
ಶಾರ್ಜಾ(ಅ.24): ಆರಂಭಿಕ ಬ್ಯಾಟರ್ ಮೊಹಮ್ಮದ್ ನಯೀಮ್(62) ಹಾಗೂ ಮುಷ್ಫಿಕುರ್ ರಹೀಮ್(57*) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ರನ್ ಬಾರಿಸಿದ್ದು, ಶ್ರೀಲಂಕಾ ತಂಡಕ್ಕೆ ಕಠಿಣ ಗುರಿ ನೀಡಿದೆ.
ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಶನಕ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಇನಿಂಗ್ಸ್ ಆರಂಭಿಸಿದ ಮೊಹಮ್ಮದ್ ನಯೀಮ್ ಹಾಗೂ ಲಿಟನ್ ದಾಸ್ ಬಾಂಗ್ಲಾದೇಶಕ್ಕೆ ಎಚ್ಚರಿಕೆಯ ಆರಂಭ ಒದಗಿಸಿಕೊಟ್ಟರು. 5.5 ಓವರ್‌ಗಳಲ್ಲಿ ಈ ಜೋಡಿ 40 ರನ್ ಕಲೆಹಾಕಿತು. ಲಿಟನ್ ದಾಸ್ 16 ರನ್ ಬಾರಿಸಿ ಲಹಿರು ಕುಮಾರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಇನ್ನು ಶಕೀಬ್ ಅಲ್ ಹಸನ್ ಕೇವಲ 10 ರನ್ ಬಾರಿಸಿ ಕರುಣರತ್ನೆ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಬಾಂಗ್ಲಾದೇಶ 7.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 56 ರನ್ ಬಾರಿಸಿತ್ತು.
ನಯೀಮ್-ಮುಷ್ಫಿಕುರ್ ಜುಗಲ್ಬಂದಿ: ಕೇವಲ 16 ರನ್ ಅಂತರದಲ್ಲಿ 2 ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಒಳಗಾಗಿದ್ದ ಬಾಂಗ್ಲಾದೇಶ ತಂಡಕ್ಕೆ ನಯೀಮ್ ಹಾಗೂ ಮುಷ್ಫಿಕುರ್ ರಹೀಮ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಮೊಹಮ್ಮದ್ ನಯೀಮ್ 52 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 62 ರನ್ ಬಾರಿಸಿ ಭಿನುರಾ ಫರ್ನಾಂಡೋ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಚುರುಕಿನ ಬ್ಯಾಟಿಂಗ್ ನಡೆಸಿದ ಮುಷ್ಫಿಕುರ್ ರಹೀಮ್ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 57 ರನ್ ಬಾರಿಸಿದರು. ಕೊನೆಯಲ್ಲಿ ಅಫೀಫ್ ಹುಸೈನ್ (7) ಹಾಗೂ ನಾಯಕ ಮೊಹಮದುಲ್ಲಾ(10*) ಬಾರಿಸುವ ಮೂಲಕ ಉಪಯುಕ್ತ ಕಾಣಿಕೆ ನೀಡಿದರು.
ಶ್ರೀಲಂಕಾ ಪರ ಲಹಿರು ಕುಮಾರ, ಚಮಿಕ ಕರುಣರತ್ನೆ ಹಾಗೂ ಬಿನುರ ಫರ್ನಾಂಡೋ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಬ್ಬರಿಸಿದ್ದ ವನಿಂದು ಹಸರಂಗ ಯಾವುದೇ ವಿಕೆಟ್ ಕಬಳಿಸಲು ಯಶಸ್ವಿಯಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.