ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಯಾರಾಗ್ತಾರೆ ಲಾರ್ಡ್? ಹೈವೋಲ್ಟೇಜ್‌ ಕದನಕ್ಕೆ ಕ್ಷಣಗಣನೆ

Published : Jul 10, 2025, 09:45 AM IST
Team India historic Edgbaston Test win

ಸಾರಾಂಶ

ಲೀಡ್ಸ್ ಮತ್ತು ಎಜ್‌ಬಾಸ್ಟನ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದರೂ, ಲಾರ್ಡ್ಸ್‌ನ ಹಸಿರು ಪಿಚ್‌ನಲ್ಲಿ ಅವರಿಗೆ ಕಠಿಣ ಸವಾಲು ಎದುರಾಗಲಿದೆ. ಜೋಫ್ರಾ ಆರ್ಚರ್ ವಾಪಸಾತಿಯಿಂದ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ. ಈ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಪರೀಕ್ಷೆಗೊಳಪಡಲಿದೆ.

ಲಂಡನ್: ಲೀಡ್ಸ್ ಹಾಗೂ ಎಜ್‌ಬಾಸ್ಟನ್‌ನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಆರ್ಭಟಿಸಿದ್ದ ಭಾರತ ತಂಡಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಸಮಯ. ಆರಂಭಿಕ ಎರಡು ಪಂದ್ಯಗಳಲ್ಲಿ ರನ್ ಪ್ರವಾಹವನ್ನೇ ಹರಿಸಿದ್ದ ಶುಭಮನ್ ಗಿಲ್ ಸಾರಥ್ಯದ ತಂಡ ಗುರುವಾರದಿಂದ ಇಂಗ್ಲೆಂಡ್ ವಿರುದ್ದ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯ ಲಿದ್ದು, ಲಾರ್ಡ್ಸ್ ಅಂಗಳದ ಹಸಿರು ಪಿಚ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ.

ಹುಲ್ಲಿನಿಂದ ಕೂಡಿರುವ ಪಿಚ್‌ನಲ್ಲಿ ಬೌನ್ಸರ್ ಹಾಗೂ ವೇಗದ ಎಸೆತಗಳನ್ನು ಸಮರ್ಥವಾಗಿ ಎದುರಿಸುವ ತಂಡ ಕ್ರಿಕೆಟ್ ಕಾಶಿ ಎಂದೇ ಕರೆಸಿ ಕೊಳ್ಳುವ ಲಾರ್ಡ್‌ನಲ್ಲಿ ಪ್ರಾಬಲ್ಯ ಸಾಧಿಸಬಹುದು. 2 ಪಂದ್ಯಗಳಲ್ಲಿ 1-1 ಸಮಬಲ ಸಾಧಿಸಿರುವ ಉಭಯ ತಂಡಗಳು, ಲಾರ್ಡ್ಸ್‌ನಲ್ಲಿ ಸರಣಿ ಮುನ್ನಡೆ ಪಡೆಯಲು ಕಾತರಿಸುತ್ತಿದೆ.

ಮೊದಲ ಟೆಸ್ಟ್‌ನಲ್ಲಿ ಹಲವು ಎಡವಟ್ಟುಗಳನ್ನು ಮಾಡಿ ಪಂದ್ಯ ಕೈಚೆಲ್ಲಿದ್ದನ್ನು ಹೊರತುಪಡಿಸಿದರೆ ಈ ಸರಣಿಯಲ್ಲಿ ಭಾರತದ ಪ್ರದರ್ಶನ ಅದ್ವಿತೀಯ. ಬ್ಯಾಟಿಂಗ್‌ನಲ್ಲಿ ಗಿಲ್, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್‌, ರಾಹುಲ್‌ ಅಬ್ಬರಿಸಿದ್ದರೆ, 2ನೇ ಟೆಸ್ಟ್‌ನಲ್ಲಿ ಬುಮ್ರಾ ಅನುಪಸ್ಥಿತಿಯಲ್ಲೂ ಭಾರತದ ಬೌಲಿಂಗ್ ಪಡೆ ಮೊನಚು ದಾಳಿ ಸಂಘಟಿಸಿತ್ತು. ಆದರೆ ಲಾರ್ಡ್ಸ್ ಟೆಸ್ಟ್ ವೇಗ ಹಾಗೂ ಬೌನ್ಸ್ ನಿಂದ ಕೂಡಿರಲಿದ್ದು, ಭಾರತಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ.

