ರೋಹಿತ್‌ ನಿವೃತ್ತಿಗೂ ಮೊದಲೇ ನಾಯಕತ್ವ ಬೇಡ ಅಂದಿದ್ದೆ : ಬೂಮ್ರಾ

Published : Jun 18, 2025, 04:12 AM IST
Bhumra

ಸಾರಾಂಶ

ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ತಮ್ಮನ್ನು ಬಿಸಿಸಿಐ ಪರಿಗಣಿಸಲಿಲ್ಲ ಎನ್ನುವ ಅಂತೆಕಂತೆಗಳಿಗೆ ವೇಗಿ ಜಸ್‌ಪ್ರೀತ್‌ ಬೂಮ್ರಾ ತೆರೆ ಎಳೆದಿದ್ದಾರೆ.

ನವದೆಹಲಿ : ಭಾರತ ಟೆಸ್ಟ್‌ ತಂಡದ ನಾಯಕತ್ವಕ್ಕೆ ತಮ್ಮನ್ನು ಬಿಸಿಸಿಐ ಪರಿಗಣಿಸಲಿಲ್ಲ ಎನ್ನುವ ಅಂತೆಕಂತೆಗಳಿಗೆ ವೇಗಿ ಜಸ್‌ಪ್ರೀತ್‌ ಬೂಮ್ರಾ ತೆರೆ ಎಳೆದಿದ್ದಾರೆ. ಸ್ವತಃ ತಾವೇ ನಾಯಕತ್ವದಿಂದ ದೂರ ಉಳಿದಿದ್ದಾಗಿ ಸ್ಪಷ್ಟಪಡಿಸಿದ್ದು, ನಾಯಕರಾಗಿದ್ದ ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸುವ ಮೊದಲೇ ತಮ್ಮನ್ನು ನಾಯಕತ್ವಕ್ಕೆ ಪರಿಗಣಿಸಬೇಡಿ ಎಂದು ಬಿಸಿಸಿಐಗೆ ತಿಳಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ದಿನೇಶ್‌ ಕಾರ್ತಿಕ್‌ ಜೊತೆ ಇಂಗ್ಲೆಂಡ್‌ನ ಸ್ಕೈ ಸ್ಪೋರ್ಟ್ಸ್‌ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಬೂಮ್ರಾ, ‘ನಾಯಕತ್ವದಿಂದ ನನ್ನನ್ನು ವಜಾಗೊಳಿಸಲಾಯಿತು ಎನ್ನುವುದೆಲ್ಲಾ ಸುಳ್ಳು. ಐಪಿಎಲ್‌ ಸಮಯದಲ್ಲೇ ನಾನು ನಾಯಕತ್ವದ ಬಗ್ಗೆ ನಿರ್ಧರಿಸಿದ್ದೆ.

ಕೆಲಸದ ಒತ್ತಡ ನಿರ್ವಹಣೆಯ ದೃಷ್ಟಿಯಿಂದ ನನಗೆ ನಾಯಕನ ಜವಾಬ್ದಾರಿ ವಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಈ ಸಂಬಂಧ ನನ್ನ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ನೀಡಿದ ವೈದ್ಯರು, ಶಸ್ತ್ರಚಿಕಿತ್ಸೆ ನಡೆಸಿದ ತಜ್ಞರು ಎಲ್ಲರೊಂದಿಗೆ ಚರ್ಚಿಸಿದ್ದೆ. ನನ್ನ ಮೇಲೆ ಎಷ್ಟು ಹೊರೆ ಬೀಳಲಿದೆ ಎನ್ನುವುದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವೈದ್ಯರು ಸೂಚಿಸಿದ್ದರು. ಎಲ್ಲರ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು, ಅಂತಿಮವಾಗಿ ನಾಯಕತ್ವ ಬೇಡ ಎನ್ನುವ ನಿರ್ಧಾರಕ್ಕೆ ಬಂದೆ. ಬಳಿಕ ಬಿಸಿಸಿಐಗೆ ನನ್ನ ನಿರ್ಧಾರ ತಿಳಿಸಿದೆ’ ಎಂದು ಬೂಮ್ರಾ ಹೇಳಿದ್ದಾರೆ.

