
ಮುಖದ ಮೇಲಿದ್ದ ಕನ್ನಡಕ ಕಣ್ಣೀರನ್ನು ಮರೆ ಮಾಚಿದರೂ ಅವನ ಮುಖ ಚರ್ಯೆವೇ ಎಲ್ಲವನ್ನೂ ಹೇಳುತ್ತಿತ್ತು..! ಒಬ್ಬ ಹೋರಾಟಗಾರ.. ದೇಹದಿಂದ ಬೆವರಲ್ಲ, ರಕ್ತ ಸುರಿದರೂ ಲೆಕ್ಕಿಸದೆ ಆಡಿದವನು.. ತಂಡಕ್ಕಾಗಿ ಆತ್ಮವನ್ನೇ ಅರ್ಪಿಸಿದವನು.. ದಿನದ ಕೊನೆಯ ಎಸೆತವನ್ನು ಎಸೆಯುವಾಗಲೂ ಅವನು ಬಳಲಿದವನೇ ಅಲ್ಲ. ಅಂಥಾ ಕ್ರಿಕೆಟ್ ಯೋಧ ಮೌನವಾಗಿ ಕಣ್ಣೀರು ಹಾಕಿದ್ದಾನೆ. ದೇಹದ ಗಾಯವನ್ನು ಲೆಕ್ಕಿಸದೆ ಆಡಿದ್ದ ನಿಜ.. ಆದರೆ ಇಲ್ಲಿ ಗಾಯವಾಗಿರುವುದು ಅವನ ಮನಸ್ಸಿಗೆ..
ಟೆಸ್ಟ್ ಪಂದ್ಯದ ವಿಶ್ಲೇಷಣೆಗೆಂದು ಕುಳಿತಿದ್ದ ಅಜಿಂಕ್ಯ ರಹಾನೆ ಮತ್ತು ಮುರಳಿ ಕಾರ್ತಿಕ್, ಸಿರಾಜ್ ಕಣ್ಣೀರಿನ ಬಗ್ಗೆ ಮಾತನಾಡಿದರು.
ಮುರಳಿ ಕಾರ್ತಿಕ್: ‘‘ಮೊಹಮ್ಮದ್ ಸಿರಾಜ್ ಭಾವನಾತ್ಮಕ ವ್ಯಕ್ತಿ. ಆತ ಅಳುತ್ತಿರುವಂತೆ ಕಾಣುತ್ತಿದೆ’’
ಅಜಿಂಕ್ಯ ರಹಾನೆ: ‘‘ದೃಶ್ಯಗಳನ್ನು ನೋಡಿದರೆ ಖಂಡಿತವಾಗಿಯೂ ಹಾಗೆಯೇ ಅನ್ನಿಸುತ್ತದೆ’’
ಇದನ್ನು ಕೇಳಿದ ಮೇಲೆ ಮತ್ತೆ ಮತ್ತೆ ಆ ದೃಶ್ಯವನ್ನು ನೋಡಿದಾಗ ಅನ್ನಿಸಿದ್ದು.. ಹೌದು, ಸಿರಾಜ್ ಅಳುತ್ತಿದ್ದಾನೆ.. ಆದರೆ ಅದು ಯಾರಿಗೂ ಕೇಳುತ್ತಿಲ್ಲ.. ಕಾಣುತ್ತಿಲ್ಲ..
ಕ್ರಿಕೆಟ್ ಅವನ ಪಾಲಿಗೆ ಅದೆಷ್ಟು ಮುಖ್ಯ ಎಂಬುದರ ಸಂಕೇತ.. ಪ್ರತೀ ದಿನವೂ, ಪ್ರತೀ ಕ್ಷಣವೂ ಭಾರತಕ್ಕಾಗಿ ಆಡುತ್ತಲೇ ಇರಬೇಕು, ಭಾರತವನ್ನು ಗೆಲ್ಲಿಸುತ್ತಲೇ ಇರಬೇಕೆಂದು ಬಯಸುವವನು ಮೊಹಮ್ಮದ್ ಸಿರಾಜ್.. ಆದರೆ ಕ್ರಿಕೆಟ್ ಮೈದಾನದ ಯುದ್ಧಕುದುರೆಯನ್ನೇ ಕಟ್ಟಿ ಹಾಕಲಾಗಿದೆ.
The aggression..
The celebrations..
The relentless running in, wearing his heart on his sleeve, Mohammed Siraj has never missed a full away Test series since his Test debut at the MCG in December 2020!
