
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ನೌರೀನ್ ಅವರನ್ನು 1987ರಲ್ಲಿ ವಿವಾಹವಾದರು. ಈ ಜೋಡಿ 1996ರವರೆಗೂ ಸುಂದರ ದಾಂಪತ್ಯ ಜೀವನ ನಡೆಸಿತ್ತು. 9 ವರ್ಷಗಳ ವೈವಾಹಿಕ ಜೀವನದ ಬಳಿಕ ಈ ಜೋಡಿ ಡಿವೋರ್ಸ್ ಪಡೆದುಕೊಂಡರು. ಇದೀಗ ನೌರೀನ್ ಮೂರನೇ ಮದುವೆಯಾಗುವ ಮೂಲಕ ಸುದ್ದಿಯಲ್ಲಿದ್ದಾರೆ. ಬನ್ನಿ ನಾವಿಂದು ಈ ಲೇಖನದಲ್ಲಿ ನೌರೀನ್ ಮದುವೆ, ಮರು ಮದುವೆ, ಡಿವೋರ್ಸ್ ಕುರಿತಂತೆ ತಿಳಿಯೋಣ ಬನ್ನಿ.
ನೌರೀನ್ 1987ರಲ್ಲಿ ದಿಗ್ಗಜ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ವಿವಾಹವಾಗುವಾಗ ಆಕೆಗೆ ಕೇವಲ 16 ವರ್ಷವಾಗಿತ್ತು. ಆ ವೇಳೆಗಾಗಲೇ ಅಜರುದ್ದೀನ್ ಹೆಸರಾಂತ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದರು. ನೌರೀನ್ ಒಂದೊಳ್ಳೆಯ ಗೃಹಿಣಿಯಾಗಿದ್ದರು. ಅಜರುದ್ದೀನ್ ದಾಂಪತ್ಯ ದ್ರೋಹದ ಹೊರತಾಗಿಯೂ ಆಕೆ, ಅಜರುದ್ದೀನ್‌ಗೆ ನಿಷ್ಠೆ ತೋರಿಸುತ್ತಿದ್ದಳು. ಇದರ ಹೊರತಾಗಿಯೂ ಈ ಜೋಡಿಯ ವಿಚ್ಛೇದನವಾಯಿತು. ಇವರಿಗೆ ಮೊಹಮ್ಮದ್ ಅಸಾದುದ್ದೀನ್ ಹಾಗೂ ಮೊಹಮ್ಮದ್ ಅಯಾಜುದ್ದೀನ್ ಎನ್ನುವ ಇಬ್ಬರು ಗಂಡು ಮಕ್ಕಳಿದ್ದರು. ದುರಾದೃಷ್ಟವಶಾತ್ ಅವರ ಎರಡನೇ ಮಗ ಮೊಹಮ್ಮದ್ ಅಯಾಜುದ್ದೀನ್ 2011ರಲ್ಲಿ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು.
ಮೊಹಮ್ಮದ್ ಅಜರುದ್ದೀನ್ ಅವರಿಂದ ವಿಚ್ಚೇದನಾ ಪಡೆದುಕೊಂಡ ಬಳಿಕ ನೌರೀನ್, ಕೆನಡಾ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಮದುವೆಯಾದರು. ಈಗ ಇದಾದ ಬಳಿಕ ಲಂಡನ್‌ನ ಮುಸ್ಲಿಂ ಸಮುದಾಯದ ದೊಡ್ಡ ನಾಯಕನಾಗಿ ಬೆಳೆದರು. ಈತನಿಂದ ನೌರೀನ್ ಒಂದು ಗಂಡು ಮಗುವಿಗೆ ತಾಯಿಯಾದರು.
ಮೊಹಮ್ಮದ್ ಅಜರುದ್ದೀನ್ ಅವರ ಜೀವನಾಧಾರಿತ ಚಿತ್ರ ಅಜರ್ ಸಿನಿಮಾದಲ್ಲಿ ನಟಿ ಪ್ರಾಚಿ ದೇಸಾಯಿ ನೌರೀನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ನೌರೀನ್ ಅವರನ್ನು ಭೇಟಿಯಾಗಿದ್ದು ಒಂದು ರೀತಿ ಭಾವನಾತ್ಮಕ ಕ್ಷಣವಾಗಿತ್ತು ಎಂದು ಪ್ರಾಚಿ ದೇಸಾಯಿ ಹೇಳಿದ್ದಾರೆ.
