
ಕೋಲ್ಕತಾ: 20 ತಂಡಗಳು ಪಾಲ್ಗೊಂಡಿದ್ದ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ 4 ತಂಡಗಳು ಸೆಮಿಫೈನಲ್ ಸ್ಥಾನವನ್ನು ಅಧಿಕೃತಗೊಳಿಸಿವೆ. ಸೂಪರ್-8 ಹಂತದ ಕೊನೆ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಗೆದ್ದ ಭಾರತ ತಂಡ, 4ನೇ ತಂಡವಾಗಿ ಸೆಮಿಫೈನಲ್ ತಲುಪಿತು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಕೆಲ ದಿನಗಳ ಹಿಂದೆಯೇ ಸೆಮೀಸ್ ಸ್ಥಾನ ಖಚಿತಪಡಿಸಿದ್ದರೆ, ನ್ಯೂಜಿಲೆಂಡ್ ಶನಿವಾರ ಸೆಮೀಸ್ ತಲುಪಿತ್ತು.
ಸೂಪರ್-8ರ ಗುಂಪು-1ರಲ್ಲಿ 3 ಪಂದ್ಯಗಳಲ್ಲೂ ಗೆದ್ದ ದಕ್ಷಿಣ ಆಫ್ರಿಕಾ ಹಾಗೂ ಗುಂಪು-2ರಲ್ಲಿ 2ನೇ ಸ್ಥಾನ ಪಡೆದ ನ್ಯೂಜಿಲೆಂಡ್ ತಂಡಗಳು ಮೊದಲ ಸೆಮಿಫೈನಲ್‌ನಲ್ಲಿ ಸೆಣಸಾಡಲಿವೆ. ಈ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ಗುಂಪು-2ರಲ್ಲಿ 3 ಪಂದ್ಯಗಳಲ್ಲೂ ಜಯಗಳಿಸಿದ ಇಂಗ್ಲೆಂಡ್ ಹಾಗೂ ಗುಂಪು-2ರಲ್ಲಿ 2 ಪಂದ್ಯ ಗೆದ್ದು 2ನೇ ಸ್ಥಾನಿಯಾದ ಭಾರತ ಎರಡನೇ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಮಾ.8ರಂದು ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ದಿನಾಂಕ ಪಂದ್ಯ ತಂಡಗಳು ಸ್ಥಳ ಸಮಯ
ಮಾ.4 1ನೇ ಸೆಮಿ ಆಫ್ರಿಕಾ-ಕಿವೀಸ್ ಕೋಲ್ಕತಾ ಸಂಜೆ 7
ಮಾ.5 2ನೇ ಸೆಮಿ ಭಾರತ-ಇಂಗ್ಲೆಂಡ್ ಮುಂಬೈ ಸಂಜೆ 7
ಮಾ.8 ಫೈನಲ್ - ಅಹಮದಾಬಾದ್ ಸಂಜೆ 7
ಮುಂಬೈ: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿದ್ದರಿಂದ ಟೂರ್ನಿಯ 2 ಸೆಮಿಫೈನಲ್ ಹಾಗೂ ಫೈನಲ್‌ಗೆ ಭಾರತವೇ ಆತಿಥ್ಯ ವಹಿಸಲಿದೆ.
ಐಸಿಸಿ ಹೈಬ್ರಿಡ್ ನಿಯಮದ ಪ್ರಕಾರ, ಪಾಕ್ ಸೆಮಿಫೈನಲ್ ತಲುಪಿದ್ದರೆ ಆ ಪಂದ್ಯ ಕೊಲಂಬೊದಲ್ಲಿ ನಡೆಯಬೇಕಿತ್ತು. ಲಂಕಾ ಸೆಮೀಸ್ ತಲುಪಿ, ಭಾರತದ ಹೊರತಾಗಿ ಬೇರೊಂದು ತಂಡದ ವಿರುದ್ಧ ಆಡಬೇಕಿದ್ದರೂ ಆ ಪಂದ್ಯ ಕೂಡಾ ಕೊಲಂಬೋದಲ್ಲಿ ನಡೆಯುತ್ತಿತ್ತು. ಆದರೆ ಲಂಕಾ, ಪಾಕ್ ನಾಕೌಟ್ ತಲುಪದ ಕಾರಣ ಸೆಮೀಸ್ ಆತಿಥ್ಯ ಕೊಲಂಬೊದ ಕೈತಪ್ಪಿದೆ. ಮಾ.4ರಂದು ಮೊದಲ ಸೆಮಿಫೈನಲ್ ಕೋಲ್ಕತಾದಲ್ಲಿ, ಮಾ.5ಕ್ಕೆ 2ನೇ ಸೆಮಿಫೈನಲ್‌ಗೆ ಮುಂಬೈನಲ್ಲಿ ನಡೆಯಲಿದೆ. ಮಾ.8ರಂದು ಅಹಮದಾಬಾದ್‌ನಲ್ಲಿ ಫೈನಲ್ ನಡೆಯಲಿದೆ. ಒಂದು ವೇಳೆ ಪಾಕ್ ಫೈನಲ್‌ಗೇರಿದ್ದರೆ ಕೊಲಂಬೊದಲ್ಲಿ ಫೈನಲ್ ನಡೆಯುತ್ತಿತ್ತು.
ನವದೆಹಲಿ: ಕಳೆದ ಬಾರಿ ರನ್ನರ್-ಅಪ್ ದಕ್ಷಿಣ ಆಫ್ರಿಕಾ ತಂಡ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸತತ 7ನೇ ಗೆಲುವು ದಾಖಲಿಸಿದೆ. ಗುಂಪು ಹಂತದಲ್ಲಿ ಎಲ್ಲಾ 4 ಪಂದ್ಯ ಗೆದ್ದಿದ್ದ ದ.ಆಫ್ರಿಕಾ, ಸೂಪರ್-8 ಹಂತದ 3 ಪಂದ್ಯಗಳಲ್ಲೂ ಜಯಗಳಿಸಿತು. ಭಾನುವಾರ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಹರಿಣ ಪಡೆ 5 ವಿಕೆಟ್‌ನಿಂದ ಗೆದ್ದಿತು. ಸಿಕಂದರ್ ರಝಾ ಆಲ್ರೌಂಡ್ ಸಾಹಸದ ಹೊರತಾಗಿಯೂ ಜಿಂಬಾಬ್ವೆಗೆ ಸೂಪರ್-8 ಹಂತದಲ್ಲಿ ಒಂದರಲ್ಲೂ ಗೆಲುವು ಸಿಗಲಿಲ್ಲ.
ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 7 ವಿಕೆಟ್‌ಗೆ 153 ರನ್ ಗಳಿಸಿತು. ಸಿಕಂದರ್(43 ಎಸೆತಕ್ಕೆ 73) ಹೊರತುಪಡಿಸಿ ಇತರರು ವಿಫಲರಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ದ.ಆಫ್ರಿಕಾ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆದ್ದಿತು. ಡೆವಾಲ್ಡ್ ಬ್ರೆವಿಸ್ 18 ಎಸೆತಕ್ಕೆ 42, ಜಾರ್ಜ್ ಲಿಂಡೆ 21 ಎಸೆತಕ್ಕೆ ಔಟಾಗದೆ 30, ರಿಕೆಲ್ಟನ್ 31 ರನ್ ಗಳಿಸಿದರು. ಸೋತ ಹೊರತಾಗಿಯೂ ಜಿಂಬಾಬ್ವೆಯ ಸಿಕಂದರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.