ಮಹಾರಾಜ ಟಿ20 ಟೂರ್ನಿ: ಜುಲೈ 20ರಂದು ಮೈಸೂರು ತಂಡದಿಂದ ಪ್ರತಿಭಾನ್ವೇಷಣೆ..! ಯುವ ಕ್ರಿಕೆಟಿಗರಿಗೆ ಸುವರ್ಣಾವಕಾಶ

By Kannadaprabha NewsFirst Published Jul 18, 2023, 12:24 PM IST
Highlights

ಮಹಾರಾಜ ಟಿ20 ಲೀಗ್ ಟೂರ್ನಿಗೆ ಸಿದ್ದತೆ ಆರಂಭಿಸಿದ ಮೈಸೂರು ಫ್ರಾಂಚೈಸಿ
ಜುಲೈ 20ರಂದು ಮೈಸೂರು ವಾರಿಯರ್ಸ್‌ ತಂಡದಿಂದ ಬೆಂಗಳೂರಿನಲ್ಲಿ ಪ್ರತಿಭಾನ್ವೇಷಣೆ
ಆಯ್ಕೆಯಾಗುವ ಇಬ್ಬರು ಆಟಗಾರರು ಟೂರ್ನಿಯಲ್ಲಿ ಮೈಸೂರು ತಂಡವನ್ನು ಪ್ರತಿನಿಧಿಸುವ ಅವಕಾಶ

ಬೆಂಗಳೂರು(ಜು.18): ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮುಂಬರುವ ಮಹಾರಾಜ ಟಿ20 ಲೀಗ್‌ಗೆ ಮೈಸೂರು ವಾರಿಯರ್ಸ್‌ ತಂಡ ಜು.20ರಂದು ಬೆಂಗಳೂರಿನಲ್ಲಿ ಪ್ರತಿಭಾನ್ವೇಷಣೆ ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ಆಯ್ಕೆಯಾಗುವ ಇಬ್ಬರು ಆಟಗಾರರು ಟೂರ್ನಿಯಲ್ಲಿ ಮೈಸೂರು ತಂಡವನ್ನು ಪ್ರತಿನಿಧಿಸಲಿದ್ದಾರೆ. 

ಪ್ರತಿಭಾನ್ವೇಷಣೆ ಕಾರ್ಯಕ್ರಮ ಬೆಂಗಳೂರಿನ ಯಲಹಂಕದಲ್ಲಿರುವ ಜಸ್ಟ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಬೆಳಗ್ಗೆ 8ರಿಂದ ನಡೆಯಲಿದೆ. ಕೆಎಸ್‌ಸಿಎ ನೋಂದಾಯಿತ ಕ್ಲಬ್‌ಗಳನ್ನು ಪ್ರತಿನಿಧಿಸುವ ಆಟಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಮಧುಸೂದನ್‌(986024717), ಅರುಣ್‌(9632976696) ರನ್ನು ಸಂಪರ್ಕಿಸಬಹುದು.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮತ್ತೆ ಫ್ರಾಂಚೈಸಿ ಆಧಾರಿತ ಟಿ20 ಲೀಗ್‌ ಆರಂಭಿಸುತ್ತಿದ್ದು, ಆಗಸ್ಟ್‌ 14ರಿಂದ 30ರ ವರೆಗೆ ಟೂರ್ನಿ ನಡೆಯಲಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಗುಲ್ಬರ್ಗ ಸೇರಿ 6 ತಂಡಗಳು ಪಾಲ್ಗೊಳ್ಳಲಿದ್ದು, ಎಲ್ಲಾ 33 ಪಂದ್ಯಗಳೂ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಈಗಾಗಲೇ ಆಯೋಜಕರು ತಿಳಿಸಿದ್ದಾರೆ.

RCB ಮ್ಯಾನೇಜ್‌ಮೆಂಟ್‌ ನಂಬಿಸಿ ಮೋಸ ಮಾಡಿತು..! ಬೆಂಗಳೂರು ಫ್ರಾಂಚೈಸಿ ವಿರುದ್ದ ನೊಂದು ನುಡಿದ ಚಹಲ್..!

2009ರಿಂದ 2019ರ ವರೆಗೆ ಕೆಪಿಎಲ್‌ ಫ್ರಾಂಚೈಸಿ ಟೂರ್ನಿ ಆಯೋಜಿಸಿದ್ದ ಕೆಎಸ್‌ಸಿಎ ಕಳೆದ ವರ್ಷ ಮಹಾರಾಜ ಟ್ರೋಫಿ ಟೂರ್ನಿ ಪರಿಚಯಿಸಿತ್ತು. ಆದರೆ ಅದು ಫ್ರಾಂಚೈಸಿ ಆಗಿರಲಿಲ್ಲ. ಪ್ರಾಯೋಜಕತ್ವ ಮಾದರಿಯಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಮತ್ತೆ ಫ್ರಾಂಚೈಸಿ ಲೀಗ್‌ ಆರಂಭಿಸಲು ಕೆಎಸ್‌ಸಿಎ ನಿರ್ಧರಿಸಿದ್ದು, ಜು.22ರಂದು ಆಟಗಾರರ ಹರಾಜು ಕೂಡಾ ನಡೆಯಲಿದೆ. ಪ್ರತಿ ಫ್ರಾಂಚೈಸಿ ಗರಿಷ್ಠ 50 ಲಕ್ಷ ರು. ವ್ಯಯಿಸಲು ಅವಕಾಶ ನೀಡಲಾಗಿದೆ.

