ಲಾರ್ಡ್ಸ್‌ ಟೆಸ್ಟ್: ಮೊದಲ ಇನ್ನಿಂಗ್ಸ್ ಲೀಡ್‌ಗಾಗಿ ಭಾರತ-ಇಂಗ್ಲೆಂಡ್ ಪೈಪೋಟಿ!

Published : Jul 12, 2025, 09:04 AM IST
Jasprit Bumrah and Mohammed Siraj

ಸಾರಾಂಶ

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ 3ನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 5 ವಿಕೆಟ್ ಪಡೆದರೂ, ಭಾರತೀಯರ ಕಳಪೆ ಫೀಲ್ಡಿಂಗ್‌ನಿಂದಾಗಿ ಇಂಗ್ಲೆಂಡ್ 387 ರನ್ ಗಳಿಸಿತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 145 ರನ್ ಗಳಿಸಿದ್ದು, ಇನ್ನೂ 242 ರನ್ ಹಿನ್ನಡೆಯಲ್ಲಿದೆ.

ಲಂಡನ್: ಮೊದಲೆರಡು ಟೆಸ್ಟ್‌ಗಳಂತೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಸಹ ರೋಚಕವಾಗಿ ಸಾಗುತ್ತಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಜಾದೂ ಹೊರತಾಗಿಯೂ ಭಾರತದ ಕಳಪೆ ಫೀಲ್ಡಿಂಗ್‌ನಿಂದಾಗಿ ಇಂಗ್ಲೆಂಡ್ 387 ರನ್ ಗಳಿಸಿತು.

ಮೊದಲ ದಿನ 4 ವಿಕೆಟ್‌ಗೆ 251 ರನ್ ಗಳಿಸಿದ್ದ ಇಂಗ್ಲೆಂಡ್, ದಿನದಾಟದ ಆರಂಭದಲ್ಲೇ ದಿಢೀರ್ ಕುಸಿತ ಕಂಡಿತು. 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನಾಯಕ ಬೆನ್ ಸ್ಟೋಕ್ಸ್ (44) ಬೂಮ್ರಾ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. 99 ರನ್ ಗಳಿಸಿ ಔಟಾಗದೆ ಉಳಿದಿದ್ದ ಜೋ ರೂಟ್ ಶತಕ ಪೂರೈಸುತ್ತಿದ್ದಂತೆ ವಿಕೆಟ್ ಕಳೆದುಕೊಂಡರು. ಕ್ರಿಸ್ ವೋಕ್ಸ್ ಸಹ ಬೇಗನೆ ಪೆವಿಲಿಯನ್ ದಾರಿ ಹಿಡಿದರು. ಕೇವಲ 20 ರನ್‌ಗೆ 3 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ 300 ರನ್‌ಗಳೊಳಗೆ ಆಲೌಟ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಭಾರತೀಯರ ಕಳಪೆ ಫೀಲ್ಡಿಂಗ್ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.

 

ಜೇಮಿ ಸ್ಮಿತ್ 4 ರನ್ ಗಳಿಸಿದ್ದಾಗ ಕೆ.ಎಲ್.ರಾಹುಲ್ ಸುಲಭ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ಇದರ ಲಾಭವೆತ್ತಿದ ಸ್ಮಿತ್ 51 ರನ್ ಗಳಿಸಿದರು. ಇನ್ನು, ಬ್ರೆಡನ್ ಕಾರ್ಸ್‌ಗೆ 2 ಬಾರಿ ಜೀವದಾನ ದೊರೆಯಿತು. ಅವರು 56 ರನ್ ಗಳಿಸಿದಲ್ಲದೇ, ಸ್ಮಿತ್ ಜೊತೆ 8ನೇ ವಿಕೆಟ್‌ಗೆ 86 ರನ್ ಜೊತೆಯಾಟದಲ್ಲಿ ಭಾಗಿಯಾದರು. ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 387 ರನ್‌ಗೆ ಕೊನೆಗೊಂಡಿತು. ಕೊನೆ 3 ವಿಕೆಟ್‌ಗೆ ಆತಿಥೇಯ ತಂಡ 116 ರನ್ ಸೇರಿಸಿತು. ಬುಮ್ರಾ 5 ವಿಕೆಟ್ ಕಬಳಿಸಿದರು.

