Mithali Raj retirement ಭರತನಾಟ್ಯದತ್ತ ಒಲವಿದ್ದ ಮಿಥಾಲಿಗೆ ಗೆಲುವು ಸಿಕ್ಕಿದ್ದು ಕ್ರಿಕೆಟ್‌ನಲ್ಲಿ..!

By Kannadaprabha NewsFirst Published Jun 9, 2022, 9:36 AM IST
Highlights

* ಎರಡು ದಶಕಗಳ ಮಿಥಾಲಿ ರಾಜ್ ಕ್ರಿಕೆಟ್ ಬದುಕು ಅಂತ್ಯ

* 16ನೇ ವಯಸ್ಸಿಗೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ ಸ್ಪೂರ್ತಿಯಾಗಿದ್ದ ಮಿಥಾಲಿ ರಾಜ್

* ಜೋಧ್‌ಪುರದಲ್ಲಿ ಹುಟ್ಟಿದರೂ ಮಿಥಾಲಿ ಬಾಲ್ಯ ಕಳೆದಿದ್ದು ತೆಲಂಗಾಣದಲ್ಲಿ

ಬೆಂಗಳೂರು(ಜೂ.09): ಎರಡು ದಶಕಗಳ ಕಾಲ ಮಹಿಳಾ ಕ್ರಿಕೆಟ್ ಜಗತ್ತನ್ನು ಆಳಿದ್ದ ಮಿಥಾಲಿ ರಾಜ್ ಅವರ ವರ್ಣರಂಜಿತ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಬಿದ್ದಿದೆ. ಬಾಲ್ಯದಲ್ಲಿ ಭರತನಾಟ್ಯದತ್ತ ಒಲವು ತೋರಿದ್ದ ಮಿಥಾಲಿ ರಾಜ್, ಆ ಬಳಿಕ ಕ್ರಿಕೆಟ್ ದಂತಕಥೆಯಾಗಿ ಬೆಳೆದುನಿಂತಿದ್ದೇ ಒಂದು ಅಚ್ಚರಿ. ಮಿಥಾಲಿ ರಾಜ್ (Mithali Raj) 1982ರಲ್ಲಿ ರಾಜಸ್ಥಾನದ ಜೋಧ್‌ಪುರದಲ್ಲಿ ದೊರೈ ರಾಜ್‌-ಲೀಲ್‌ ರಾಜ್‌ ದಂಪತಿಯ ಪುತ್ರಿಯಾಗಿ ಜನಿಸಿದರು. ದೊರೈ ಅವರು ಭಾರತೀಯ ಏರ್‌ಫೋರ್ಸ್‌ ಉದ್ಯೋಗಿಯಾಗಿದ್ದರು. ಬಾಲ್ಯದಲ್ಲಿ ಭರತನಾಟ್ಯ ಡ್ಯಾನ್ಸರ್‌ ಆಗಬೇಕೆಂದು ಕನಸು ಕಂಡಿದ್ದ ಮಿಥಾಲಿ ತಮ್ಮ 10ನೇ ವಯಸ್ಸಿನಲ್ಲೇ ಕ್ರಿಕೆಟ್‌ನತ್ತ ಒಲವು ತೋರಿಸಿದರು. ಜೋಧ್‌ಪುರದಲ್ಲಿ ಹುಟ್ಟಿದರೂ ಮಿಥಾಲಿ ಬಾಲ್ಯ ಕಳೆದಿದ್ದು ತೆಲಂಗಾಣದಲ್ಲಿ. ಸಿಕಂದರಾಬಾದ್‌ನಲ್ಲಿ ಪ್ರಾಥಮಿಕ 3ಮತ್ತು ಪ್ರೌಢ ಶಿಕ್ಷಣ ಪಡೆದ ಅವರು ಶಾಲಾ ದಿನಗಳಲ್ಲೇ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದರು. ಪಿಯುಸಿಯನ್ನು ಸಿಕಂದರಾಬಾದ್‌ನಲ್ಲೇ ಮುಗಿಸಿದ ಅವರು ಬಳಿಕ ಕ್ರಿಕೆಟ್‌ನತ್ತ ಸಂಪೂರ್ಣ ಮುಖ ಮಾಡಿದರು.

ಬಳಿಕ ರೈಲ್ವೇಸ್‌ ಪರ ದೇಸಿ ಕ್ರಿಕೆಟ್‌ ಆಡಲು ಶುರು ಮಾಡಿದ ಮಿಥಾಲಿ ನಂತರ ಹಿಂತಿರುಗಿ ನೋಡಲಿಲ್ಲ. ಅಂಜುಮ್‌ ಚೋಪ್ರಾ, ಪೂರ್ಣಿಮಾ ರಾವ್‌, ಅಂಜು ಜೈನ್‌ ಜೊತೆ ಕ್ರಿಕೆಟ್‌ ಆಡುತ್ತಾ ಬೆಳೆದ ಮಿಥಾಲಿ 1997ರಲ್ಲೆ, ಅಂದರೆ ತಮ್ಮ 14ನೇ ವಯಸ್ಸಿನಲ್ಲೇ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಬಳಿಕ 1999ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಅವರು ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಐರ್ಲೆಂಡ್‌ ವಿರುದ್ಧ ಆಡಿದರು. ಮೊದಲ ಪಂದ್ಯದಲ್ಲೇ 114 ರನ್‌ ಸಿಡಿಸಿ ಎಲ್ಲರ ಹುಬ್ಬೇರಿಸಿದ್ದರು.

