ್ ಆರಂಭಿಸಿದ ನೆದರ್ಲೆಂಡ್ಸ್ ತಂಡ ಪರವಾಗಿ ಆರಂಭಿಕ ಆಟಗಾರ ವಿಕ್ರಮ್‌ಜೀತ್ ಸಿಂಗ್ ಒಬ್ಬರೇ 20ಕ್ಕಿಂತ ಅಧಿಕ ರನ್ ಪೇರಿಸಿದರು. ಉಳಿದಂತೆ ತಂಡದ ಆರು ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತಕ್ಕೆ ಔಟಾದರೆ, ನಾಯಕ ಸ್ಕಾಟ್ ಎಡ್ವರ್ಡ್ಸ್ ಮಾತ್ರ 12 ರನ್ ಬಾರಿಸಿ ಕೊನೆಯವರೆಗೂ ಅಜೇಯವಾಗುಳಿದರು. ಅಸ್ಟ್ರೇಲಿಯಾ ಪರವಾಗಿ ಬೌಲಿಂಗ್ ದಾಳಿ ಮಾಡಿದ ಎಲ್ಲರೂ ವಿಕೆಟ್ ಉರುಳಿಸಿದರು. ಸ್ಪಿನ್ನರ್ ಆಡಮ್ ಜಂಪಾ ಕೇವಲ 8 ರನ್ ನೀಡಿ 4 ವಿಕೆಟ್ ಉರುಳಿಸಿ ನೆದರ್ಲೆಂಡ್ಸ್‌ನ ಕೆಳ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಧ್ವಂಸ ಮಾಡಿದರು. ಮಿಚೆಲ್ ಮಾರ್ಷ್ 19 ರನ್‌ಗೆ 2 ವಿಕೆಟ್ ಉರುಳಿಸಿದರೆ, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ರನ್‌ಗಳ ವಿಚಾರದಲ್ಲಿ ನೆದರ್ಲೆಂಡ್ಸ್‌ನ ಅತೀ ದೊಡ್ಡ ಸೋಲು ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಆಮ್ಸ್ಟೆಲ್ವೀನ್‌ನಲ್ಲಿ ನಡೆದ ಪಂದ್ಯದಲ್ಲಿ 232 ರನ್‌ಗಳಿಂದ ಸೋತಿದ್ದು ತಂಡದ ಕೆಟ್ಟ ಸೋಲು ಎನಿಸಿತ್ತು.
ಏಕದಿನದಲ್ಲಿ ನೆದರ್ಲೆಂರ್ಡ್ಸ್ ತಂಡದ ಮೂರನೇ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. 2007ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಡುಬ್ಲಿನ್‌ನಲ್ಲಿ 80 ರನ್ ಬಾರಿಸಿದ್ದು ಹಾಗೂ 2002ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ 86 ರನ್‌ಗೆ ಆಲೌಟ್ ಆಗಿದ್ದು ತಂಡದ ಕನಿಷ್ಠ ಮೊತ್ತವಾಗಿತ್ತು. ಇನ್ನು 2013ರಿಂದ ದೆಹಲಿಯಲ್ಲಿ ಆಡಿದ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ 9 ಪಂದ್ಯಗಳಲ್ಲಿ 7 ಬಾರಿ ತಂಡ ಗೆಲುವು ಸಾಧಿಸಿದೆ. ಅದಲ್ಲದೆ, ನೆದರ್ಲೆಂಡ್ಸ್ ತಂಡದ ಮೊತ್ತ ಹಾಲಿ ವಿಶ್ವಕಪ್‌ನ ಅತ್ಯಂತ ಕನಿಷ್ಠ ಮೊತ್ತವಾಗಿದೆ.
ವಾರ್ನರ್-ಮ್ಯಾಕ್ಸ್‌ವೆಲ್ ತಲಾ ನೂರು: ನೆದರ್‌ಲೆಂಡ್ಸ್‌ಗೆ ಪಂದ್ಯ ಗೆಲ್ಲಲು ಗುರಿ ನಾನೂರು..!
ಈ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ಒಂದೂ ಸಿಕ್ಸರ್ ಸಿಡಿಸಿಲ್ಲ. ಹಾಲಿ ವಿಶ್ವಕಪ್‌ನಲ್ಲಿ ಒಂದೂ ಸಿಕ್ಸರ್ ದಾಖಲಾಗದ 3ನೇ ಇನ್ನಿಂಗ್ಸ್ ಇದಾಗಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಲಕ್ನೋದಲ್ಲಿ ನಡೆದ ಪಂದ್ಯ ಹಾಗೂ ಪಾಕಿಸ್ತಾನ ಮತ್ತು ಭಾರತ ತಂಡದ ಅಹಮದಾಬಾದ್ ಪಂದ್ಯದಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಸಿಕ್ಸರ್ ಬಾರಿಸಲು ವಿಫಲವಾಗಿದ್ದವು,
ಅಗ್ನಿ ಅವಘಡಕ್ಕೆ ಬಲಿಯಾದ ಮಾಜಿ ಐಪಿಎಲ್ ಆಟಗಾರನ ಸಹೋದರಿ, ಅಳಿಯ..!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.