ಪ್ರಸಿದ್ ಔಟ್ ಸಾಧ್ಯತೆ: 2 ಪಂದ್ಯದಲ್ಲೂ ವಿಫಲರಾಗಿರುವ ಕರುಣ್ ನಾಯರ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. ಆಲ್ರೌಂಡರ್ ನಿತೀಶ್ ಕುಮಾರ್ ಕೂಡಾ ತಂಡದಲ್ಲಿ ಮುಂದುವರಿಯಬಹುದು. ಕಳೆದ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ವೇಗಿ ಬುಮ್ರಾ ಈ ಪಂದ್ಯದಲ್ಲಿ ಆಡಲಿದ್ದು, ಅವರಿಗೆ ಪ್ರಸಿದ್ಧ ಕೃಷ್ಣ ಜಾಗ ಬಿಟ್ಟು ಕೊಡಬೇಕಾಗಬಹುದು. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯತೆಯಿಲ್ಲ.

ಆರ್ಚರ್ ವಾಪಸ್: ಲಾರ್ಡ್ಸ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡವನ್ನು ಘೋಷಿಸಲಾಗಿದ್ದು, ವೇಗಿ ಜೋಫ್ರಾ ಆರ್ಚರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಪದೇ ಪದೇ ಗಾಯಗೊಳ್ಳುತ್ತಿದ್ದ ಆರ್ಚರ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಅವರು ಜೋಶ್ ಟಂಗ್ ಸ್ಥಾನಕ್ಕೆ ಆಯ್ಕೆಯಾಗಿದ್ದು, ಉಳಿದಂತೆ ಯಾವುದೇ ಬದಲಾವಣೆಯಾಗಿಲ್ಲ.

ಆಟಗಾರರ ಪಟ್ಟಿ

ಭಾರತ(ಸಂಭವನೀಯ): ಜೈಸ್ವಾಲ್, ರಾಹುಲ್‌, ಕರುಣ್, ಗಿಲ್ (ನಾಯಕ), ರಿಷಭ್, ಜಡೇಜಾ, ನಿತೀಶ್, ವಾಷಿಂಗ್ಟನ್, ಬೂಮ್ರಾ, ಸಿರಾಜ್‌, ಆಕಾಶ್‌ ದೀಪ್.

ಇಂಗ್ಲೆಂಡ್ (ಆಡುವ 11): ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಪೋಪ್, ರೂಟ್, ಬ್ರೂಕ್, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್, ವೋಕ್ಸ್, ಬ್ರೆಡನ್ ಕಾರ್ಸ್, ಆರ್ಚರ್, ಬಶೀರ್.

ಪಂದ್ಯ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.

ಪಿಚ್ ರಿಪೋರ್ಟ್: ಲಾರ್ಡ್ ಕ್ರೀಡಾಂಗಣದ ಪಿಚ್‌ನಲ್ಲಿ ಹುಲ್ಲುಗಳಿದ್ದು, ವೇಗಿಗಳು ಹೆಚ್ಚಿನ ನೆರವು ಪಡೆಯುವ ನಿರೀಕ್ಷೆ ಯಿದೆ. ಅಧಿಕ ಬೌನ್ಸರ್‌ಗಳೂ ಕಂಡುಬರಲಿವೆ. ಹೀಗಾಗಿ ಬ್ಯಾಟ‌ರ್‌ಗಳು ರನ್ ಗಳಿಸಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. 2021ರ ಬಳಿಕ ಲಾರ್ಡ್ಸ್‌ನಲ್ಲಿ ನಡೆದ 9 ಟೆಸ್ಟ್‌ ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 265.

ಲಾರ್ಡ್ಸ್‌ನಲ್ಲಿ 3 ಬಾರಿ ಟೆಸ್ಟ್ ಗೆದ್ದಿದೆ ಭಾರತ:

ಭಾರತ ತಂಡ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಈವರೆಗೂ 19 ಟೆಸ್ಟ್ ಪಂದ್ಯಗಳನ್ನಾಡಿದ್ದು, 3ರಲ್ಲಿ ಜಯಗಳಿಸಿದೆ. 12 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದ್ದರೆ, ಉಳಿದ 4 ಪಂದ್ಯಗಳು ಡ್ರಾಗೊಂಡಿವೆ. ಆದರೆ ಇಲ್ಲಿ ಕೊನೆ 3 ಮುಖಾಮುಖಿಯಲ್ಲಿ ಭಾರತ 2ರಲ್ಲಿ ಜಯಗಳಿಸಿದೆ. 1986ರಲ್ಲಿ ಲಾರ್ಡ್ಸ್‌ನಲ್ಲಿ ಮೊದಲ ಬಾರಿ ಗೆದ್ದಿದ್ದ ಭಾರತ, 2014 ಹಾಗೂ 2021ರ ಪ್ರವಾಸದಲ್ಲೂ ಜಯಭೇರಿ ಬಾರಿಸಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