ಮೊಹಮ್ಮದ್ ಸಿರಾಜ್’ನೊಳಗಿರುವುದು ಅದೆಂಥಾ ಕಿಚ್ಚೆಂದರೆ.. ಕಳೆದ ವರ್ಷ ಇಂಗ್ಲೆಂಡ್’ನಲ್ಲಿ ಅವನು ಆಡಿದ ಆಟವನ್ನೊಮ್ಮೆ ನೆನಪಿಸಿಕೊಳ್ಳಿ.. ಐದು ಪಂದ್ಯಗಳ ಟೆಸ್ಟ್ ಸರಣಿ.. 9 ಇನ್ನಿಂಗ್ಸ್’ಗಳು.. 185.3 ಓವರ್’ಗಳು.. 23 ವಿಕೆಟ್’ಗಳು.. ಆ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವನು ಅವನೇ.. ಒಬ್ಬ ವೇಗದ ಬೌಲರ್ ಒಂದೇ ಸರಣಿಯ ಐದೂ ಟೆಸ್ಟ್ ಪಂದ್ಯಗಳನ್ನು ಆಡುವುದೆಂದರೆ ಅದು ತಮಾಷೆಯ ಮಾತಲ್ಲ.. ಅದಕ್ಕೆ ಕೇವಲ ಫಿಟ್ನೆಸ್ ಇದ್ದರೆ ಸಾಲದು.. ಎದೆಯಲ್ಲೊಂದು ಕಿಚ್ಚಿರಬೇಕು.. ನಾನು ಭಾರತಕ್ಕಾಗಿ ಆಡುತ್ತಿದ್ದೇನೆ ಎಂಬ ಅಭಿಮಾನವನ್ನು ಎದೆಯ ಮೇಲಿಟ್ಟುಕೊಂಡಿರಬೇಕು.. ಆ ಐದು ಟೆಸ್ಟ್ ಪಂದ್ಯಗಳಲ್ಲಿ ಮೊಹಮ್ಮದ್ ಸಿರಾಜ್ ಕ್ರಿಕೆಟಿಗನಂತೆ ಕಾಣಲಿಲ್ಲ, ಕ್ರಿಕೆಟ್ ಸೈನಿಕನಂತೆ ಕಂಡಿದ್ದ.. ದೇಹಕ್ಕೆ ಗಾಯಗಳಾದರೂ ಅವನ ಕಿಚ್ಚಿನ ಮುಂದೆ ಯಾವುದೂ ನಿಲ್ಲಲಿಲ್ಲ. ಸರಣಿ 2-2ರಲ್ಲಿ ಸಮಬಲಗೊಳ್ಳಲು ಕಾರಣವಾಗಿದ್ದು ಸಿರಾಜನ ಆ ಅಪ್ರತಿಮ ಬೌಲಿಂಗ್..
ಓವಲ್ ಟೆಸ್ಟ್ ಪಂದ್ಯದಲ್ಲಿ ಭಾರತ 6 ರನ್’ಗಳ ರೋಚಕ ಜಯ ಸಾಧಿಸಿತ್ತಲ್ಲಾ.. ಆ ಪಂದ್ಯದಲ್ಲಿ ಸಿರಾಜ್ 9 ವಿಕೆಟ್ ಉರುಳಿಸಿದ್ದ. ಆ ಶಕ್ತಿ, ಉತ್ಸಾಹ, ದಣಿವೇ ಇಲ್ಲದ ದೇಹವನ್ನು ನೋಡಿ ಕ್ರಿಕೆಟ್ ದಿಗ್ಗಜರೇ ಅಚ್ಚರಿ ಪಟ್ಟಿದ್ದರು. ಜೊತೆಗಾರರು ಗಾಯ, ನೋವಿನ ನೆಪಗಳನ್ನೊಡ್ಡಿ ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡರೂ ಸಿರಾಜ್ ಮಾತ್ರ ದಣಿವರಿಯದ ದುರಂಧರನಂತೆ ಆಡಿದ್ದ. ಅಂಥಾ ಕ್ರಿಕೆಟ್ ಸೇನಾನಿಯನ್ನು ಹೊರಗಿಟ್ಟು ಆಡುತ್ತಿದ್ದಾರೆ.
