ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜತೆ ನನ್ನ ಹೋಲಿಕೆ ಸರಿಯಲ್ಲ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಆ.04): ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗುಣಗಾನ ಮಾಡಿದ್ದು, ಧೋನಿಯ ನಾಯಕತ್ವ, ಸಮಸ್ಥಿತಿ ಹಾಗೂ ಸ್ಟೈಲ್‌ಗೆ ಸರಿಸಾಟಿ ಮತ್ತೊಬ್ಬ ಆಟಗಾರನಿಲ್ಲ ಎಂದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಹಿರಿಯ ಆಟಗಾರ ಸುರೇಶ್ ರೈನಾ, ಮುಂಬೈಕರ್ ರೋಹಿತ್ ಅವರನ್ನು ಭವಿಷ್ಯದ ಭಾರತ ತಂಡದ ಧೋಇ ಎಂದು ಬಣ್ಣಿಸಿದ್ದರು. ಇದರ ಬೆನ್ನಲ್ಲೇ ರೋಹಿತ್ ಈ ಮಾತುಗಳನ್ನು ಹೇಳಿದ್ದಾರೆ.
ಸೀಮಿತ ಓವರ್‌ಗಳ ತಂಡದ ಉಪನಾಯಕರಾಗಿರುವ ರೋಹಿತ್ ಶರ್ಮಾ, ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ರೋಹಿತ್ ನಾಯಕತ್ವ ಶೈಲಿ ಧೋನಿ ಅವರಂತೆಯೇ ಇದೆ ಎಂದು ಸುರೇಶ್ ರೈನಾ ಹೇಳಿದ್ದರು.
ದುಬೈನಲ್ಲಿ IPL 2020 ಆಯೋಜನೆಗೆ CAIT ವಿರೋಧ; ಕೇಂದ್ರ ಸರ್ಕಾರಕ್ಕೆ ಪತ್ರ!
ಧೋನಿ ಒಬ್ಬ ಅಸಾಧಾರಣ ವ್ಯಕ್ತಿ. ಅವರಂತೆ ಮತ್ತೊಬ್ಬರಾಗಲು ಸಾಧ್ಯವೇ ಇಲ್ಲ. ಯಾರನ್ನೂ ಯಾರ ಜತೆಗೂ ಹೋಲಿಕೆ ಮಾಡಬಾರದು. ಎಲ್ಲರೂ ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನರಾಗಿರುತ್ತಾರೆ ಹಾಗೆಯೇ ತನ್ನದೇಯಾದ ಶಕ್ತಿ ಹಾಗೂ ದೌರ್ಬಲ್ಯವನ್ನು ಹೊಂದಿರುತ್ತಾರೆ ಎಂದು ರೋಹಿತ್ ಹೇಳಿದ್ದಾರೆ.
ರೈನಾ ಹಿಟ್‌ಮ್ಯಾನ್ ಅವರನ್ನು ಧೋನಿ ಜತೆ ಹೋಲಿಕೆ ಮಾಡಲು ಕಾರಣವೂ ಇದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ನಿದಾಸ್ ಟ್ರೋಫಿ(ಟಿ20) ಹಾಗೂ ಏಷ್ಯಾಕಪ್(ಏಕದಿನ) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಒಟ್ಟಾರೆ ರೋಹಿತ್ ಶರ್ಮಾ 10 ಏಕದಿನ ಹಾಗೂ 19 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, ಕ್ರಮವಾಗಿ 8 ಹಾಗೂ 15 ಬಾರಿ ತಂಡ ಗೆಲುವಿನ ನಗೆ ಬೀರಿದೆ.