2021ರ ಮೆಗಾ ಹರಾಜಿನಲ್ಲಿ ಯುಜುವೇಂದ್ರ ಚಹಲ್ ಕೈಬಿಟ್ಟ ಆರ್‌ಸಿಬಿ ಫ್ರಾಂಚೈಸಿ
8 ವರ್ಷಗಳಿಂದ ಆರ್‌ಸಿಬಿ ತಂಡ ಪ್ರತಿನಿಧಿಸಿದ್ದ ಲೆಗ್‌ಸ್ಪಿನ್ನರ್ ಚಹಲ್
ಆರ್‌ಸಿಬಿಯ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುಜುವೇಂದ್ರ ಚಹಲ್
ಬೆಂಗಳೂರು(ಜು.16): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 16 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದರೂ ಇದುವರೆಗೂ ಒಮ್ಮೆಯೂ ಚಾಂಪಿಯನ್ ಅಲಂಕರಿಸಲಿ ಸಫಲವಾಗಿಲ್ಲ. ಮಹತ್ವದ ಘಟ್ಟದಲ್ಲಿ ಆಟಗಾರರು ಕೈಕೊಡುವುದು ಹಾಗೂ ಆರ್‌ಸಿಬಿ ಟೀಂ ಮ್ಯಾನೇಜ್‌ಮೆಂಟ್‌ನ ಮಹಾ ಎಡವಟ್ಟುಗಳಿಗೆ ತಂಡವು ಬೆಲೆತೆರುತ್ತಿದೆ, ಅಭಿಮಾನಿಗಳು ನಿರಾಸೆ ಅನುಭವಿಸುತ್ತಲೇ ಬಂದಿದ್ದಾರೆ. ಇನ್ನು 2021ರ ಐಪಿಎಲ್ ಮೆಗಾ ಹರಾಜಿನಲ್ಲಿ ತಂಡದ ಸ್ಟಾರ್ ಲೆಗ್‌ಸ್ಪಿನ್ನರ್ ಆಗಿದ್ದ ಯುಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಾಡಿದ ಅತಿದೊಡ್ಡ ಎಡವಟ್ಟುಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಘಟನೆಯ ಕುರಿತಂತೆ ಯುಜುವೇಂದ್ರ ಚಹಲ್ ಮತ್ತೊಮ್ಮೆ ತುಟಿಬಿಚ್ಚಿದ್ದು, ಆರ್‌ಸಿಬಿ ಮ್ಯಾನೇಜ್‌ಮೆಂಟ್ ತಮ್ಮನ್ನು ನಂಬಿಸಿ ಮೋಸ ಮಾಡಿತು ಎಂದು ಹೇಳಿದ್ದಾರೆ.
ಯುಜುವೇಂದ್ರ ಚಹಲ್, ಇತ್ತೀಚಿಗಿನ ಸಂದರ್ಶನವೊಂದರಲ್ಲಿ ತಾವು 8 ವರ್ಷಗಳ ಕಾಲ ಒಂದೇ ಫ್ರಾಂಚೈಸಿ ಪರ ಆಡಿದ್ದರೂ ತಮ್ಮನ್ನು ಏಕೆ ಕೈಬಿಡಲಾಯಿತು ಎನ್ನುವ ಕನಿಷ್ಠ ಸ್ಪಷ್ಟನೆಯನ್ನು ಆರ್‌ಸಿಬಿ ಫ್ರಾಂಚೈಸಿ ನೀಡಲಿಲ್ಲ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.
ಭಾರತೀಯರ ಮೇಲೆಯೇ ಸುಳ್ಳು ಸುಳ್ಳು ಆರೋಪ ಹೊರಿಸಿದ ಪಾಕ್ ಸುಳ್ಳುಬುರುಕ ಅಫ್ರಿದಿ!