3 ಟೆಸ್ಟ್‌ ಆಡುವೆ: ಇಂಗ್ಲೆಂಡ್‌ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಕನಿಷ್ಠ 3 ಟೆಸ್ಟ್‌ಗಳನ್ನು ಆಡುವುದಾಗಿ ಬೂಮ್ರಾ ಹೇಳಿಕೊಂಡಿದ್ದಾರೆ. ‘5 ಪಂದ್ಯಗಳನ್ನು ಆಡಲು ನನ್ನ ದೇಹ ಸ್ಪಂದಿಸಲಿದೆ ಎನ್ನುವ ಸಂಪೂರ್ಣ ನಂಬಿಕೆ ಇಲ್ಲ. ಕನಿಷ್ಠ 3 ಪಂದ್ಯಗಳನ್ನು ಆಡುವೆ. ಯಾವ ಮೂರು ಎಂದು ನಿರ್ಧರಿಸಿಲ್ಲ. ಆದರೆ ಮೊದಲ ಪಂದ್ಯಕ್ಕೆ ನಾನು ಸಿದ್ಧಗೊಂಡಿರುವೆ’ ಎಂದು ಬೂಮ್ರಾ ತಮ್ಮ ಫಿಟ್ನೆಸ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್‌ ಮೊದಲ ಟೆಸ್ಟ್‌ಗೆ ಬ್ಯಾಟಿಂಗ್‌ ಸ್ನೇಹಿ ಪಿಚ್‌?

ಲೀಡ್ಸ್‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ಗೆ ಇನ್ನು ಕೇವಲ 2 ದಿನ ಬಾಕಿ ಇದ್ದು, ಎರಡೂ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಮೊದಲ ಟೆಸ್ಟ್‌ಗೆ ಸಿದ್ಧಗೊಂಡಿರುವ ಪಿಚ್‌ ಬಗ್ಗೆ ಭಾರೀ ಕುತೂಹಲವಿದ್ದು, ಲೀಡ್ಸ್‌ ಮೈದಾನದ ಕ್ಯುರೇಟರ್‌ ಪ್ರಕಾರ ಪಿಚ್‌, ಬ್ಯಾಟರ್‌ಗಳಿಗೆ ನಿರೀಕ್ಷೆಗಿಂತ ಹೆಚ್ಚು ನೆರವು ನೀಡಬಲ್ಲದು ಎನ್ನಲಾಗುತ್ತಿದೆ. ಹೆಡಿಂಗ್ಲಿ ಓವಲ್‌ ಸರಣಿಯ ಮೊದಲ ಪಂದ್ಯಕ್ಕೇ ಆತಿಥ್ಯ ನೀಡುವುದು ಕಡಿಮೆ.

ಸಾಮಾನ್ಯವಾಗಿ ಇಲ್ಲಿ ಸರಣಿ 3ನೇ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಆದರೆ ಈ ಬಾರಿ 5 ಪಂದ್ಯಗಳ ಸರಣಿಯ ಮೊದಲ ಪಂದ್ಯವೇ ಇಲ್ಲಿ ನಡೆಯುತ್ತಿದ್ದು, ಪಿಚ್‌ ಸಿದ್ಧಗೊಳಿಸಲು ಕ್ಯುರೇಟರ್‌ಗಳು ವಿಶೇಷ ಕಾಳಜಿ ವಹಿಸಬೇಕಾಗಿದೆ.ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದು, ಪಿಚ್‌ ಸುದೀರ್ಘ ಅವಧಿಗೆ ತೇವಾಂಶ ಹಿಡಿದಿಟ್ಟುಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ.

ಅಲ್ಲದೇ ಸದ್ಯಕ್ಕೆ ಪಿಚ್‌ ಮೇಲೆ ಹೆಚ್ಚಿನ ಪ್ರಮಾಣದ ಹುಲ್ಲು ಇದ್ದರೂ, ಪಂದ್ಯದ ದಿನ ಬೆಳಗ್ಗೆ ಹುಲ್ಲನ್ನು ಕತ್ತರಿಸಿ 8 ಮಿ.ಮೀ.ಗಳಷ್ಟು ಬಿಡಲಾಗುತ್ತದೆ ಎಂದು ಕ್ಯುರೇಟರ್‌ ತಿಳಿಸಿದ್ದಾರೆ. ಹೀಗಾಗಿ, ಟಾಸ್‌ ಗೆಲ್ಲುವ ತಂಡ ಪಿಚ್‌ನಲ್ಲಿರುವ ತೇವಾಂಶದ ಲಾಭ ಪಡೆಯಲು ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳಬಹುದು ಎಂದು ವಿಶ್ಲೇಷಿಸಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