
ಚೆನ್ನೈ (ಮಾ.20): ಭಾರತದ ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಶುಕ್ರವಾರ ಬಿಸಿಸಿಐ (BCCI) ಕಾಮೆಂಟರಿ ಪ್ಯಾನಲ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ತಮ್ಮ 23 ವರ್ಷಗಳ ಸುದೀರ್ಘ ಟಿವಿ ಕಾಮೆಂಟೇಟರ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಆದರೆ, ಈ ನಿರ್ಗಮನದ ವೇಳೆ ಅವರು ಕಾಮೆಂಟರಿ ಕ್ಷೇತ್ರದಲ್ಲಿ ನಡೆಯುತ್ತಿರುವ ವರ್ಣಭೇದ ಮತ್ತು ವ್ಯವಸ್ಥಿತ ಪಕ್ಷಪಾತದ ಬಗ್ಗೆ ಸ್ಪೋಟಕ ಆರೋಪಗಳನ್ನು ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.
60 ವರ್ಷದ ಶಿವರಾಮಕೃಷ್ಣನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಂದ್ಯದ ವೇಳೆ ಟಾಸ್ ಪ್ರಕ್ರಿಯೆ ಅಥವಾ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ನಿಮಗೆ ಯಾಕೆ ಅವಕಾಶ ನೀಡುತ್ತಿರಲಿಲ್ಲ ಎಂಬ ಬಳಕೆದಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ಕಾಮೆಂಟೇಟರ್‌ಗಳ ಅನುಪಸ್ಥಿತಿಯಲ್ಲೂ ತಮಗೆ ಅಂತಹ ಉನ್ನತ ಜವಾಬ್ದಾರಿಗಳನ್ನು ನೀಡುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಳಕೆದಾರರೊಬ್ಬರು ನಿಮ್ಮ "ನಿಮ್ಮ ಮೈಬಣ್ಣ" ಇದಕ್ಕೆ ಕಾರಣವೇ? ಎಂದು ಕೇಳಿದ ಪ್ರಶ್ನೆಗೆ, "ನೀವು ಹೇಳುತ್ತಿರುವುದು ಸರಿ. ಇದು ಮೈ ಬಣ್ಣದ ತಾರತಮ್ಯ" ಎಂದು ನೇರವಾಗಿ ಉತ್ತರಿಸಿದ್ದಾರೆ.
ತಮ್ಮ ನಿವೃತ್ತಿಯ ಕುರಿತು ನಿಗೂಢವಾಗಿ ಬರೆದುಕೊಂಡಿರುವ ಅವರು, "ಈ ನಿವೃತ್ತಿಯು ಕೇವಲ ಒಂದು ಕಥೆಯ ಆರಂಭವಷ್ಟೇ. ನಾನು ನಿಜವಾದ ಕಥೆಯನ್ನು ಹೇಳಿದಾಗ ಸಾರ್ವಜನಿಕರು, ಕ್ರಿಕೆಟ್ ಅಭಿಮಾನಿಗಳು ಮತ್ತು ಪ್ರತಿಯೊಬ್ಬರೂ ಅಚ್ಚರಿಯಾಗುವುದು ಖಂಡಿತ," ಎಂದು ಎಚ್ಚರಿಸಿದ್ದಾರೆ. ತಮ್ಮನ್ನು ದ್ವೇಷಿಸುವವರಿಗೆ ಇದು ಸಂತೋಷದ ಸುದ್ದಿಯಿರಬಹುದು, ಆದರೆ ತಾವು ಅನುಭವಿಸಿದ ಕಹಿ ಘಟನೆಗಳ ವಿವರಗಳು ಹೊರಬಂದರೆ ಇಡೀ "ಬಿಸಿಸಿಐ ನಂಬಲಾರದ ಸ್ಥಿತಿಗೆ ತಲುಪುತ್ತದೆ" ಎಂದು ಅವರು ಗುಡುಗಿದ್ದಾರೆ.
ಶಿವರಾಮಕೃಷ್ಣನ್ ಅವರ ಈ ಹಠಾತ್ ನಿರ್ಧಾರಕ್ಕೆ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅಶ್ವಿನ್, "ಅಯ್ಯೋ ಬೇಡ! ಈ ಐಪಿಎಲ್‌ವರೆಗಾದರೂ ಇರಬಾರದಿತ್ತೇ?" ಎಂದು ಪ್ರಶ್ನಿಸುವ ಮೂಲಕ, ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿರುವಾಗ ಈ ನಿರ್ಧಾರ ಕೈಗೊಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
1985ರ ವಿಶ್ವ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿಜಯದ ವೇಳೆ ಪ್ರತಿಭೆಯಾಗಿ ಮಿಂಚಿದ್ದ ಶಿವರಾಮಕೃಷ್ಣನ್, ಭಾರತದ ಪರ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2000ರ ದಶಕದ ಆರಂಭದಿಂದಲೂ ಬಿಸಿಸಿಐನ ಅಧಿಕೃತ ಕಾಮೆಂಟರಿ ಪ್ಯಾನಲ್‌ನ ಅವಿಭಾಜ್ಯ ಅಂಗವಾಗಿದ್ದ ಅವರು, ಸ್ಪಿನ್ ಬೌಲಿಂಗ್ ಕುರಿತಾದ ತಮ್ಮ ತಾಂತ್ರಿಕ ವಿಶ್ಲೇಷಣೆಯಿಂದಾಗಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಗುರುತಿಸಬಹುದಾದ ಧ್ವನಿಗಳಲ್ಲಿ ಒಬ್ಬರಾಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.