
ಲಂಡನ್: 10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಆಸೀಸ್ 7 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ 7ನೇ ಬಾರಿ ಕಿರೀಟ ತನ್ನದಾಗಿಸಿಕೊಂಡಿತು. ಇಂಗ್ಲೆಂಡ್‌ನ 2ನೇ ಟ್ರೋಫಿ ಕನಸು ಭಗ್ನಗೊಂಡಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 4 ವಿಕೆಟ್ ನಷ್ಟದಲ್ಲಿ 150 ರನ್ ಕಲೆಹಾಕಿತು. ನಾಯಕಿ ಸ್ಕೀವರ್ ಬ್ರಂಟ್ 53 ಎಸೆತಕ್ಕೆ ಔಟಾಗದೆ 58 ರನ್ ಸಿಡಿಸಿದರು. ಕೊನೆಯಲ್ಲಿ ಮಿಂಚಿನ ಆಟವಾಡಿದ ಫ್ರೆಯಾ ಕೆಂಪ್ 28 ಎಸೆತಗಳಲ್ಲಿ ಔಟಾಗದೆ 44 ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ಇಂಗ್ಲೆಂಡ್ ನೀಡಿದ ಗುರಿ ಆಸೀಸ್‌ಗೆ ಸುಲಭ ತುತ್ತಾಯಿತು. ಸೋಫಿ ಮೋಲಿನ್ಯುಕ್ಸ್ ನಾಯಕತ್ವದ ತಂಡ 17.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಬೆಥ್ ಮೂನಿ 49 ಎಸೆತಕ್ಕೆ 64 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಫಿಬಿ ಲಿಚ್‌ಫೀಲ್ಡ್ 35 ಎಸೆತಕ್ಕೆ 48 ರನ್ ಸಿಡಿಸಿದರು.
ಇಂಗ್ಲೆಂಡ್ ಹಿರಿಯ ಆಟಗಾರ್ತಿ ಡ್ಯಾನಿ ವ್ಯಾಟ್ ಹಾಡ್ಜ್ ಈ ವಿಶ್ವಕಪ್‌ನ 7 ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ. ಈ ಮೂಲಕ ಮಹಿಳಾ ವಿಶ್ವಕಪ್ ಆವೃತ್ತಿಯೊಂದರಲ್ಲಿ 300 ರನ್ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ. 2020ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಬೆಥ್ ಮೂನಿ 6 ಪಂದ್ಯಗಳಲ್ಲಿ 259 ರನ್ ಗಳಿಸಿದ್ದರು. ಅದಕ್ಕೂ ಮುನ್ನ 2014ರ ವಿಶ್ವಕಪ್ ಟೂರ್ನಿಯಲ್ಲಿ ಮೆಗ್ ಲ್ಯಾನಿಂಗ್ 6 ಪಂದ್ಯಗಳಲ್ಲಿ 257 ರನ್ ಸಿಡಿಸಿದ್ದರು.
ಲಂಡನ್: 10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ ತೆರೆ ಕಂಡಿದೆ. ಜೂ.12ರಂದು ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭಗೊಂಡಿದ್ದ ಟೂರ್ನಿ ಭಾನುವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದೊಂದಿಗೆ ಕೊನೆಗೊಂಡಿತು.
ಇಂಗ್ಲೆಂಡ್ ಹಾಗೂ ವೇಲ್ಸ್‌ನ ಒಟ್ಟು 7 ಕ್ರೀಡಾಂಗಣಗಳಲ್ಲಿ 33 ಪಂದ್ಯಗಳು ನಡೆದವು. ಭಾರತ ಸೇರಿದಂತೆ 12 ತಂಡಗಳು ಪಾಲ್ಗೊಂಡವು. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಟೂರ್ನಿಗೆ ಕಾಲಿಟ್ಟಿದ್ದ ನ್ಯೂಜಿಲೆಂಡ್ ಹಾಗೂ ಚೊಚ್ಚಲ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದ ಭಾರತ ತಂಡ ಗುಂಪು ಹಂತದಲ್ಲೇ ಸೋತು ಹೊರಬಿದ್ದವು. ಏಕದಿನ ವಿಶ್ವಕಪ್‌ನ ಹಾಲಿ ಚಾಂಪಿಯನ್ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಇನ್ನೂ ಕೆಲ ಕಾಲ ಕಾಯುವಂತಾಯಿತು. ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ತಂಡಗಳು ಸೆಮಿಫೈನಲ್‌ನಲ್ಲಿ ಸೋಲನುಭವಿಸಿದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.