6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್‌

ಮಿಥಾಲಿ ರಾಜ್‌ 6 ಬಾರಿ ವಿಶ್ವಕಪ್‌ನಲ್ಲಿ ಆಡಿದ ಪ್ರಪ್ರಥಮ ಮಹಿಳಾ ಕ್ರಿಕೆಟರ್‌ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 39 ವರ್ಷದ ಮಿಥಾಲಿ 2000, 2005, 2009, 2013, 2017 ಹಾಗೂ 2022ರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಒಟ್ಟಾರೆ ಮಿಥಾಲಿ ಕ್ರಿಕೆಟ್‌ ಇತಿಹಾಸದಲ್ಲಿ 6 ವಿಶ್ವಕಪ್‌ ಆಡಿದ 3ನೇ ಕ್ರಿಕೆಟರ್‌ ಎನಿಸಿಕೊಂಡಿದ್ದಾರೆ. ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌ (Sachin Tendulkart) ಮತ್ತು ಪಾಕಿಸ್ತಾನದ ಜಾವೆದ್‌ ಮಿಯಾಂದಾದ್‌ ಮಾತ್ರ ಈ ಸಾಧನೆ ಮಾಡಿದ್ದಾರೆ.

Mithali Raj retirement: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಮಿಥಾಲಿ ರಾಜ್‌

1999ರಲ್ಲಿ ಏಕದಿನ ಪಾದಾರ್ಪಣೆ ಮಾಡಿದ್ದ ಮಿಥಾಲಿ ಟೆಸ್ಟ್‌ ಆಡಿದ್ದು 2002ರಲ್ಲಿ. ಅದೇ ವರ್ಷ ತಮ್ಮ 19ನೇ ವಯಸ್ಸಿನಲ್ಲೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 214 ರನ್‌ ಸಿಡಿಸಿ ಅಂದಿನ ಕಾಲಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲೇ ಗರಿಷ್ಠ ರನ್‌ ಬಾರಿಸಿದ ಮಹಿಳಾ ಕ್ರಿಕೆಟರ್‌ ಎನಿಸಿಕೊಂಡಿದ್ದರು.

ಮಿಥಾಲಿ ನಿವೃತ್ತಿ: ಏಕದಿನ ತಂಡಕ್ಕಿನ್ನು ಹರ್ಮನ್‌ಪ್ರೀತ್ ಕೌರ್‌ ನಾಯಕಿ

ನವದೆಹಲಿ: ಮಿಥಾಲಿ ರಾಜ್‌ ಅವರ ನಿವೃತ್ತಿಯಿಂದ ತೆರವಾಗಿದ್ದ ಭಾರತ ಮಹಿಳಾ ಏಕದಿನ ತಂಡದ ನಾಯಕತ್ವ ಹೊಣೆ ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಅವರಿಗೆ ಲಭಿಸಿದೆ. ಕೌರ್‌ ಈಗಾಗಲೇ ಟಿ20 ತಂಡವನ್ನು ಮುನ್ನಡೆಸುತ್ತಿದ್ದು, ಇದೀಗ ಏಕದಿನ ತಂಡಕ್ಕೂ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಸ್ಮೃತಿ ಮಂಧನಾಗೆ ನಾಯಕತ್ವ ಸಿಗಲಿದೆ ಎಂದು ಹೇಳಲಾಗುತ್ತಿದ್ದರೂ ಬಿಸಿಸಿಐ ಕೌರ್‌ಗೆ ಮಣೆ ಹಾಕಿದೆ. 

ಜೂನ್ 23ರಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ವಿರುದ್ಧದ ತಲಾ 3 ಪಂದ್ಯಗಳ ಏಕದಿನ, ಟಿ20 ಸರಣಿಗೆ ಬುಧವಾರ ತಂಡ ಪ್ರಕಟಿಸಲಾಯಿತು. ಎರಡೂ ತಂಡಕ್ಕೆ ಸ್ಮೃತಿ ಮಂಧನಾ ಉಪನಾಯಕಿಯಾಗಿರಲಿದ್ದಾರೆ. ಇನ್ನು, ವೇಗದ ಬೌಲರ್‌ ಜೂಲನ್‌ ಗೋಸ್ವಾಮಿಯನ್ನು ತಂಡದಿಂದ ಕೈಬಿಡಲಾಗಿದೆ. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮೇಘನಾಗೆ ಸ್ಥಾನ ಲಭಿಸಿದೆ. ಜೆಮಿಮಾ ರೋಡ್ರಿಗಸ್‌ಗೆ ಟಿ20 ತಂಡದಲ್ಲಿ ಅವಕಾಶ ಲಭಿಸಿದೆ.
 

click me!