Aus vs SL: ಅಂಪೈರ್ ಎನ್ನುವುದನ್ನೂ ಮರೆತು ಕ್ಯಾಚ್ ಹಿಡಿಯಲು ಮುಂದಾದ ಧರ್ಮಸೇನಾ..! ವಿಡಿಯೋ ವೈರಲ್‌

By Naveen KodaseFirst Published Jun 21, 2022, 1:54 PM IST
Highlights

* ದ್ವೀಪ ರಾಷ್ಟ್ರ ಲಂಕಾದಲ್ಲಿ ನಡೆಯುತ್ತಿದೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿ
* ಮೂರನೇ ಏಕದಿನ ಪಂದ್ಯದಲ್ಲಿ ಅಂಪೈರ್ ಎನ್ನುವುದನ್ನು ಮರೆತು ಕ್ಯಾಚ್ ಹಿಡಿಯಲು ಮುಂದಾಗಿದ್ದ ಕುಮಾರ ಧರ್ಮಸೇನಾ
* ಕುಮಾರ ಧರ್ಮಸೇನಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಕೊಲಂಬೋ(ಜೂ.21): ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ (Australia vs Sri Lanka) ತಂಡಗಳ ನಡುವಿನ 5 ಪಂದ್ಯಗಳ ಏಕದಿನ ಸರಣಿ ಭರ್ಜರಿಯಾಗಿಯೇ ಸಾಗುತ್ತಿದ್ದು, ಆತಿಥೇಯ ಶ್ರೀಲಂಕಾ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ದಸುನ್ ಶನಕಾ ನೇತೃತ್ವದ ಲಂಕಾ ತಂಡವು ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ. ಈ ಮೊದಲು ಟಿ20 ಸರಣಿಯಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳುವ ಹೊಸ್ತಿಲಲ್ಲಿದೇ ದ್ವೀಪ ರಾಷ್ಟ್ರ ಲಂಕಾ. ಇದೆಲ್ಲದರ ನಡುವೆ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ವೇಳೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕುಮಾರ ಧರ್ಮಸೇನಾ ಲಂಕಾ ಪರ ಕ್ಯಾಚ್ ಹಿಡಿಯಲು ಮುಂದಾಗಿದ್ದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯಕ್ಕೆ ಕೊಲಂಬೊದ ಆರ್‌ ಪ್ರೇಮದಾಸ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ, ಚೆಂಡನ್ನು ಲೆಗ್‌ ಸ್ಕ್ವೇರ್‌ನತ್ತ ಬಾರಿಸಿದರು. ಈ ವೇಳೆ ಲೆಗ್ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ ಧರ್ಮಸೇನಾ (Kumar Dharmasena) ತಮ್ಮತ್ತ ಬರುತ್ತಿದ್ದ ಚೆಂಡನ್ನು ಕ್ಯಾಚ್ ಹಿಡಿಯಲು ಮುಂದಾಗಿ ಕೊನೆಯ ಕ್ಷಣದಲ್ಲಿ ಸುಮ್ಮನಾದರು. ಚೆಂಡು ತಮ್ಮತ್ತ ಬರುತ್ತಿದ್ದಂತೆಯೇ ಕ್ಯಾಚ್‌ಗೆ ಯತ್ನಿಸಿದ್ದ ಧರ್ಮಸೇನಾಗೆ ತಾವು ಆಟಗಾರನಲ್ಲ ಬದಲಾಗಿ ಅಂಪೈರ್ ಎಂದು ಕೊನೆಯ ಕ್ಷಣದಲ್ಲಿ ಜ್ಞಾಪಕ ಬಂದಂತೆ ಕಂಡುಬಂದಿದೆ. ಚೆಂಡು ಹಿಡಿಯುವ ಕೊನೆಯ ಕ್ಷಣದಲ್ಲಿ ಧರ್ಮಸೇನಾ ಹಿಂದೆ ಸರಿದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Kumar Dharmasena going for a catch in SL vs Aus Odi match pic.twitter.com/DYyxn6kEsy

— Sportsfan Cricket (@sportsfan_cric)

ಸದ್ಯ ಐಸಿಸಿಯ ಪ್ರಮುಖ ಅಂಪೈರ್‌ಗಳಲ್ಲಿ ಒಬ್ಬರಾಗಿರುವ ಕುಮಾರ ಧರ್ಮಸೇನಾ ಈ ಮೊದಲು ಶ್ರೀಲಂಕಾ ಕ್ರಿಕೆಟ್ ತಂಡವನ್ನು (Sri Lanka Cricket Team) ಪ್ರತಿನಿಧಿಸಿದ್ದಾರೆ. ಇದಷ್ಟೇ ಅಲ್ಲದೇ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಫೈನಲ್‌ನಲ್ಲಿ ಆಟಗಾರನಾಗಿ ಹಾಗೂ ಅಂಪೈರ್‌ ಆಗಿ ಕಾಣಿಸಿಕೊಂಡ ಏಕೈಕ ಕ್ರೀಡಾಪಟುವ ಎನ್ನುವ ಕೀರ್ತಿ ಕೂಡಾ ಕುಮಾರ ಧರ್ಮಸೇನಾ ಹೆಸರಿನಲ್ಲಿದೆ. ಕುಮಾರ ಧರ್ಮಸೇನಾ ಶ್ರೀಲಂಕಾ ಪರ 31 ಟೆಸ್ಟ್ ಹಾಗೂ 141 ಏಕದಿನ ಪಂದ್ಯಗಳನ್ನಾಡಿದ್ದಾರೆ. 1996ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಫೈನಲ್ ಪ್ರವೇಶಿಸಿದ್ದ ತಂಡದಲ್ಲಿ ಧರ್ಮಸೇನಾ ಆಟಗಾರರಾಗಿದ್ದರು. ಇನ್ನು 2015 ಹಾಗೂ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಧರ್ಮಸೇನಾ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 

Aus vs SL ODI: ಆಸ್ಟ್ರೇಲಿಯಾವನ್ನು ಬಗ್ಗುಬಡಿದ ಶ್ರೀಲಂಕಾ..!

ಇನ್ನು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದ ವಿಚಾರಕ್ಕೆ ಬರುವುದಾದರೇ, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ (Aaron Finch) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಡೇವಿಡ್ ವಾರ್ನರ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದರೂ ಸಹಾ ಮತ್ತೊಂದು ತುದಿಯಲ್ಲಿ ನಾಯಕನ ಆಟವನ್ನು ಪ್ರದರ್ಶಿಸಿದ ಆರೋನ್ ಫಿಂಚ್ ಆಕರ್ಷಕ 62 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್ ಹೆಡ್ ಬಾರಿಸಿದ ಅಜೇಯ ಅರ್ಧಶತಕ(70*) ಹಾಗೂ ಅಲೆಕ್ಸ್ ಕ್ಯಾರಿ ಬಾರಿಸಿದ ಸಮಯೋಚಿತ 49 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿತ್ತು.

ಇನ್ನು ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು ಇನ್ನೂ 9 ಎಸೆತಗಳು ಭಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಚೊಚ್ಚಲ ಶತಕ ಸಿಡಿಸಿದ ಪಥುಮ್ ನಿಸ್ಸಾಂಕ(137) ಹಾಗೂ ಸಮಯೋಚಿತ ಅರ್ಧಶತಕ ಸಿಡಿಸಿದ ಕುಸಾಲ್ ಮೆಂಡಿಸ್(87) ಲಂಕಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು.  

click me!