ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲೇ ಪಾಕ್‌ಗೆ ಮುಖಭಂಗ; ಕಿವೀಸ್ ಎದುರು ಹೀನಾಯ ಸೋಲು!

Published : Feb 20, 2025, 07:18 AM ISTUpdated : Feb 20, 2025, 07:39 AM IST
ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲೇ ಪಾಕ್‌ಗೆ ಮುಖಭಂಗ; ಕಿವೀಸ್ ಎದುರು ಹೀನಾಯ ಸೋಲು!

ಸಾರಾಂಶ

ಹಾಲಿ ಚಾಂಪಿಯನ್ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್‌ಗಳಿಂದ ಸೋತಿದೆ. ನ್ಯೂಜಿಲೆಂಡ್ 5 ವಿಕೆಟ್‌ಗೆ 320 ರನ್ ಗಳಿಸಿತು, ಲೇಥಮ್ 118 ಮತ್ತು ಯಂಗ್ 107 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ 47.2 ಓವರ್‌ಗಳಲ್ಲಿ 260 ರನ್ ಗಳಿಸಲಷ್ಟೇ ಶಕ್ತವಾಯಿತು. ಕುಶ್ದಿಲ್ ಶಾ 69 ರನ್ ಗಳಿಸಿದರು. 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಯನ್ನು ಖಾಲಿ ಕ್ರೀಡಾಂಗಣ ಸ್ವಾಗತಿಸಿತು.

ಕರಾಚಿ: ಹಾಲಿ ಚಾಂಪಿಯನ್‌ ಪಾಕಿಸ್ತಾನ 9ನೇ ಆವೃತ್ತಿಯ ಚಾಂಪಿಯನ್ಸ್‌ ಟ್ರೋಫಿಯ ಮೊದಲ ಪಂದ್ಯದಲ್ಲೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಬುಧವಾರ ಮಾಜಿ ಚಾಂಪಿಯನ್‌ ನ್ಯೂಜಿಲೆಂಡ್ ವಿರುದ್ಧ 60 ರನ್‌ ಹೀನಾಯ ಸೋಲು ಕಂಡಿತು.

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌, ವಿಲ್‌ ಯಂಗ್‌ ಹಾಗೂ ಟಾಮ್‌ ಲೇಥಮ್‌ ಶತಕದ ನೆರವಿನಿಂದ 5 ವಿಕೆಟ್‌ಗೆ 320 ರನ್‌ ಕಲೆಹಾಕಿತು. ಡೆವೋನ್‌ ಕಾನ್‌ವೇ(10), ವಿಲಿಯಮ್ಸನ್‌(1) ಹಾಗೂ ಡ್ಯಾರಿಲ್‌ ಮಿಚೆಲ್‌(10) ವಿಫಲರಾದರೂ, 4ನೇ ವಿಕೆಟ್‌ಗೆ ಜೊತೆಯಾದ ಯಂಗ್‌-ಲೇಥಮ್‌ 118 ರನ್‌ ಸೇರಿಸಿದರು. ಯಂಗ್‌ 113 ಎಸೆತಗಳಲ್ಲಿ 107 ರನ್‌ ಸಿಡಿಸಿ ನಸೀಂ ಶಾಗೆ ವಿಕೆಟ್‌ ಒಪ್ಪಿಸಿದರೆ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತ ಲೇಥಮ್‌ 104 ಎಸೆತಗಳಲ್ಲಿ 118 ರನ್‌ ಗಳಿಸಿದರು. ಗ್ಲೆನ್‌ ಫಿಲಿಪ್ಸ್‌ ಸ್ಫೋಟಕ ಆಟವಾಡಿ 39 ಎಸೆತಗಳಲ್ಲಿ 61 ರನ್‌ ಸಿಡಿಸಿದರು. ನಸೀಂ ಶಾ, ಹ್ಯಾರಿಸ್ ರೌಫ್‌ ತಲಾ 2 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಪಡೆದಿದ್ದ ಪಾಕ್‌ಗೆ ಸ್ಫೋಟಕ ಆರಂಭ ಬೇಕಿತ್ತು. ಅದಕ್ಕೆ ಕಿವೀಸ್‌ ಅವಕಾಶ ಕೊಡಲಿಲ್ಲ. ಮೊದಲ 10 ಓವರಲ್ಲಿ ಕೇವಲ 22 ರನ್‌ ಗಳಿಸಿ 2 ವಿಕೆಟ್‌ ನಷ್ಟಕ್ಕೊಳಗಾದ ಪಾಕ್‌, ಬಳಿಕ ಒತ್ತಡದಲ್ಲಿಯೇ ಆಡಿತು. ಬಾಬರ್‌ ಆಜಂ 90 ಎಸೆತಕ್ಕೆ 64, ಆಘಾ ಸಲ್ಮಾನ್‌ 28 ಎಸೆತಕ್ಕೆ 42, ಫಖರ್‌ ಜಮಾನ್‌ 24 ರನ್‌ ಸಿಡಿಸಿ ಔಟಾದರು. ಕೊನೆಯಲ್ಲಿ ಕುಶ್ದಿಲ್‌ ಶಾ(49 ಎಸೆತಗಳಲ್ಲಿ 69) ಅಬ್ಬರಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. 47.2 ಓವರ್‌ಗಳಲ್ಲಿ 260 ರನ್‌ ಗಳಿಸಿ ಸೋಲೊಪ್ಪಿತು.

