
ಮುಂಬೈ(ಮಾ.20): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ರಾಜಕಾರಣಿ, ಪ್ರಖ್ಯಾತ ವೀಕ್ಷಕವಿವರಣೆಗಾರ ಎನಿಸಿಕೊಂಡಿರುವ ನವಜೋತ್ ಸಿಂಗ್ ಸಿಧು ಇದೀಗ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ವೀಕ್ಷಕವಿವರಣೆಗಾರನಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈಗಾಗಲೇ ಮಾಧ್ಯಮ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಸಿಧು ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳುವ ವಿಚಾರವನ್ನು ಖಚಿತಪಡಿಸಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ತಮ್ಮ ವಾಕ್ಚಾತುರ್ಯದ ಮೂಲಕವೇ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ನವಜೋತ್ ಸಿಂಗ್ ಸಿಧು ಇದೀಗ ದಶಕದ ಬಳಿಕ ವೀಕ್ಷಕವಿವರಣೆಗಾರನಾಗಿ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಭಾರತ vs ಆಸೀಸ್ ಮೊದಲ ಟೆಸ್ಟ್ ಪಂದ್ಯಕ್ಕೆ ಪರ್ತ್ ಆತಿಥ್ಯ?
ಇನ್ನು 2024ರ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಕೂಡಾ ಜರುಗಲಿದ್ದು, ಸಿಧು ಚುಟುಕು ಕ್ರಿಕೆಟ್ ವಿಶ್ವಕಪ್‌ನಲ್ಲೂ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇದೀಗ ಸಿಧು ತಾವು ಐಪಿಎಲ್‌ನಲ್ಲಿ ಒಂದು ಪಂದ್ಯದ ಕಾಮೆಂಟ್ರಿಗಾಗಿ ಸುಮಾರು 25 ಲಕ್ಷ ರುಪಾಯಿ ಸಂಭಾವನೆಯನ್ನು ಪಡೆಯುತ್ತಿದ್ದೆ ಎಂದು ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಐಪಿಎಲ್‌ನಲ್ಲಿ ಸ್ಮಾರ್ಟ್ ರಿಪ್ಲೆ ವ್ಯವಸ್ಥೆ..! ಏನಿದು ಹೊಸ ಟೆಕ್ನಾಲಜಿ? ಹೇಗೆ ಕೆಲಸ ಮಾಡುತ್ತೆ?
"ನಾನು ಕ್ರಿಕೆಟ್ ಬಿಟ್ಟ ಬಳಿಕ ವೀಕ್ಷಕವಿವರಣೆಗಾರನಾಗಿ ಸೇರಿಕೊಂಡೆ. ಇದನ್ನು ನಾನು ಯಶಸ್ವಿಯಾಗಿ ಮಾಡಬಲ್ಲೆ ಅಂದುಕೊಂಡಿರಲಿಲ್ಲ. ಮೊದಲಿಗೆ ಒಂದು ಐಪಿಎಲ್ ಟೂರ್ನಿಗೆ ವೀಕ್ಷಕವಿವರಣೆಗಾರನಾಗಿ ₹60 - ₹70 ಲಕ್ಷ ರುಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದೆ. ಇನ್ನು ಇದಾದ ಬಳಿಕ ಒಂದು ಪಂದ್ಯದ ವೀಕ್ಷಕವಿವರಣೆಗಾರಿಕೆಗೆ 25 ಲಕ್ಷ ರುಪಾಯಿ ಪಡೆಯುತ್ತಿದ್ದೆ. ಆದರೆ ಕೇವಲ ಹಣದಿಂದಷ್ಟೇ ತೃಪ್ತಿ ಸಿಗುವುದಿಲ್ಲ. ಈ ವೃತ್ತಿಯೇ ಒಂದು ಸುಂದರ ಅನುಭವ" ಎಂದು ಸಿಧು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.