
ಬೆಂಗಳೂರು: ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ಸಂಜೆ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಧೋನಿ ಕೇವಲ ಐಪಿಎಲ್ ಆಡಲು ಮಾತ್ರ ಮೈದಾನಕ್ಕಿಳಿಯುತ್ತಿದ್ದಾರೆ. ಐಪಿಎಲ್ ಹೊರತುಪಡಿಸಿ, ಧೋನಿ ಹಲವು ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಬ್ಯುಸಿನೆಸ್ ಮೂಲಕವೂ ಕೋಟ್ಯಾಂತರ ರುಪಾಯಿ ಗಳಿಸುತ್ತಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿದ್ದಂತೆಯೇ ಬಿಸಿಸಿಐನಿಂದ ಮಾಜಿ ಕ್ರಿಕೆಟಿಗರಿಗೆ ಸಿಗುವ ಪೆನ್ಷನ್ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ.
ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಧೋನಿ, ಬಿಸಿಸಿಐನಿಂದ ಭರ್ಜರಿ ಪೆನ್ಷನ್ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. 2022ರಲ್ಲಿ ಬಿಸಿಸಿಐ ತನ್ನ ಮಾಜಿ ಆಟಗಾರರಿಗೆ ಪೆನ್ಷನ್ ಮೊತ್ತವನ್ನು ಪರಿಕ್ಷರಿಸುವ ಮೂಲಕ ಹೆಚ್ಚಿಸಿದೆ. ಧೋನಿ ಟೀಂ ಇಂಡಿಯಾ ಪರ 90 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಧೋನಿ 25+ ಟೆಸ್ಟ್ ಪಂದ್ಯಗಳನ್ನಾಡಿದ ಎಲೈಟ್ ಆಟಗಾರರ ಪಟ್ಟಿಗೆ ಬರುತ್ತಾರೆ. ಭಾರತ ಪರ 25+ ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರಿಗೆ ಬಿಸಿಸಿಐನಿಂದ ಪ್ರತಿ ತಿಂಗಳು 70,000 ರುಪಾಯಿ ಪೆನ್ಷನ್ ಬರುತ್ತದೆ. ಅದರಂತೆ 90 ಟೆಸ್ಟ್ ಪಂದ್ಯಗಳನ್ನಾಡಿರುವ ಧೋನಿಗೂ ಕೂಡಾ ₹70,000 ಪ್ರತಿ ತಿಂಗಳು ಪೆನ್ಷನ್ ಸಿಗುತ್ತಿದೆ.
ಧೋನಿಯ ಒಟ್ಟಾರೆ ವರ್ಷದ ಗಳಿಕೆಗೆ ಹೋಲಿಸಿದರೆ, ಬಿಸಿಸಿಐನಿಂದ ಸಿಗುತ್ತಿರುವ ಪೆನ್ಷನ್ ತೀರಾ ನಗಣ್ಯ ಎನಿಸುತ್ತದೆ. ಯಾಕೆಂದರೆ ಧೋನಿ, ಸಿಎಸ್‌ಕೆ ಪರವಾಗಿ ಒಂದು ಸೀಸನ್‌ಗೆ 4 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ. ಇದರ ಜತೆಗೆ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್, ಜಾಹಿರಾತು ಹಾಗೂ ಬಂಡವಾಳ ಹೂಡಿಕೆ, ಹೀಗೆ ಇನ್ನಿತರ ಮೂಲಗಳಿಂದ ಧೋನಿ ಕೋಟಿ ಕೋಟಿ ಸಂಭಾವನೆ ಗಳಿಸುತ್ತಾರೆ.
ಬಿಸಿಸಿಐ 2022ರಲ್ಲಿ ಪರಿಷ್ಕೃತ ಪೆನ್ಷನ್ ಸ್ಕೀಂ ಜಾರಿಗೆ ತಂದಿದೆ. ಇದರನ್ವಯ ಹಂತ ಹಂತದ ಪೆನ್ಷನ್ ಸ್ಕೀಂ ಜಾರಿಗೆ ತಂದಿದೆ. ಇದರ ಪ್ರಕಾರ ಭಾರತ ಪರ 25 ಟೆಸ್ಟ್ ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರಿಗೆ ಗರಿಷ್ಠ ತಿಂಗಳಿಗೆ 70,000 ರುಪಾಯಿ ಪೆನ್ಷನ್ ಸಿಗುತ್ತಿದೆ. ಇನ್ನು 25ಕ್ಕಿಂತ ಕಡಿಮೆ ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರಿಗೆ ತಿಂಗಳಿಗೆ 60,000 ರುಪಾಯಿ ಪೆನ್ಷನ್ ಸಿಗುತ್ತಿದೆ. ಇನ್ನು 25ರಿಂದ 49 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕ್ರಿಕೆಟಿಗರು ತಿಂಗಳಿಗೆ 30,000 ರುಪಾಯಿ ಹಾಗೂ 75+ ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಕ್ರಿಕೆಟಿಗರು ತಿಂಗಳಿಗೆ 45,000 ರುಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.
ಮಹೇಂದ್ರ ಸಿಂಗ್ ಧೋನಿ, 2004ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ 16 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಹಾಗೂ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಮೂರು ಮಾದರಿಯಲ್ಲಿ ಧೋನಿ ಭಾರತ ಪರ 538 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 16 ಶತಕ, 108 ಅರ್ಧಶತಕ ಸಹಿತ 17,266 ರನ್ ಸಿಡಿಸಿದ್ದಾರೆ. ಭಾರತ ಕಂಡ ಗ್ರೇಟೆಸ್ಟ್ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ಧೋನಿ, ವಿಕೆಟ್ ಹಿಂದೆ 195 ಸ್ಟಂಪೌಟ್ ಮಾಡಿ ಗಮನ ಸೆಳೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.