* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲೆ ಕಣ್ಣಿಟ್ಟಿದೆ ನ್ಯೂಜಿಲೆಂಡ್
* ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್‌ಗೆ ಕಿವೀಸ್ ಪ್ರಮುಖ ಬೌಲರ್‌ಗಳಿಗೆ ವಿಶ್ರಾಂತಿ
* ಜೂನ್ 18ರಂದು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್
ಬರ್ಮಿಂಗ್‌ಹ್ಯಾಮ್(ಜೂ.09): ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ ವಿರುದ್ದ ಜೂನ್ 10ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್‌ನ ಪ್ರಮುಖ ಬೌಲರ್‌ಗಳಿಗೆ ರೆಸ್ಟ್ ನೀಡುವ ಸಾಧ್ಯತೆಯಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಜೂನ್ 18ರಿಂದ ಆರಂಭವಾಗಲಿರುವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಈಗಾಗಲೇ ನ್ಯೂಜಿಲೆಂಡ್ ತಂಡವು ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದೆ. ನಾಯಕ ಕೇನ್ ವಿಲಿಯಮ್ಸನ್ ಗಾಯದ ಭೀತಿ ಎದುರಿಸುತ್ತಿದ್ದಾರೆ. ಇನ್ನು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಸ್ಯಾಂಟ್ನರ್ ಕೈಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಇನ್ನು ನಾಯಕ ವಿಲಿಯಮ್ಸನ್ ಮೊಣಕೈ ನೋವು ಅನುಭವಿಸುತ್ತಿದ್ದಾರೆ.
ಟ್ರೆಂಟ್ ಬೌಲ್ಟ್ 2ನೇ ಟೆಸ್ಟ್‌ಗೆ ತಂಡಕೂಡಿಕೊಳ್ಳಲಿದ್ದಾರೆ: ಕಿವೀಸ್ ಕೋಚ್ ಸ್ಟೆಡ್
ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಲಭ್ಯರಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ತಂಡವು ಸುಲಭವಾಗಿ ಟಿಮ್ ಸೌಥಿ, ನೀಲ್ ವ್ಯಾಗ್ನರ್ ಅಥವಾ ಕೈಲ್ ಜೇಮಿಸನ್ ಈ ಮೂವರ ಪೈಕಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ.
ನಾವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗಮನದಲ್ಲಿಟ್ಟುಕೊಂಡಿದ್ದೇವೆ. ಹೀಗಾಗಿ ಮಹತ್ವದ ಪಂದ್ಯದಲ್ಲಿ ನಮ್ಮ ತಂಡದ ಪ್ರಮುಖ ಬೌಲರ್‌ಗಳು ಕಣಕ್ಕಿಳಿಯಲಿದ್ದಾರೆ. ನಮ್ಮ ತಂಡದಲ್ಲಿ ಮ್ಯಾಟ್ ಹೆನ್ರಿ, ಡೈರೆಲ್ ಮಿಚೆಲ್ ಅವರಂತಹ ಬೌಲರ್‌ಗಳು ಇದ್ದಾರೆ. ಈ ಬೌಲರ್‌ಗಳು ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಕೋಚ್ ಸ್ಟೆಡ್ ಹೇಳಿದ್ದಾರೆ.