
ಬೆಂಗಳೂರು(ಮಾ.24): ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದ್ದು, ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ದೇಶದ 12 ಪ್ರಮುಖ ನಗರಗಳಲ್ಲಿ ನಡೆಯಲಿದೆ. ಆದರೆ 2011ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದ ಮೊಹಾಲಿ, ಈ ಬಾರಿಯ ವಿಶ್ವಕಪ್ ಟೂರ್ನಿಗೆ ಆತಿಥ್ಯ ಪಡೆಯಲು ವಿಫಲವಾಗಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಇನ್ನು ಇದೇ ಮೊಹಾಲಿ ಮೈದಾನದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮಹತ್ವದ ಲೀಗ್ ಪಂದ್ಯವು ನಡೆದಿತ್ತು. ಇಷ್ಟೆಲ್ಲಾ ಮಹತ್ವದ ಪಂದ್ಯಗಳಿಗೆ ಆತಿಥ್ಯವಹಿಸಿ ಸೈ ಎನಿಸಿಕೊಂಡಿದ್ದ ಮೊಹಾಲಿ ಸ್ಟೇಡಿಯಂ, ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ ಶಾರ್ಟ್‌ಲಿಸ್ಟ್ ಆದ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಯಾಕೆ ಹೀಗೆ ಎನ್ನುವುದನ್ನು ನೋಡುತ್ತಾ ಹೋದರೆ, ಕ್ರಿಕೆಟ್ ಅಭಿಮಾನಿಗಳು ಒಂದು ಕ್ಷಣ ಅಚ್ಚರಿಗೊಳಗಾಗುವುದು ಸಹಜ.
ಇದಕ್ಕೂ ಮೊದಲು ಯಾವೆಲ್ಲಾ ನಗರಗಳು ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆತಿಥ್ಯಕ್ಕೆ ಶಾರ್ಟ್‌ಲಿಸ್ಟ್ ಆಗಿವೆ ಎನ್ನುವುದನ್ನು ನೋಡುವುದಾದರೇ, ಖ್ಯಾತ ಕ್ರಿಕೆಟ್ ವೆಬ್‌ಸೈಟ್ EspnCricinfo ವರದಿಯ ಪ್ರಕಾರ, ಅಹಮದಾಬಾದ್, ಬೆಂಗಳೂರು, ಚೆನ್ನೈ, ಡೆಲ್ಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತಾ, ಲಖನೌ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಟೂರ್ನಿಯು ನಡೆಯುವ ಸ್ಥಳಗಳ ಕುರಿತಂತೆ ಬಿಸಿಸಿಐ ಇನ್ನಷ್ಟೇ ಅಧಿಕೃತ ಮಾಹಿತಿಯನ್ನು ಪ್ರಕಟಿಸಬೇಕಿದೆ.
ಒಟ್ಟು 10 ಬಲಾಢ್ಯ ಕ್ರಿಕೆಟ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳ ಮನ ತಣಿಸಲು ವೇದಿಕೆ ಸಜ್ಜಾಗುತ್ತಿದೆ. 2019ರಲ್ಲಿ ನಡೆದ ನಡೆದ ರೀತಿಯಲ್ಲಿಯೇ ರೌಂಡ್ ರಾಬಿನ್ ಮಾದರಿಯಲ್ಲಿ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ.
ಶಾರ್ಟ್‌ಲಿಸ್ಟ್ ಪಟ್ಟಿಯಲ್ಲಿ ಮೊಹಾಲಿಗೆ ಯಾಕಿಲ್ಲ ಸ್ಥಾನ?
ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪಿಸಿರುವ ಐಎಸ್ ಬಿಂದಾ ಸ್ಟೇಡಿಯಂ ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿಲ್ಲ ಎನ್ನುವುದು ಅಚ್ಚರಿಯೆನಿಸಿದರೂ ಸತ್ಯ. ಇತ್ತೀಚೆಗಿನ ದಿನಗಳಲ್ಲಿ ಇಲ್ಲಿ ಖಲೀಸ್ಥಾನಿ ಆಂದೋಲನ ಜೋರಾಗಿಯೇ ನಡೆಯುತ್ತಿದೆ. ಇನ್ನು ಇಲ್ಲಿ ಪಾರ್ಕಿಂಗ್ ಸಮಸ್ಯೆ ಕೂಡಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಷ್ಟೇ ಅಲ್ಲದೇ ಈ ಕ್ರಿಕೆಟ್ ಸಂಸ್ಥೆಯ ಮೇಲೆ ಭ್ರಷ್ಟಾಚಾರದ ಆರೋಪವು ಜೋರಾಗಿಯೇ ಕೇಳಿಬಂದಿದೆ.