"ಖಂಡಿತವಾಗಿಯೂ ನನಗೆ ಬೇಸರವಾಯಿತು. ನಾನು 2014ರಿಂದ ಆರ್‌ಸಿಬಿ ಜತೆಗಿನ ಪಯಣ ಆರಂಭಿಸಿದ್ದೆ. ಮೊದಲ ಪಂದ್ಯದಿಂದಲೇ ವಿರಾಟ್ ಕೊಹ್ಲಿ ನನ್ನ ಮೇಲೆ ವಿಶ್ವಾಸ ವಿಟ್ಟಿದ್ದರು. ಯುಜುವೇಂದ್ರ ಚಹಲ್ ಹೆಚ್ಚು ಹಣ ಮಾಡುವ ಉದ್ದೇಶದಿಂದ ಆರ್‌ಸಿಬಿ ಬಿಟ್ಟು ಬೇರೆ ತಂಡಕ್ಕೆ ಹೋದರು ಎಂದು ಜನರು ಮಾತನಾಡುವುದು ಕೇಳಿ ಬೇಸರ ಎನಿಸಿತು. ನಾನು ಈ ಸಂದರ್ಶನದಲ್ಲಿ ಈ ಕುರಿತಂತೆ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ, ನಾನು ಆರ್‌ಸಿಬಿಯಿಂದ ಯಾವುದೇ ಡಿಮ್ಯಾಂಡ್ ಇಟ್ಟಿರಲಿಲ್ಲ. ನಾನು ಎಷ್ಟು ಅರ್ಹವಾದ ವ್ಯಕ್ತಿ ಎನ್ನುವುದು ನನಗೆ ಗೊತ್ತಿತ್ತು. ಆದರೆ ನನಗೆ ತುಂಬಾ ಬೇಜಾರ ಎನಿಸಿದ್ದು, ಆರ್‌ಸಿಬಿಯಿಂದ ಕನಿಷ್ಠಪಕ್ಷ ಒಂದು ಫೋನ್ ಕರೆ ಕೂಡಾ ಬರಲಿಲ್ಲ. ನನ್ನನ್ನು ಯಾಕೆ ಕೈಬಿಟ್ಟರು ಎನ್ನುವುದನ್ನು ಅವರು ಕೊನೆಗೂ ಹೇಳಲಿಲ್ಲ ಎಂದು ಚಹಲ್, ರಣ್ವೀರ್ ಅಲ್ಲಬದಿಯಾ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
We lost this guy 💔
What a mismanaged franchise 🤬 pic.twitter.com/dXRavm8taB
"ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 140ಕ್ಕೂ ಅಧಿಕ ಐಪಿಎಲ್ ಪಂದ್ಯಗಳನ್ನು ಆಡಿದ ಹೊರತಾಗಿಯೂ, ಅವರಿಂದ ಸೂಕ್ತ ಸಂವಹನ ನಡೆಯಲೇ ಇಲ್ಲ. ಅವರು ನಿಮ್ಮನ್ನು ಹರಾಜಿನಲ್ಲಿ ಶತಾಯಗತಾಯ ಖರೀದಿಸುತ್ತೇವೆ ಎಂದು ಹೇಳಿದ್ದರು. ಆಗ ನಾನು ಸರಿ ಎಂದಿದ್ದೆ. ಆದರೆ ಆರ್‌ಸಿಬಿ ನನ್ನನ್ನು ಹರಾಜಿನಲ್ಲಿ ಬಿಡ್ ಮಾಡದೇ ಹೋದದ್ದು ತುಂಬಾ ಕೋಪ ಬರುವಂತೆ ಮಾಡಿತು. ನಾನು ಅವರ ಪರ 8 ವರ್ಷಗಳಿಂದ ಆಡಿದ್ದೇನೆ, ಚಿನ್ನಸ್ವಾಮಿ ನನ್ನ ನೆಚ್ಚಿನ ಸ್ಟೇಡಿಯಂ ಆಗಿದೆ" ಎಂದು ಚಹಲ್ ಹೇಳಿದ್ದಾರೆ.
2021ರ ಮೆಗಾ ಹರಾಜಿಗೂ ಮುನ್ನ ಚಹಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿರಲಿಲ್ಲ. ಆದರೆ ಹರಾಜಿನಲ್ಲಿ ಖರೀದಿಸುವುದಾಗಿ ತಿಳಿಸಿತ್ತು. ಆದರೆ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಯುಜುವೇಂದ್ರ ಚಹಲ್ ಹೆಸರು ಬಂದಾಗ ಒಮ್ಮೆಯೂ ಬಿಡ್ ಮಾಡದೇ ಸುಮ್ಮನೇ ಕುಳಿತಿತ್ತು. ಯುಜುವೇಂದ್ರ ಚಹಲ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಗಳು ಸಾಕಷ್ಟು ಪೈಪೋಟಿ ನಡೆಸಿದವು. ಅಂತಿಮವಾಗಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 6.50 ಕೋಟಿ ರುಪಾಯಿ ನೀಡಿ ಚಹಲ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲಿನ ಅಭಿಮಾನ ಈಗಲೂ ಇದೆ, ಆದರೆ ನನ್ನ ಕ್ರಿಕೆಟ್ ಬೆಳವಣಿಗೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಕೂಡಾ ಸಾಕಷ್ಟು ನೆರವು ನೀಡಿದೆ. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಭಾವಿಸುತ್ತೇನೆ ಎಂದು ಚಹಲ್ ನುಡಿದಿದ್ದಾರೆ.