ಟೀಂ ಇಂಡಿಯಾ ವಿಜಯಿಯಾತ್ರೆಗೆ 3 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಭಾಗಿ, ಹಲವರಿಗೆ ಗಾಯ!

By Chethan Kumar  |  First Published Jul 5, 2024, 10:16 AM IST

ಟೀಂ ಇಂಡಿಯಾ ಮುಂಬೈನಲ್ಲಿ ಆಯೋಜಿಸಿದ್ದ ವಿಜಯಿ ಯಾತ್ರೆಯಲ್ಲಿ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಭಾಗಿಯಾಗಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಆದರೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಂದ ಹಲವರಿಗೆ ಗಾಯಗಳಾಗಿವೆ.


ಮುಂಬೈ(ಜು.04) ಟಿ ವಿಶ್ವಕಪ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ತವರಿಗೆ ಅಭಿಮಾನಿಗಳ ಪ್ರೀತಿಯ ಸ್ವಾಗತ ಹೊಸ ದಾಖಲೆ ಬರೆದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್ಮಾನ ಬಳಿಕ ಮರೀನ್ ಡ್ರೈವ್ ರಸ್ತೆಯಲ್ಲಿನ ವಿಜಯಿ ಯಾತ್ರೆಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಹಾಜರಾಗಿದ್ದಾರೆ. ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಂದ ಕೆಲವರು ಗಾಯಗೊಂಡಿದ್ದಾರೆ. 5,000 ಪೊಲೀಸರನ್ನಿ ನಿಯೋಜಿಸಲಾಗಿತ್ತು. ಹೀಗಾಗಿ ಅಭಿಮಾನಿಗಳ ಸಂಖ್ಯೆ ಹೆಚ್ಚಾದರೂ ಅನಾಹುತಕ್ಕೆ ಅವಕಾಶ ನೀಡಿಲ್ಲ. 

ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಮುಂಬೈನ ಮರೈನ್‌ ಡ್ರೈವ್‌ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಮಧ್ಯಾಹ್ನದಿಂದಲೇ ಅಭಿಮಾನಿಗಳು ನೆರೆದಿದ್ದರು. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸಂಜೆಯಾಗುತ್ತಲೇ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ರಸ್ತೆಯಲ್ಲಿ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಪೊಲೀಸರು, ಭದ್ರತಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಮೆರವಣಿಗೆ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿತು. ಸಂಜೆ 5 ಗಂಟೆಗೆ ಮೆರವಣಿಗೆ ನಿಗದಿಯಾಗಿದ್ದರೂ ಆಟಗಾರರು ಮುಂಬೈ ತಲುಪುವುದು ವಿಳಂಬವಾದ ಕಾರಣ, ಸಂಜೆ 7.40ರ ಬಳಿಕ ಮೆರವಣಿಗೆ ಶುರುವಾಯಿತು.

Latest Videos

undefined

ಸಂಭ್ರಮ ಯಾತ್ರೆಯಲ್ಲಿ ಕೊಹ್ಲಿ ಟ್ರೋಫಿ ನೀಡುತ್ತಿದ್ದಂತೆ ಭಾವುಕರಾದ ರಿಷಬ್ ಪಂತ್!

17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡದ ಆಟಗಾರರಿಗೆ ತವರಿನಲ್ಲಿ ಕಂಡು ಕೇಳರಿಯದ ರೀತಿ ಅದ್ಧೂರಿ ಸ್ವಾಗತ ಲಭಿಸಿದೆ. ಮುಂಬೈನಲ್ಲಿ ತೆರೆದ ವಾಹನದಲ್ಲಿ ಆಟಗಾರರು ಭರ್ಜರಿ ಮೆರವಣಿಗೆ ನಡೆಸಿದ್ದು, ಲಕ್ಷಾಂತರ ಮಂದಿ ಸಾಕ್ಷಿಯಾಗಿದ್ದಾರೆ.

ಚಂಡಮಾರುತ ಕಾರಣಕ್ಕೆ ವಿಶ್ವಕಪ್‌ ಮುಗಿದ 3 ದಿನಗಳಾದರೂ ಬಾರ್ಬಡೊಸ್‌ನಲ್ಲೇ ಬಾಕಿಯಾಗಿದ್ದ ಭಾರತದ ಆಟಗಾರರು, ಕೋಚ್‌ಗಳು ಹಾಗೂ ಬಿಸಿಸಿಐ ಅಧಿಕಾರಿಗಳು ಗುರುವಾರ ಬೆಳಗ್ಗೆ ನವದೆಹಲಿ ವಿಮಾನ ನಿಲ್ದಾಣಕ್ಕೆ ತಲುಪಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಉಪಹಾರ ಕೂಟದಲ್ಲಿ ಪಾಲ್ಗೊಂಡ ಆಟಗಾರರು, ಅಲ್ಲಿಂದ ಮುಂಬೈಗೆ ಆಗಮಿಸಿ ಬೃಹತ್‌ ಮೆರವಣಿಗೆ ಪಾಲ್ಗೊಂಡರು.

ನಾರಿಮನ್‌ ಪಾಯಿಂಟ್‌ನಿಂದ ಮರೈನ್‌ ಡ್ರೈವ್‌ ಮಾರ್ಗವಾಗಿ ವಾಂಖೇಡೆ ಕ್ರೀಡಾಂಗಣದ ವರೆಗೆ ಆಟಗಾರರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸುಮಾರು 1 ಗಂಟೆಗಳ ಕಾಲ ನಡೆದ ಮೆರವಣಿಗೆ ವೇಳೆ ಅಭಿಮಾನಿಗಳು ಆಟಗಾರರನ್ನು ಜೈಕಾರ ಕೂಗಿ ಸ್ವಾಗತಿಸಿದರು.

ರಸ್ತೆಯ 2 ಕಡೆಗಳಲ್ಲೂ ತುಂಬಿದ್ದ ಅಪಾರ ಪ್ರಮಾಣದ ಅಭಿಮಾನಿಗಳು, ಆಟಗಾರರ ಫೋಟೋ ಪ್ರದರ್ಶಿಸಿ, ಜೈ ಹೋ ಟೀಂ ಇಂಡಿಯಾ, ಭಾರತ್ ಮಾತಾಕಿ ಜೈ ಘೋಷಣೆಗಳ ಮೂಲಕ ಖುಷಿಪಟ್ಟರು. ಈ ವೇಳೆ ಆಟಗಾರರು ಕೂಡಾ ಟ್ರೋಫಿ, ವಿಜಯದ ಸಂಕೇತ ಪ್ರದರ್ಶಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

News Hour: ವಿಶ್ವ ವಿಜೇತರಿಗೆ ತವರಲ್ಲಿ ಅದ್ದೂರಿ ಸ್ವಾಗತ, ವಿಜಯಯಾತ್ರೆಗೆ ಸೇರಿದ ಜನಸಾಗರ!
 

click me!