ಮೊದಲ ಓವರಲ್ಲೇ 3 ಬೌಂಡರಿಗಳೊಂದಿಗೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ, ಆರ್ಚರ್ ಆಘಾತ ನೀಡಿದರು. ಜೈಸ್ವಾಲ್ (13) ರನ್‌ಗೆ ಔಟಾದರು. 2ನೇ ವಿಕೆಟ್‌ಗೆ ರಾಹುಲ್ ಹಾಗೂ ಕರುಣ್‌ ನಾಯರ್ (40) ನಡುವೆ 61 ರನ್ ಜೊತೆಯಾಟ ಮೂಡಿಬಂತು. ಉತ್ತಮ ಆರಂಭ ಪಡೆದರೂ ದೊಡ್ಡ ಸ್ಕೋರ್ ಗಳಿಸಲು ಕರುಣ್ ಮತ್ತೆ ಫೇಲಾದರು. ಉತ್ಕೃಷ್ಟ ಲಯದಲ್ಲಿರುವ ಗಿಲ್ ಕೇವಲ 16 ರನ್‌ಗೆ ಔಟಾಗಿದ್ದು ಇಂಗ್ಲೆಂಡ್‌ನ ಆತ್ಮವಿಶ್ವಾಸ ಹೆಚ್ಚಿಸಿತು. ರಾಹುಲ್ (53*) ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರೆ, ಕೈಬೆರಳಿನ ಗಾಯದ ನಡುವೆಯೂ ಪಂತ್ (19*) ಬ್ಯಾಟಿಂಗ್ ಗಿಳಿದು ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು. ದಿನದಂತ್ಯಕ್ಕೆ ಭಾರತ 3 ವಿಕೆಟ್‌ಗೆ 145 ರನ್ ಗಳಿಸಿದ್ದು, ಇನ್ನೂ 242 ರನ್ ಹಿನ್ನಡೆಯಲ್ಲಿದೆ.

ಕಪಿಲ್ ದಾಖಲೆ ಮುರಿದ ಬುಮ್ರಾ

ತವರಿನಾಚೆ ಅತಿಹೆಚ್ಚು ಬಾರಿ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎನ್ನುವ ದಾಖಲೆಯನ್ನು ಬುಮ್ರಾ ಬರೆದಿದ್ದಾರೆ. ಇದು ಅವರ 13ನೇ 5 ವಿಕೆಟ್ ಗೊಂಚಲು, ಕಪಿಲ್ ದೇವ್ 12 ಸಲ ಈ ಸಾಧನೆ ಮಾಡಿದ್ದರು.

ಪದೇ ಪದೇ ಚೆಂಡು ಬದಲಾವಣೆ: ಡ್ಯೂಕ್ಸ್‌ ವಿರುದ್ಧ ಅಸಮಾಧಾನ!

ಇಂಗ್ಲೆಂಡ್‌ನಲ್ಲಿ ಬಳಕೆಯಾಗುವ ಡ್ಯೂಕ್ಸ್‌ ಚೆಂಡಿನ ಇತ್ತೀಚಿನ ಗುಣಮಟ್ಟದ ಬಗ್ಗೆ ಭಾರತೀಯ ಕ್ರಿಕೆಟಿಗರು ಟೀಕಿಸುತ್ತಿರುವ ಹೊತ್ತಲ್ಲೇ, 3ನೇ ಟೆಸ್ಟ್ ನ 2ನೇ ದಿನವಾದ ಶುಕ್ರವಾರ 2 ಬಾರಿ ಚೆಂಡು ಬದಲಿಸಿದ ಘಟನೆ ನಡೆಯಿತು. 10 ಓವರ್ ಬಳಕೆಯಾಗಿದ್ದ ಚೆಂಡು ತನ್ನ ರೂಪ ಕಳೆದುಕೊಂಡಿದ್ದರಿಂದ ಅದನ್ನು ಬದಲಿಸಲಾಯಿತು. ಆನಂತರ ಆಯ್ಕೆ ಮಾಡಿಕೊಂಡ ಚೆಂಡು ಕೇವಲ 8 ಓವರ್‌ ಬಾಳಿಕೆ ಬಂತು. ಪದೇಪದೇ ಚೆಂಡು ಬದಲಿಸಿದ್ದರಿಂದ ಭಾರತದ ನಾಯಕ ಶುಭ್‌ಮನ್ ಗಿಲ್ ಮೈದಾನದಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡ್ಯೂಕ್ಸ್ ತಯಾರಕ ಸಂಸ್ಥೆಯ ಮಾಲೀಕ ದಿಲೀಪ್ ಜಜೋಡಿಯಾ, 'ಸೂಪರ್ ಸ್ಟಾರ್‌ಗಳು ಸ್ವಲ್ಪ ತಾಳ್ಮೆಯಿಂದ ವರ್ತಿಸಬೇಕು.ನಾವು ಗುಣಮಟ್ಟದ ಚೆಂಡುಗಳನ್ನು ತಯಾರಿಸಲು ಸಕಲ ಪ್ರಯತ್ನ ನಡೆಸುತ್ತಿದ್ದೇವೆ. ಆಟಗಾರರು ಕೆಟ್ಟ ಶಾಟ್ ಬಾರಿಸಿದಾಗ ನಾನು ಟೀಕೆ ಮಾಡಬಹುದೇ?, ಏನು ಸಮಸ್ಯೆಯಾಗುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಿದ್ದೇವೆ' ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ತಂಡದಲ್ಲಿ ಸಂಚಲನ: ಸಂಜು ಸ್ಯಾಮ್ಸನ್ ಸ್ಥಾನಕ್ಕೆ ಕುತ್ತು?
ಕೊಹ್ಲಿ-ರೋಹಿತ್ ಮುಂದಿನ ವಿಜಯ್ ಹಜಾರೆ ಟ್ರೋಫಿ ಮ್ಯಾಚ್ ಆಡೋದು ಯಾವಾಗ? ಲೈವ್ ಸ್ಟ್ರೀಮ್ ಇರುತ್ತಾ?