ಇತ್ತೀಚೆಗೆ ನೌರೀನ್ ಲಂಡನ್‌ನಲ್ಲಿರುವ ಉದ್ಯಮಿಯೊಬ್ಬರನ್ನು ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ನೌರೀನ್ ಅವರ ಮೂರನೇ ಗಂಡನಿಂದಲೂ ಒಂದು ಮಗುವನ್ನು ಪಡೆದುಕೊಂಡಿದ್ದಾರೆ. ಆ ಮಗನು ಮೊಹಮ್ಮದ್ ಅಸಾದುದ್ದೀನ್ ಅವರ ಮಲಸಹೋದರನಾಗಿದ್ದಾನೆ.
ಮೊಹಮ್ಮದ್ ಅಜರುದ್ದೀನ್ ಪುತ್ರನ ರಾಜಕೀಯ ಎಂಟ್ರಿ:
ಮೊಹಮ್ಮದ್ ಅಜರುದ್ದೀನ್ ಅವರ ಪುತ್ರ ಮುಹಮ್ಮದ್ ಅಸಾದುದ್ದೀನ್ ಅವರನ್ನು ಕಾಂಗ್ರೆಸ್ ಪಕ್ಷದ ತೆಲಂಗಾಣ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಕ ಮಾಡಲಾಗಿದೆ. ಇದು ಅವರ ರಾಜಕೀಯ ಪ್ರವೇಶವನ್ನು ಸೂಚಿಸುತ್ತದೆ.
ಇನ್ನೊಂದೆಡೆ ಮೊಹಮ್ಮದ್ ಅಜರುದ್ದೀನ್ 1996ರಲ್ಲಿ ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾದರು. ಈ ದಾಂಪತ್ಯ ಜೀವನ 14 ವರ್ಷಕ್ಕೆ ಕೊನೆಗೊಂಡಿತ್ತು. ಈ ಜೋಡಿ ಕೂಡಾ 2010ರಲ್ಲಿ ಡಿವೋರ್ಸ್ ಪಡೆದುಕೊಂಡಿತು.
ಹೈದರಾಬಾದ್ ಕ್ರಿಕೆಟ್ ಸಂಸ್ಥೆ (HCA) ವಿವಾದ: ಮೊಹಮ್ಮದ್ ಅಜರುದ್ದೀನ್ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮತ್ತು ಆರ್ಥಿಕ ಅವ್ಯವಹಾರದ ಆರೋಪಗಳು ಕೇಳಿಬಂದಿವೆ. ಇದರ ಪರಿಣಾಮವಾಗಿ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದ ಉತ್ತರ ಪೆವಿಲಿಯನ್ ಸ್ಟ್ಯಾಂಡ್‌ನಿಂದ ಅವರ ಹೆಸರನ್ನು ತೆಗೆದುಹಾಕಲು ಆದೇಶಿಸಲಾಗಿದೆ. ಈ ಕುರಿತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಅಕ್ಟೋಬರ್ 2024ರಲ್ಲಿ ಅವರನ್ನು ವಿಚಾರಣೆಗೆ ಕರೆಸಿತ್ತು. ಅಜರುದ್ದೀನ್ ವಿರುದ್ಧದ ಆರೋಪಗಳು ತನಿಖೆಯ ಹಂತದಲ್ಲಿದ್ದು, ಯಾವುದೇ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ.
ಅಜರುದ್ದೀನ್ ರಾಜಕೀಯ: ಮೊಹಮ್ಮದ್ ಅಜರುದ್ದೀನ್, 2009 ರಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು. 2009ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ನೇಮಕವಾದರು. ಆ ಬಳಿಕ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಅಜರ್, ತೆಲಂಗಾಣದಲ್ಲಿ ಕಾಂಗ್ರೆಸ್‌ನ ಪರವಾಗಿ ಅವರು ತಮ್ಮ ರಾಜಕೀಯ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.