ಇದನ್ನು ವಿವರವಾಗಿ ನೋಡುವುದಾದರೇ..
35 ಸಾವಿರ ಮಂದಿ ಮೈದಾನದಲ್ಲಿ ಏಕಕಾಲದಲ್ಲಿ ಕುಳಿತು ಪಂದ್ಯ ವೀಕ್ಷಿಸಬಹುದು:
ಮೊಹಾಲಿಯಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಕಾರ್ಯ 2017-18ರಿಂದಲೇ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ನೂತನ ಸ್ಟೇಡಿಯಂ 2019-20ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ನಡುವೆ ಕೊರೋನಾ ಹೆಮ್ಮಾರಿ ವಕ್ಕರಿಸಿದ್ದರಿಂದ ಕಾಮಗಾರಿಗೆ ತೊಡಕುಂಟಾಯಿತು. ಸದ್ಯ ಸ್ಟೇಡಿಯಂನ 90-95% ಕಾಮಗಾರಿಯು ಸಂಪೂರ್ಣವಾಗಿದೆ. ಆದರೆ ಈ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜಿಸಲು 2024ರವರೆಗೆ ಕಾಯಬೇಕಿದೆ.
ICC ODI World Cup 2023: ಫೈನಲ್‌ಗೆ ಮೋದಿ ಸ್ಟೇಡಿಯಂ ಆತಿಥ್ಯ, 12 ನಗರಗಳಲ್ಲಿ ನಡೆಯಲಿದೆ ಕ್ರಿಕೆಟ್ ಮಹಾ ಸಂಗ್ರಾಮ
ಇನ್ನು ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಇದೇ ವರ್ಷದ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಜರುಗುವುದರಿಂದ, ಹೊಸ ಸ್ಟೇಡಿಯಂನಲ್ಲಿ ವಿಶ್ವಕಪ್ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ. ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಟೇಡಿಯಂ, ಈಗಿರುವ ಸ್ಟೇಡಿಯಂಗಿಂತ 10 ಕಿಲೋಮೀಟರ್ ದೂರದಲ್ಲಿದ್ದು, ತೋಗಾ ಮತ್ತು ತೀರಾ ಎಂಬ ಎರಡು ಹಳ್ಳಿಯಲ್ಲಿ ಸ್ಟೇಡಿಯಂ ನಿರ್ಮಿಸಲಾಗಿದೆ. ಈ ಸ್ಟೇಡಿಯಂಗೆ ಮಹರಾಜ ಯದುವಿಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಂ ಎಂದು ಹೆಸರಿಡಲಾಗಿದೆ. ಈ ಸ್ಟೇಡಿಯಂನಲ್ಲಿ 35-40 ಸಾವಿರ ಮಂದಿ ಏಕಕಾಲದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ.
ಹಳೆ ಸ್ಟೇಡಿಯಂನಲ್ಲಿ ಯಾಕೆ ನಡೆಸಲು ಸಾಧ್ಯವಿಲ್ಲ..?:
ಹೊಸ ಸ್ಟೇಡಿಯಂ ನಿರ್ಮಾಣವಾಗುತ್ತಿದೆ ಸರಿ, ಆದರೆ ಹಳೆ ಸ್ಟೇಡಿಯಂನಲ್ಲಿ ಪಂದ್ಯ ನಡೆಸಬಹುದಲ್ವಾ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಆದರೆ ಹಳೆ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಅಡ್ಡಿಯಾಗಿರುವುದೇ ಪಾರ್ಕಿಂಗ್ ಸಮಸ್ಯೆ. ಈ ಕಾರಣದಿಂದಾಗಿಯೇ ಕಳೆದ 4 ವರ್ಷಗಳಿಂದ ಇಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ನಡೆಸಲು ಸಾಧ್ಯವಾಗಿಲ್ಲ. ಹಳೆ ಸ್ಟೇಡಿಯಂ ನಗರದ ಮಧ್ಯಭಾಗದಲ್ಲಿ ಇರುವುದರಿಂದ ಪಾರ್ಕಿಂಗ್ ಸಮಸ್ಯೆ ಪಂಜಾಜ್ ಕ್ರಿಕೆಟ್ ಸಂಸ್ಥೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೊದಲು ಈ ಸಮಸ್ಯೆಯಿರಲಿಲ್ಲ, ಆದರೆ ನಗರ ಬೆಳೆದಂತೆಲ್ಲಾ ಟ್ರಾಫಿಕ್ ಸಮಸ್ಯೆ ದೊಡ್ಡದಾಗಿ ಕಾಡಲಾರಂಭಿಸಿದೆ.
