
- ಸುದರ್ಶನ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕಾಲ ಎಲ್ಲವನ್ನೂ ಮರೆಸಿ ಬಿಡುತ್ತದೆ. ಎಂಥದ್ದೇ ಗಾಯಕ್ಕಾದರೂ ಮದ್ದು ಅರೆಯುತ್ತದೆ. ಕಾಲಕ್ಕಿಂತ ದೊಡ್ಡ ನ್ಯಾಯಾಧೀಶ ಈ ಜಗತ್ತಿನಲ್ಲಿ ಮತ್ತೊಬ್ಬನಿರಲು ಸಾಧ್ಯವಿಲ್ಲ. ತಮಿಳುನಾಡಿನ ಮಾಜಿ ಕ್ರಿಕೆಟಿಗರೊಬ್ಬರು ಚಿನ್ನಸ್ವಾಮಿ ಕ್ರೀಡಾಂಗಣದ P1 ಸ್ಟ್ಯಾಂಡ್’ನಲ್ಲಿ ಕುಳಿತು ಆ ಕಥೆಯನ್ನು ಹೇಳಿದಾಗ ಒಂದು ಕ್ಷಣ ದಂಗಾಗಿ ಹೋಗಿದ್ದೆ.
‘’ನೀವು ಯಾವುದೋ ಸಿನಿಮಾ ಕಥೆ ಹೇಳುತ್ತಿಲ್ಲ ತಾನೇ..?’’ ನನ್ನ ಅಚ್ಚರಿಯ ಪ್ರಶ್ನೆಗೆ ಅವರು ಕೊಟ್ಟ ಉತ್ತರ. ‘’ಈ ವಿಚಾರ ಮೊದಲ ಬಾರಿ ನನ್ನ ಕಿವಿಗೆ ಬಿದ್ದಾಗ ನಿಮ್ಮ ಹಾಗೆ ನಾನೂ ಅಚ್ಚರಿ ಪಟ್ಟಿದ್ದೆ. ಹೀಗೂ ನಡೆಯಲು ಸಾಧ್ಯವೇ ಎಂಬ ಪ್ರಶ್ನೆ ನನ್ನಲ್ಲೂ ಮೂಡಿತ್ತು. ದುರದೃಷ್ಟವಶಾತ್, ಇದೇ ನಡೆದದ್ದು ಅವರಿಬ್ಬರ ಮಧ್ಯೆ’’ ಎಂದಿದ್ದರು.
ಇದು ತಮಿಳುನಾಡಿನ ಇಬ್ಬರು ಶ್ರೇಷ್ಠ ಕ್ರಿಕೆಟಿಗರ, ಬಾಲ್ಯಸ್ನೇಹಿತರ ಕಥೆ. ಅವರಲ್ಲಿ ಒಬ್ಬನ ಬದುಕಲ್ಲಿ ಬೀಸಿದ್ದ ಬಿರುಗಾಳಿಯ ಕಥೆ. ವಿಪರ್ಯಾಸ ಏನೆಂದರೆ ಆ ಬಿರುಗಾಳಿ ಎಬ್ಬಿಸಿದವನು ಪ್ರಾಣಕ್ಕೆ ಪ್ರಾಣವಾಗಿದ್ದ ಜೀವದ ಗೆಳೆಯ. ಆ ವಿಚಿತ್ರ ಘಟನೆ ನಡೆದದ್ದು 16-17 ವರ್ಷಗಳ ಹಿಂದೆ. ತನಗಾದ ಅನ್ಯಾಯದ ಬಗ್ಗೆ ದಿನೇಶ್ ಕಾರ್ತಿಕ್ ಒಮ್ಮೆಯೂ ಮಾತನಾಡಿವನಲ್ಲ. ಅನ್ಯಾಯವನ್ನು ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಲೂ ಯತ್ನಿಸಿದವನಲ್ಲ. ಮೋಸ ಮಾಡಿದ ಬಾಲ್ಯ ಸ್ನೇಹಿತನ ಕುರಿತಾಗಿ ಒಂದು ಶಬ್ದವನ್ನೂ ಆಡಿದವನಲ್ಲ.
