ಭಾಂಗ್ಲಾದೇಶ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಂ ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ವಿಚಾರವಾಗಿ ಬಹಿರಂಗವಾಗಿಯೇ ಕ್ಷಮೆ ಕೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಢಾಕ(ಡಿ.15): ಬಾಂಗ್ಲಾದೇಶದಲ್ಲಿ ಬಂಗಬಂಧು ಟಿ20 ಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿದ್ದು, ಕ್ಸಿಮೊ ಢಾಕಾ ಹಾಗೂ ಫಾರ್ಚೂನ್ ಬರಿಷಲ್ ನಡುವಿನ ಪಂದ್ಯ ಸುದ್ದಿಯ ಕೇಂದ್ರ ಬಿಂದುವಾಗಿದೆ. ಕ್ಸಿಮೊ ಢಾಕಾ ತಂಡದ ನಾಯಕ ಮುಷ್ಫಿಕುರ್ ರಹೀಂ ಕ್ಯಾಚ್ ಹಿಡಿಯುವ ವೇಳೆ ಸಹ ಆಟಗಾರ ನಸುಮ್ ಅಹಮ್ಮದ್ ಮೇಲೆ ಹಲ್ಲೆಗೆ ಯತ್ನಿಸಿದ ವಿಚಾರವಾಗಿ ಕೊನೆಗೂ ರಹೀಂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿದ್ದಾರೆ.
ಶಫಿಯುಲ್ಲಾ ಇಸ್ಲಾಂ ಬೌಲಿಂಗ್‌ನಲ್ಲಿ ಫಾರ್ಚೂನ್ ಬರಿಷಲ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಫಿಫ್ ಹೊಸೈನ್ ಫೈನ್ ಲೆಗ್‌ನತ್ತ ಬಾರಿಸಿದ ಚೆಂಡನ್ನು ನಸುಮ್ ಅಹಮ್ಮದ್ ಕ್ಯಾಚ್ ಹಿಡಿಯುವ ಯತ್ನದಲ್ಲಿರುವಾಗಲೇ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಂ ಮುನ್ನುಗ್ಗಿ ಕ್ಯಾಚ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಕ್ಯಾಚ್ ಹಿಡಿದ ಬೆನ್ನಲ್ಲೇ ಸಹ ಆಟಗಾರನ ಮೇಲೆ ಮುಷ್ಫಿಕುರ್ ರಹೀಂ ಚೆಂಡಿನಿಂದ ಹೊಡೆದೇ ಬಿಟ್ಟರೇನೋ ಎನ್ನುವಷ್ಟರ ಮಟ್ಟಿಗೆ ತಮ್ಮ ಸಿಟ್ಟನ್ನು ಪ್ರದರ್ಶಿಸಿದ್ದರು. ಜಂಟಲ್‌ಮ್ಯಾನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ತಂಡದ ಆಟಗಾರನ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು.
ಸಹ ಆಟಗಾರನ ಮೇಲೆ ಹಲ್ಲೆಗೆ ಯತ್ನಿಸಿದ ಬಾಂಗ್ಲಾ ಕ್ರಿಕೆಟಿಗ ರಹೀಂ
Calm down, Rahim. Literally. What a chotu 🐯🔥
(📹 ) pic.twitter.com/657O5eHzqn
ಈ ಎಲಿಮಿನೇಟರ್ ಪಂದ್ಯವನ್ನು ಮುಷ್ಫಿಕುರ್ ರಹೀಂ ನೇತೃತ್ವದ ಕ್ಸಿಮೊ ಢಾಕಾ ತಂಡ 9 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಆದರೆ ಪಂದ್ಯದ ವೇಳೆ ಮಾಡಿದ ಯಡವಟ್ಟನ್ನು ನಾಯಕ ಮುಷ್ಫಿಕುರ್ ರಹೀಂ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಒಪ್ಪಿಕೊಂಡಿದ್ದು, ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ.
ನಿನ್ನೆ ನಡೆದ ಘಟನೆಯ ಕುರಿತಂತೆ ಅಭಿಮಾನಿಮಾನಿಗಳಲ್ಲಿ ಹಾಗೂ ವೀಕ್ಷಕರಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸುತ್ತಿದ್ದೇನೆ. ನಾನು ಈಗಾಗಲೇ ಸಹ ಆಟಗಾರ ನಸುಮ್ ಅಹಮ್ಮದ್ ಬಳಿ ಪಂದ್ಯ ಮುಗಿಯುತ್ತಿದ್ದಂತೆ ಕ್ಷಮೆ ಕೋರಿದ್ದೇನೆ. ತಪ್ಪಾಗೋದು ಸಹಜ, ನಾನು ಕೂಡಾ ಮನುಷ್ಯನೇ. ಹಾಗಂತ ಈ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಈ ರೀತಿಯ ಘಟನೆ ಮೈದಾನದಲ್ಲಾಗಲಿ, ಮೈದಾನದಲ್ಲಾಚೆಯಲ್ಲಾಗಲಿ ಇನ್ನು ಮುಂದೆ ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ಮುಷ್ಫಿಕುರ್ ರಹೀಮ್ ಹೇಳಿದ್ದಾರೆ.