‘‘ಈ WTC ಋತುವಿನಲ್ಲಿ ಮೊಹಮ್ಮದ್ ಸಿರಾಜ್ ಭಾರತ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್. ಅವನ ಬೌಲಿಂಗ್ ವೇಗ ಕಡಿಮೆಯಾಗಿಲ್ಲ. ನಿರಂತರವಾಗಿ 140 kph ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾನೆ. ಇಂಥಾ ಸನ್ನಿವೇಶಗಳಲ್ಲಿ ಒಬ್ಬ ಫೈಟರ್ ಬೇಕು. ಕಠಿಣ ಪರಿಸ್ಥಿತಿ ಎದುರಾದಾಗ ನಿರಂತರವಾಗಿ ಉತ್ತಮ ಬೌಲಿಂಗ್ ಮಾಡಬಲ್ಲ ಮತ್ತು ಇಡೀ ತಂಡಕ್ಕೆ ಸ್ಫೂರ್ತಿ ತುಂಬಬಲ್ಲ ಒಬ್ಬ ಆಟಗಾರನ ಅಗತ್ಯವಿರುತ್ತದೆ. ಅವನೇ ಇವನು. ಆದರೆ ಅವನನ್ನು ನ್ಯೂಜಿಲೆಂಡ್’ನಲ್ಲಿ ಬೆಂಚ್ ಕಾಯಿಸಲಾಗುತ್ತಿದೆ. ಅವನು ಇನ್ನೂ ಏನನ್ನು ಸಾಬೀತು ಮಾಡಬೇಕು..?’’
ಮೊಹಮ್ಮದ್ ಸಿರಾಜ್ ಯಾರಿಗೂ ಏನನ್ನೂ ಸಾಬೀತು ಮಾಡಬೇಕಿಲ್ಲ.. ಅವನೇನು ಎಂಬುದು ಕ್ರಿಕೆಟ್ ಜಗತ್ತಿಗೇ ಗೊತ್ತಿರುವ ಹೊತ್ತಲ್ಲಿ, 3-4 ಮಂದಿ ಸೇರಿಕೊಂಡು ಅವನಿಗೆ ಅನ್ಯಾಯ ಮಾಡುತ್ತಿದ್ದಾರೆ ಅಷ್ಟೇ..
2021-22: 35 ಪಂದ್ಯಗಳು
2023: 34 ಪಂದ್ಯಗಳು
2024: 22 ಪಂದ್ಯಗಳು
ಚಾಂಪಿಯನ್ಸ್ ಟ್ರೋಫಿ-2015: dropped
2025: 13 ಪಂದ್ಯಗಳು
2026: 9 ಪಂದ್ಯಗಳು
2020ರ ಡಿಸೆಂಬರ್’ನಲ್ಲಿ ಮೊಹಮ್ಮದ್ ಸಿರಾಜ್ ಟೆಸ್ಟ್ ಪದಾರ್ಪಣೆ ಮಾಡಿದ ನಂತರ SENA ದೇಶಗಳಲ್ಲಿ ಭಾರತ 9 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 2021ರಿಂದ SENA ದೇಶಗಳಲ್ಲಿ ಸಾಧಿಸಿದ ಪ್ರತೀ ಗೆಲುವುಗಳ ಹಿಂದೆ ಸಿರಾಜ್ ಇದ್ದ. ಈಗ ಸಿರಾಜ್’ನನ್ನು ಹೊರಗಿಟ್ಟಿರುವುದು ಯಾಕಾಗಿ..? ಯಾರಿಗಾಗಿ..? ಇಲ್ಲಿ ಮೆರಿಟ್’ಗಿಂತ favouritismಗೆ ಆದ್ಯತೆ. ಆಡಲೇಬೇಕಿದ್ದವನು ಬೆಂಚ್ ಕಾಯಿಸುತ್ತಿದ್ದಾನೆ, ಆಡುತ್ತಿರುವವರಿಗೆ ನೀರು ಸರಬರಾಜು ಮಾಡುತ್ತಿದ್ದಾನೆ.. ಇಲ್ಲೂ ಅವನದ್ದು ಅದೇ ಬದ್ಧತೆ, ಅದೇ ಉತ್ಸಾಹ. ಆದರೆ ಘಾಸಿಗೊಂಡಿರುವ ಮನಸ್ಸಿನ ನೋವು ಮುಖದಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ಮೊಹಮ್ಮದ್ ಸಿರಾಜ್’ಗೆ ಭಾರತ ತಂಡದಲ್ಲಿ ಆಗುತ್ತಿರುವುದು ಅನ್ಯಾಯವಲ್ಲ, ಅಪರಾಧ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.