ವಿನಯ್ ಕುಮಾರ್ ಬೇಡ, ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಗಂಭೀರ್‌ಗೆ ಬಿಸಿಸಿಐ ಸಲಹೆ..!

By Naveen KodaseFirst Published Jul 11, 2024, 5:56 PM IST
Highlights

ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಆರ್ ವಿನಯ್ ಕುಮಾರ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಉತ್ಸುಕವಾಗಿಲ್ಲ ಎಂದು ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್, ಇದೀಗ ಟೀಂ ಇಂಡಿಯಾ ನೂತನ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಇದೀಗ ಗೌತಮ್ ಗಂಭೀರ್ ತಮಗೆ ಬೇಕಾದ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ ನೇಮಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಬಿಸಿಸಿಐ ಕೇಳಿಕೊಂಡಿದ್ದರು. ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ನೇಮಕವಾಗುತ್ತಿದ್ದಂತೆಯೇ, ಬೌಲಿಂಗ್ ಕೋಚ್ ಆಗಿ ಕನ್ನಡಿಗ ಆರ್ ವಿನಯ್ ಕುಮಾರ್ ಹಾಗೂ ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಅವರನ್ನು ಆಯ್ಕೆ ಮಾಡುವಂತೆ ಬಿಸಿಸಿಐ ಕೇಳಿಕೊಂಡಿದ್ದರು ಎಂದು ವರದಿಯಾಗಿತ್ತು.

ಇದೀಗ ಈ ವಿಚಾರವಾಗಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಆರ್ ವಿನಯ್ ಕುಮಾರ್ ಅವರನ್ನು ಆಯ್ಕೆ ಮಾಡುವುದಕ್ಕಿಂತ ಅನುಭವಿ ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್ ಇಲ್ಲವೇ ಲಕ್ಷ್ಮಿಪತಿ ಬಾಲಾಜಿ ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಬಿಸಿಸಿಐ, ಗಂಭೀರ್‌ಗೆ ಸಲಗೆ ನೀಡಿದೆ ಎಂದು ವರದಿಯಾಗಿದೆ. 

Latest Videos

"ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮಾಜಿ ವೇಗಿಗಳಾದ ಜಹೀರ್ ಖಾನ್ ಹಾಗೂ ಲಕ್ಷ್ಮಿಪತಿ ಬಾಲಾಜಿ ಅವರನ್ನು ಪರಿಗಣಿಸಿ. ಆರ್ ವಿನಯ್ ಕುಮಾರ್ ಅವರನ್ನು ಬೌಲಿಂಗ್ ಕೋಚ್ ಮಾಡಲು ಬಿಸಿಸಿಐ ಉತ್ಸುಕವಾಗಿಲ್ಲ" ಎಂದು ಮೂಲಗಳು ತಿಳಿಸಿವೆ ಎಂದು ANI ವರದಿ ಮಾಡಿದೆ. 

ಭಾರತ ಕ್ರಿಕೆಟ್ ತಂಡವು ಕಂಡ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಎನಿಸಿಕೊಂಡಿರುವ ಜಹೀರ್ ಖಾನ್, ಭಾರತ ಪರ 309 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 610 ವಿಕೆಟ್ ಕಬಳಿಸಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ, ಜಹೀರ್ ಖಾನ್, ಟೀಂ ಇಂಡಿಯಾ ಬೌಲಿಂಗ್ ಕೋಚ್‌ ರೇಸ್‌ನಲ್ಲಿ ಮುಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ತಮಿಳುನಾಡು ಮೂಲದ ಲಕ್ಷ್ಮಿಪತಿ ಬಾಲಾಜಿ ಭಾರತ ಪರ 8 ಟೆಸ್ಟ್ ಪಂದ್ಯಗಳಿಂದ 27 ವಿಕೆಟ್ ಹಾಗೂ 30 ಏಕದಿನ ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದಾರೆ. 

ಟೀಂ ಇಂಡಿಯಾದ ಈ ಹಿಂದಿನ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ನೇತೃತ್ವದಲ್ಲಿ ಟೀಂ ಇಂಡಿಯಾ ಬಲಾಢ್ಯ ಬೌಲಿಂಗ್ ಪಡೆ ರೂಪಿತವಾಗಿತ್ತು. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಪರಾಸ್ ಮಾಂಬ್ರೆ ಅವರ ಬೌಲಿಂಗ್ ಕೋಚ್ ಒಪ್ಪಂದಾವಧಿ ಕೂಡಾ ಮುಕ್ತಾಯವಾಗಿದೆ.

click me!