ಭಾರತೀಯನಾಗಿ ಹುಟ್ಟಿದ್ದೇ ನನ್ನ ಭಾಗ್ಯ: ಮತ್ತೆ ಹೃದಯ ಗೆದ್ದ ಕ್ಯಾಪ್ಟನ್‌ ಕೂಲ್ MS Dhoni

By Naveen KodaseFirst Published Aug 13, 2022, 11:43 AM IST
Highlights

75ನೇ ಸಾತಂತ್ರ್ಯ ಸಂಭ್ರಮೋತ್ಸವದಲ್ಲಿದೆ ಭಾರತ
ಸಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಡಿಪಿ ಬದಲಿಸಿ ಗಮನ ಸೆಳೆದ ಧೋನಿ
ಭಾರತೀಯನಾಗಿ ಹುಟ್ಟಿದ್ದೇ ನನ್ನ ಭಾಗ್ಯ ಎಂದ ಕ್ಯಾಪ್ಟನ್ ಕೂಲ್

ನವದೆಹಲಿ(ಆ.13): ಇಡೀ ದೇಶವೇ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮಾಚರಣೆಯಲ್ಲಿದೆ. ಇಡೀ ದೇಶವೇ ಒಂದು ರೀತಿ ತ್ರಿವರ್ಣದಲ್ಲಿ ಕಂಗೊಳಿಸುತ್ತಿದೆ. ಈಗ ದೇಶದ ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತಿದೆ. ದೇಶಭಕ್ತಿ ಗೀತೆಗಳು ಎಲ್ಲೆಲ್ಲೂ ಮೊಳಗುತ್ತಿವೆ. 75ನೇ ಈ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ದೇಶದಾದ್ಯಂತ ಹೊಸ ಸಂಚಲನ ಮೂಡಿಸಿದೆ. ಇದೆಲ್ಲದರ ನಡುವೆ ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಖಾತೆಯ ಡಿಪಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯವಾಗಿರುವ ವ್ಯಕ್ತಿಯಲ್ಲ. ಆದರೆ ಇದೀಗ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊಸ್ತಿಲಲ್ಲಿರುವಾಗ ಧೋನಿ ತಮ್ಮ ಡಿಪಿ ಬದಲಿಸುವ ಮೂಲಕ ಮಹತ್ತರ ಸಂದೇಶವನ್ನು ಸಾರಿದ್ದಾರೆ. ಹೌದು, ಧೋನಿ ಭಾರತದ ಬಾವುಟದ ಜತೆಗೆ ನಾನು ಭಾರತೀಯನಾಗಿ ಹುಟ್ಟಿದ್ದೇ ಒಂದು ಭಾಗ್ಯ ಎಂದು ಸಂಸ್ಕೃತ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

MS Dhoni changes his Instagram DP for Independence Day. pic.twitter.com/Ucznok9OFg

— Mufaddal Vohra (@mufaddal_vohra)

ಭಾರತ ಕ್ರಿಕೆಟ್‌ನ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವೇ ಇದೆ. ಆಧುನಿಕ ಕ್ರಿಕೆಟ್‌ ಕಂಡ ದಿಗ್ಗಜ ಆಟಗಾರರಲ್ಲಿ ಧೋನಿಗೆ ಅಗ್ರಸ್ಥಾನವಿದೆ. ಟೀಂ ಇಂಡಿಯಾ ನಾಯಕನಾಗಿ, ವಿಕೆಟ್‌ ಕೀಪರ್‌ ಆಗಿ ಹಾಗೂ ಮ್ಯಾಚ್‌ ಫಿನಿಶರ್ ಆಗಿ ಮಹೀ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2008ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿತ್ತು. ಇನ್ನು 2011ರಲ್ಲಿ ಭಾರತ ಕ್ರಿಕೆಟ್ ತಂಡವು ಶ್ರೀಲಂಕಾವನ್ನು ಮಣಿಸಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇನ್ನು 2013ರಲ್ಲಿ ಧೋನಿ ನೇತೃತ್ವದಲ್ಲೇ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದು ಬೀಗಿತ್ತು.

ಹೊಸ ಅವತಾರದಲ್ಲಿ ಕ್ಯಾಪ್ಟನ್ ಕೂಲ್‌ ಧೋನಿ ಕಮ್ಮಿಂಗ್​​

changed his Profile pic with Sanskrit, Hindi & English Massage :-
"I Am Blessed to be a Bhartiya"

True Patriot more respect for You.
JAi Hind.. pic.twitter.com/AQg0dzBCxB

— Jasmeen Kaur (@Jasmeen66480371)

ಎಂ ಎಸ್ ಧೋನಿ, 2004ರಲ್ಲಿ ಬಾಂಗ್ಲಾದೇಶ ವಿರುದ್ದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಭಾರತ ಪರ 350 ಏಕದಿನ ಪಂದ್ಯಗಳನ್ನಾಡಿ 50.58ರ ಬ್ಯಾಟಿಂಗ್ ಸರಾಸರಿಯಲ್ಲಿ 10,773 ರನ್ ಬಾರಿಸಿದ್ದಾರೆ. ಇನ್ನು 90 ಟೆಸ್ಟ್ ಪಂದ್ಯಗಳನ್ನಾಡಿ 38.09ರ ಸರಾಸರಿಯಲ್ಲಿ 4876 ಹಾಗೂ 98 ಟಿ20 ಪಂದ್ಯಗಳನ್ನಾಡಿ 1,617 ರನ್ ಬಾರಿಸಿದ್ದಾರೆ.

ಭಾರತೀಯ ಸೇನೆ ಜತೆ ಧೋನಿ ಅವಿನಾಭಾವ ಸಂಬಂಧ

ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ಭಾರತೀಯ ಸೇನೆ ಜತೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. 2011ರಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಧೋನಿ ಪಾತ್ರರಾಗಿದ್ದರು. ಧೋನಿ ಆಗಾಗ ಭಾರತೀಯ ಸೇನಾ ಕ್ಯಾಂಪ್‌ಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇನ್ನು 2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ 15 ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಪ್ರಾದೇಶಿಕ ಸೇನೆ ಜತೆ ಕಾರ್ಯ ನಿರ್ವಹಿಸುವ ಮೂಲಕ ಹಲವು ಯುವಕರಿಗೆ ಮಾದರಿಯಾಗಿದ್ದರು. 

click me!