ಏಷ್ಯಾಕಪ್‌ ವೇಳಾಪಟ್ಟಿ ನಾಳೆ ಪ್ರಕಟ ಸಾಧ್ಯತೆ

ದುಬೈ: ಆಗಸ್ಟ್‌ 31ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿರುವ ಬಹುನಿರೀಕ್ಷಿತ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ವೇಳಾಪಟ್ಟಿ ಬುಧವಾರ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸುಳಿವು ನೀಡಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯ ಪಾಕ್‌ನಲ್ಲೇ ನಡೆಯುವುದಾಗಿ ತಿಳಿಸಿದೆ. 

ಅಲ್ಲದೇ, ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯ ಸೆಪ್ಟೆಂಬರ್ 2ರಂದು ಹಾಗೂ ಸೂಪರ್‌-4 ಹಂತಕ್ಕೇರಿದರೆ ಉಭಯ ತಂಡಗಳ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ ಎಂದು ವರದಿಯಾಗಿದೆ. ಟೂರ್ನಿಯಲ್ಲಿ 6 ತಂಡಗಳು ಪಾಲ್ಗೊಳ್ಳಲಿದ್ದು ಪಾಕಿಸ್ತಾನದಲ್ಲಿ 4, ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿವೆ.

ಕಿರಿಯರ ಏಷ್ಯಾಕಪ್‌ನಲ್ಲಿ ಸೆಮೀಸ್‌ಗೇರಿದ ಭಾರತ

ಕೊಲಂಬೊ: ಅಂಡರ್-23 ಉದಯೋನ್ಮುಖ ಆಟಗಾರರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಎ’ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಸೋಮವಾರ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ನೇಪಾಳ ‘ಎ’ ವಿರುದ್ಧ 9 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಒಟ್ಟು 4 ಅಂಕ ಸಂಪಾದಿಸಿದ ಭಾರತ, ಪಾಕ್‌ ಜೊತೆಗೆ ಗುಂಪಿನಿಂದ ಸೆಮೀಸ್‌ ಪ್ರವೇಶಿಸಿತು. ನೇಪಾಳ, ಯುಎಇ ಹೊರಬಿದ್ದವು.

ಅಳಿಯ ಕೆ ಎಲ್ ರಾಹುಲ್‌ಗೆ ವಾರ್ನಿಂಗ್ ಕೊಟ್ಟ ಮಾವ ಸುನಿಲ್ ಶೆಟ್ಟಿ..!

ಮೊದಲು ಬ್ಯಾಟ್‌ ಮಾಡಿದ ನೇಪಾಳ 39.2 ಓವರ್‌ಗಳಲ್ಲಿ 167 ರನ್‌ಗೆ ಆಲೌಟಾಯಿತು. ನಾಯಕ ರೋಹಿತ್‌ ಪಾಡೆಲ್‌(65) ಹೊರತುಪಡಿಸಿ ಬೇರೆ ಯಾರಿಗೂ ಭಾರತದ ದಾಳಿಯನ್ನು ಎದುರಿಸಲಾಗಲಿಲ್ಲ. ನಿಶಾಂತ್‌ ಸಿಂಧು 14ಕ್ಕೆ 4 ವಿಕೆಟ್‌ ಕಿತ್ತರು. ಸುಲಭ ಗುರಿ ಪಡೆದ ಭಾರತ 22.1 ಓವರ್‌ಗಳಲ್ಲಿ ಬೆನ್ನತ್ತಿ ಗೆದ್ದಿತು. ಅಭಿಷೇಕ್‌ ಶರ್ಮಾ(87), ಸಾಯಿ ಸುದರ್ಶನ್‌(ಔಟಾಗದೆ 58) ಗೆಲುವಿನ ರೂವಾರಿಗಳಾದರು.

ಆಫ್ಘನ್ ವಿರುದ್ಧ ಟಿ20 ಸರಣಿ ಗೆದ್ದ ಬಾಂಗ್ಲಾ

ಸೈಲೆಟ್‌: ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡ ಆತಿಥೇಯ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಶನಿವಾರ ನಡೆದ 2ನೇ ಪಂದ್ಯದಲ್ಲಿ ಬಾಂಗ್ಲಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 6 ವಿಕೆಟ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ ನಿಗದಿತ 17 ಓವರ್‌ಗಳಲ್ಲಿ 7 ವಿಕೆಟ್‌ಗೆ 116 ರನ್‌ ಗಳಿಸಿತು. ಸುಲಭ ಗುರಿಯನ್ನು ಬಾಂಗ್ಲಾ ಇನ್ನೂ 5 ಎಸೆತ ಬಾಕಿ ಇರುವಂತೆ ಬೆನ್ನತ್ತಿತು. ಲಿಟನ್‌ ದಾಸ್‌ 35 ರನ್‌ ಗಳಿಸಿದರು.

click me!