ಕ್ರಿಕೆಟ್ ಪಂದ್ಯದ ವೇಳೆ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಬಿಡುತ್ತದೆ. ಹೀಗಾಗಿ ತಂಡಗಳು ಪಂದ್ಯಕ್ಕೆ ಸರಿಯಾದ ಸಮಯಕ್ಕೆ ಮೈದಾನ ತಲುಪಲು ಹರಸಾಹಸ ಪಡುವಂತಾಗುತ್ತದೆ. ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯಲ್ಲಿ ಈ ರೀತಿಯ ಸಮಸ್ಯೆ ತಲೆದೂರಿದರೆ, ತೊಂದರೆಯಾಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದಲೇ ಮೊಹಾಲಿಯನ್ನು ಶಾರ್ಟ್‌ಲಿಸ್ಟ್ ಪಟ್ಟಿಯಿಂದ ಕೈಬಿಡಲಾಗಿದೆ.
ಆಂತರಿಕ ರಾಜಕೀಯದಿಂದಾಗಿ ಕ್ರಿಕೆಟ್‌ಗೆ ಹೊಡೆತ:
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಮುಖ್ಯ ಸಲಹೆಗಾರ ಹರ್ಭಜನ್ ಸಿಂಗ್, ಈ ಹಿಂದಿನ ಎರಡು ಅಸೋಸಿಯೇಷನ್ ಆಡಳಿತದಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಕಳೆದ ಅಕ್ಟೋಬರ್ 07, 2022ರಲ್ಲಿ ಪಂಜಾಬ್ ಮುಖ್ಯಮಂತ್ರಿಗಳಾಗಿದ್ದ ಭಗವಂತ್ ಮನ್ ಹಾಗೂ ಬಿಸಿಸಿಐಗೆ ಪತ್ರಬರೆದು, ಭ್ರಷ್ಟಾಚಾರದ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಕ್ರಿಕೆಟ್ ಸಂಸ್ಥೆಯು ಆಂತರಿಕ ತನಿಖೆ ನಡೆಸುತ್ತಿದೆ. ಈ ಕಾರಣಕ್ಕಾಗಿಯೇ ಸಾಕಷ್ಟು ಸಮಯದಿಂದ ಇಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೆ ತೊಡಕುಂಟಾಗುತ್ತದೆ.
ಪಂಜಾಬ್‌ನಲ್ಲಿ ಜೋರಾದ ಖಲಿಸ್ತಾನಿಗಳ ಹೋರಾಟ:
ಇನ್ನು ಇವೆಲ್ಲದರ ನಡುವೆ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿಗಳಾದ ಖಲಿಸ್ತಾನಿಗಳ ಸಂಘಟನೆಯ ಹೋರಾಟ ಜೋರಾಗಿದೆ. 'ವಾರಿಸ ಪಂಜಾಜ್ ದೇ' ಪ್ರಮುಖ ಅಮೃತ್‌ಪಾಲ್ ಅವರನ್ನು ವಶಕ್ಕೆ ಪಡೆಯಲು ಪಂಜಾಬ್ ಪೊಲೀಸರು ತೀವ್ರಶೋಧನೆ ನಡೆಸುತ್ತಿದ್ದಾರೆ. ಇದರ ನಡುವೆ ಖಲಿಸ್ತಾನಿಗಳ ಪ್ರತಿಭಟನೆ ಜೋರಾಗುವ ಸಾಧ್ಯತೆಯಿರುವುದರಿಂದ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.