ಸ್ಕೋರ್‌: ನ್ಯೂಜಿಲೆಂಡ್‌ 50 ಓವರಲ್ಲಿ 320/5 (ಲೇಥಮ್‌ 118*, ಯಂಗ್‌ 107, ನಸೀಂ 2-64), ಪಾಕಿಸ್ತಾನ 47.2 ಓವರಲ್ಲಿ 260/10 (ಕುಶ್ದಿಲ್‌ 69, ಆಜಂ 64, ಒರೌರ್ಕೆ 47-3)

03ನೇ ಸೋಲು

ಪಾಕ್‌ ತಂಡ 11 ದಿನಗಳ ಅಂತರದಲ್ಲಿ ನ್ಯೂಜಿಲೆಂಡ್‌ ವಿರುದ್ಧ 3ನೇ ಬಾರಿ ಸೋಲನುಭವಿಸಿತು. ತ್ರಿಕೋನ ಸರಣಿಯಲ್ಲಿ 2 ಬಾರಿ ಸೋತಿತ್ತು.

ಟೂರ್ನಿಗೆ ಪಾಕಲ್ಲಿ ಖಾಲಿ ಕ್ರೀಡಾಂಗಣದ ಸ್ವಾಗತ

ಪಾಕಿಸ್ತಾನದಲ್ಲಿ ಬರೋಬ್ಬರಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ನಡೆಯುತ್ತಿದೆ. ಅಲ್ಲದೆ, ಟೂರ್ನಿಗಾಗಿಯೇ ಪಿಸಿಬಿ ನೂರಾರು ಕೋಟಿ ಹಣ ಸುರಿದು ಕ್ರೀಡಾಂಗಣಗಳನ್ನು ನವೀಕರಣಗೊಳಿಸಿದೆ. ಆದರೆ ಬುಧವಾರ ಪಂದ್ಯಕ್ಕೆ ನಿರೀಕ್ಷಿತ ಜನ ಸೇರಲಿಲ್ಲ. ಕ್ರೀಡಾಂಗಣದ ಹಲವು ಸ್ಟ್ಯಾಂಡ್‌ಗಳು ಖಾಲಿಯಾಗಿದ್ದವು. ‘ಭಾರತದಲ್ಲಿ ಮಹಿಳಾ ಐಪಿಎಲ್‌ಗೆ ಸಾವಿರಾರು ಜನ ಸೇರುತ್ತಾರೆ, ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಗೂ ಜನ ಇಲ್ಲ’ ಎಂದು ಸಾಮಾಜಿಕ ತಾಣಗಳಲ್ಲಿ ಭಾರೀ ಟ್ರೋಲ್‌ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!