
ನಾಗ್ಪುರ(ಫೆ.11): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲೇ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕರಾದ ಬಳಿಕ ಮೊದಲ ಟೆಸ್ಟ್ ಶತಕ ಸಿಡಿಸುವಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ.
ಇಲ್ಲಿನ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ, ಎರಡನೇ ದಿನದಾಟದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ, ಆಕರ್ಷಕ ಶತಕ ಸಿಡಿಸುತ್ತಿದ್ದಂತೆಯೇ ಅವರ ಪತ್ನಿ ರಿತಿಕಾ ಸಾಜ್ದೆ, ವಿಭಿನ್ನ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ. ನಾಗ್ಪುರ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ, 212 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 120 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು.
ರೋಹಿತ್ ಶರ್ಮಾ ಪತ್ನಿ ರಿತಿಕಾ ಸಾಜ್ದೆ ಅವರಿಗೆ ಬಹುಕಾಲದಿಂದಲೂ ತಮ್ಮ ಪತಿ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕೈಬೆರಳುಗಳನ್ನು ಕ್ರಾಸ್ ಮಾಡಿಟ್ಟುಕೊಳ್ಳುವ ಅಭ್ಯಾಸವಿದೆ. 2015ರಲ್ಲಿ ರೋಹಿತ್ ಶರ್ಮಾ ಹಾಗೂ ರಿತಿಕಾ ಸಾಜ್ದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ಬಳಿಕ ರೋಹಿತ್ ಶರ್ಮಾ ನೆರಳನ್ನೇ ಹಿಂಬಾಲಿಸುತ್ತಾ ಬಂದಿದ್ದಾರೆ. ಇದೇ ಥರ ರಿತಿಕಾ ಸಾಜ್ದೆ ತನ್ನದೇ ಆದ ಅಂಧವಿಶ್ವಾಸವನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಲಿಳಿದಾಗ ರಿತಿಕಾ ತಮ್ಮ ಕೈಬೆರಳುಗಳನ್ನು ಕ್ರಾಸ್ ಮಾಡಿಟ್ಟುಕೊಳ್ಳುವುದನ್ನು ಅಭಿಮಾನಿಗಳು ಸಾಕಷ್ಟು ಬಾರಿ ಗಮನಿಸಿದ್ದಾರೆ.
Nagpur Test: ಅಕ್ಷರ್ ಪಟೇಲ್ ದಿಟ್ಟ ಬ್ಯಾಟಿಂಗ್, ಭಾರತಕ್ಕೆ 223 ರನ್ ಮುನ್ನಡೆ
ಇದೀಗ ರಿತಿಕಾ ತಮಾಷೆಯಾಗಿಯೇ ತಮ್ಮ ಪತಿಯ ಶತಕವನ್ನು ವಿನೂತನವಾಗಿ ಸಂಭ್ರಮಿಸಿದ್ದಾರೆ. ಐ ಲವ್ ಯೂ ರೋಹಿತ್ ಶರ್ಮಾ, ಆದರೆ ದಯವಿಟ್ಟು ಬದಲಿ ಬೆರಳುಗಳನ್ನು ಕಳಿಸಿಕೊಡಿ ಎಂದು ರೋಹಿತ್ ಶರ್ಮಾ ಪತ್ನಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ
ನಾಯಕನಾಗಿ 3 ಮಾದರಿ ಶತಕ: ರೋಹಿತ್ ದಾಖಲೆ!
ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡ ಬಳಿಕ ಮೊದಲ ಬಾರಿ ಟೆಸ್ಟ್‌ನಲ್ಲಿ ಶತಕ ಬಾರಿಸಿದರು. ಇದರೊಂದಿಗೆ ನಾಯಕನಾಗಿ ಎಲ್ಲಾ ಮೂರು ಮಾದರಿಯಲ್ಲೂ ಶತಕ ಬಾರಿಸಿದ ಭಾರತದ ಮೊದಲ ಹಾಗೂ ವಿಶ್ವದ ನಾಲ್ಕನೇ ಆಟಗಾರ ಎನಿಸಿಕೊಂಡರು. ಪಾಕಿಸ್ತಾನದ ಬಾಬರ್ ಆಜಂ, ದ.ಆಫ್ರಿಕಾದ ಫಾಫ್ ಡು ಪ್ಲೆಸಿ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಈ ಸಾಧನೆ ಮಾಡಿದ ಇತರ ಆಟಗಾರರು.
400 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್:
ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಎಡಗೈ ಬ್ಯಾಟರ್‌ಗಳಾದ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಬಾರಿಸಿದ ಕೆಚ್ಚೆದೆಯ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 400 ರನ್ ಬಾರಿಸಿ ಸರ್ವಪತನ ಕಂಡಿದೆ. ಈ ಮೂಲಕ ಇನಿಂಗ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡವು 223 ರನ್‌ಗಳ ಭರ್ಜರಿ ಮುನ್ನಡೆ ಪಡೆದಿದೆ.
ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಗಿದ್ದು, 42 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಸಿಲುಕಿದೆ. ಅಶ್ವಿನ್ ತಾವೆಸೆದ ತಮ್ಮ ಪಾಲಿನ ಮೊದಲ ಓವರ್‌ನಲ್ಲೇ ಉಸ್ಮಾನ್ ಖವಾಜ(5) ಅವರನ್ನು ಪೆವಿಲಿಯನ್ನಿಗಟ್ಟಿದರೆ, ಮಾರ್ನಸ್ ಲಬುಶೇನ್(17) ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇನ್ನು ಡೇವಿಡ್ ವಾರ್ನರ್(10) ಅಶ್ವಿನ್‌ಗೆ ಎರಡನೇ ಬಲಿಯಾಗುವ ಮೂಲಕ ಪೆವಿಲಿಯನ್ ಸೇರಿದರು. ಮ್ಯಾಟ್ ರೆನ್‌ಶೋ(2) ಒಂದಂಕಿ ಮೊತ್ತಕ್ಕೆ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ ಆಸ್ಟ್ರೇಲಿಯಾ ತಂಡವು 181 ರನ್‌ಗಳ ಇನಿಂಗ್ಸ್ ಹಿನ್ನಡೆಯಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.