ಹೌದು. ಅವನಿಗೆ ಜೀವನವೇ ಬೇಡ ಎನಿಸುವಂಥಾ ಆಘಾತವಾಗಿತ್ತು. ಆ ಕರಾಳ ನೆನಪುಗಳು ಅವನನ್ನು ಘಾಸಿಗೊಳಿಸುತ್ತಿದ್ದವು. ಇಂಚಿಂಚೂ ಸಾಯುತ್ತಿದ್ದ ಆ ಸಮಯದಲ್ಲಿ ದೇವತೆಯ ರೂಪದಲ್ಲಿ ಸಿಕ್ಕ ದೀಪಿಕಾ ಪಳ್ಳಿಕಲ್ ಎಲ್ಲವನ್ನೂ ಬದಲಿಸಿ ಬಿಟ್ಟಳು. ದಿನೇಶ್ ಕಾರ್ತಿಕ್ ಮರಳಿ ಮನುಷ್ಯನಾದ. ಸಮಯ ಉರುಳುತ್ತಲೇ ಇತ್ತು. ಮೋಸ ಮಾಡಿದ ಗೆಳೆಯನನ್ನು ದಿನೇಶ್ ಕಾರ್ತಿಕ್ ಕ್ಷಮಿಸಿ ಬಿಟ್ಟ. ಮಾತು ಬಿಟ್ಟಿದ್ದವನು ಮತ್ತೆ ಗೆಳೆಯನೊಂದಿಗೆ ಮಾತನಾಡಲು ಆರಂಭಿಸಿದ. ಈ 16 ವರ್ಷಗಳಲ್ಲಿ ದಿನೇಶ್ ಕಾರ್ತಿಕ್ ಸ್ನೇಹಿತನ ವಿಶ್ವಾಸ ದ್ರೋಹ ಬಗ್ಗೆ ಒಂದಕ್ಷರ ಮಾತನಾಡಿದ್ದರೆ ಕೇಳಿ.
ಅದು ಅವನು ಸ್ನೇಹಕ್ಕೆ ಕೊಟ್ಟ ಬೆಲೆ. ತಮಿಳುನಾಡು ಕ್ರಿಕೆಟ್ ಸಂಸ್ಥೆಯ 94ನೇ ವಾರ್ಷಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಮುರಳಿ ವಿಜಯ್ ತನ್ನ ಕ್ರಿಕೆಟ್ ಪ್ರಯಾಣದ ಬಗ್ಗೆ ಮಾತನಾಡುತ್ತಾ ದಿನೇಶ್ ಕಾರ್ತಿಕ್’ನನ್ನು ನೆನಪಿಸಿಕೊಂಡ. ಬಾಲ್ಯದ ಗೆಳೆಯನ ಬಗ್ಗೆ ಮಾತನಾಡುತ್ತಾ ಭಾವುಕನಾದ. ‘’ನಾನು ಈ ದಿನ ದಿನೇಶ್ ಕಾರ್ತಿಕ್ ಬಗ್ಗೆ ಮಾತನಾಡಲೇಬೇಕು. ಇದು ಸ್ವಲ್ಪ ವಿಲಕ್ಷಣ ಎನಿಸಬಹುದು. ಆದರೆ ಅವನನ್ನು ನಾನು ಬಾಲ್ಯದಿಂದಲೂ ಬಲ್ಲೆ. ತಮಿಳುನಾಡು ಕಂಡ ಶ್ರೇಷ್ಠ ಕೀಪರ್-ಬ್ಯಾಟರ್. ಅವನದ್ದು ಡೈನಾಮಿಕ್ ವ್ಯಕ್ತಿತ್ವ. ನನ್ನ ಆತ್ಮೀಯ ಸ್ನೇಹಿತನಾತ. ನಾನ್’ಸ್ಟ್ರೈಕ್’ನಲ್ಲಿ ನಿಂತು ಅವನ ಆಟವನ್ನು ಅಭಿಮಾನಿಯಾಗಿ ನೋಡಿದ್ದೆ. ಅದ್ಭುತ ಕ್ರಿಕೆಟಿಗ. ಅವನಿಗೇ ಅರಿವಿಲ್ಲದೆ ನನಗೆ ಸಾಕಷ್ಟು ಸಹಾಯ ಮಾಡಿದ್ದಾನೆ. ಅದಕ್ಕಾಗಿ ಅವನಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ’’ ಎನ್ನುತ್ತಾ ಕಣ್ಣೀರು ಹಾಕಿ ಬಿಟ್ಟ ಮುರಳಿ ವಿಜಯ್.
- Murali Vijay said Dinesh Kartik helped him a lot without his knowledge 😭
- First betray friend by taking away his wife then troll like thatpic.twitter.com/874TjVxbcV— Venky Mama (@venkymama100) July 5, 2026
ಅದು ಪಶ್ಚಾತ್ತಾಪದ ಕಣ್ಣೀರಾ..? ಗೊತ್ತಿಲ್ಲ. ಆ ಘಟನೆಯ ನಂತರ ಕನಿಷ್ಠ 10 ವರ್ಷಗಳ ಕಾಲ ಗೆಳೆಯನ ಜೊತೆ ದಿನೇಶ್ ಕಾರ್ತಿಕ್ ಮಾತು ಬಿಟ್ಟಿದ್ದ. ತಮಿಳುನಾಡು ಪರ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಾಗಲೂ ಮಾತಿಲ್ಲ, ಕಥೆಯಿಲ್ಲ. ಕ್ರೀಸ್ ಹಂಚಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದಾಗಲೂ ಮೌನ. ವಿಕೆಟ್ ಕೀಪಿಂಗ್ ವೇಳೆ ಪಕ್ಕದಲ್ಲೇ ಮೊದಲ ಸ್ಲಿಪ್’ನಲ್ಲಿ ಮುರಳಿ ವಿಜಯ್ ನಿಂತಾಗಲೂ ಮುಖ ನೋಡಿದವನಲ್ಲ ದಿನೇಶ್. ಸಮಯ-ಸಂದರ್ಭ ಇಬ್ಬರನ್ನೂ ಹತ್ತಿರ ತಂದರೂ ದಿನೇಶ್ ಕಾರ್ತಿಕ್ ದೂರವೇ ಇದ್ದ. ಕಾರಣ. ಅದು ಹಾಗೆಲ್ಲಾ ಸುಲಭವಾಗಿ ಮರೆಯುವಂಥಾ ದ್ರೋಹ ಆಗಿರಲಿಲ್ಲವಲ್ಲಾ..? ಎಲ್ಲವನ್ನೂ ದಾಟಿ ಹೊಸ ಬದುಕು ಕಟ್ಟಿಕೊಂಡವನ ಮುಂದೆ ಮುರಳಿ ವಿಜಯ್ ಬಂದು ನಿಂತಾಗಲೆಲ್ಲಾ ಆ ಕರಾಳ ಘಟನೆ ನೆನಪಾಗದೆ ಇರಲಾದರೂ ಹೇಗೆ ಸಾಧ್ಯ..?
ಮುರಳಿ ವಿಜಯ್ ಜೊತೆ ಮಾತು ಬಿಟ್ಟಿದ್ದ ದಿನೇಶ್ ಕಾರ್ತಿಕ್ ಮತ್ತೆ ಮಾತನಾಡಿದ್ದು ನಾಲ್ಕು ವರ್ಷಗಳ ಹಿಂದೆ. ತನ್ನ ಬದುಕಲ್ಲಿ ಬಿರುಗಾಳಿ ಎಬ್ಬಿಸಿದವನ ಬಗ್ಗೆ ಒಂದೂ ಕೆಟ್ಟ ಮಾತನ್ನೂ ಆಡದ ಗೆಳೆಯ ದಿನೇಶ್ ಕಾರ್ತಿಕ್. ಅದು ಅವನ ಒಳ್ಳೆತನ. ಮುರಳಿ ವಿಜಯ್ ಕಣ್ಣೀರು ಹಾಕಲು ಬಹುಶಃ ಆ ಒಳ್ಳೆತನವೇ ಕಾರಣವಿರಬಹುದು.
ಕೊನೆಗೆ ಗೆಲ್ಲುವುದು ಅದೊಂದೇ ಅಲ್ಲವೇ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.