ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ಲಾಸ್ಟಿಕ್‌ ತುಂಡಾಗಿಸುವ ಯಂತ್ರ ಅನಾವರಣ

By Kannadaprabha NewsFirst Published Jan 17, 2020, 2:55 PM IST
Highlights

ಈಗಾಗಲೇ ಸೌರ ಶಕ್ತಿ ಬಳಕೆ, ಸಬ್‌-ಏರ್‌ ವ್ಯವಸ್ಥೆ, ಮಳೆ ನೀರು ಕೊಯ್ಲು, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಹಲವು ಪರಿಸರ ಸ್ನೇಹಿ ಯೋಜನೆ ಅಳವಡಿಸಿಕೊಂಡಿರುವ ಕೆಎಸ್‌ಸಿಎ ಇದೀಗ ಮತ್ತೊಂದು ಅಂತಹದ್ದೇ ದಿಟ್ಟ ಹೆಜ್ಜೆ ಇಟ್ಟಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು(ಜ.17): ಪರಿಸರ ಸಂರಕ್ಷಣೆಗಾಗಿ ಕರ್ನಾಟಕ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ. ಪ್ಲಾಸ್ಟಿಕ್‌ ಬಾಟಲಿಗಳನ್ನು ಶ್ರೆಡ್ಡರ್‌ ಮಾಡುವ ಯಂತ್ರವೊಂದನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರಿಸಲಾಗಿದೆ.

ಚಿನ್ನ​ಸ್ವಾಮಿ ಸಬ್‌-ಏರ್‌ ವ್ಯವಸ್ಥೆಗೆ ದಾದಾ ಮೆಚ್ಚುಗೆ!

ಈ ಯಂತ್ರವನ್ನು ಗುರುವಾರ, ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಅನಾವರಣ ಮಾಡಿದರು. ನಂತರ ಪ್ಲಾಸ್ಟಿಕ್‌ ಬಾಟಲಿಗಳನ್ನು ಶ್ರೆಡ್ಡರ್‌ನಲ್ಲಿ ಹಾಕುವ ಮೂಲಕ ಪುಡಿಯಾಗುವ ಮಾದರಿಯನ್ನು ತೋರಿಸಿದರು. ನಂತರ ಈ ಬಗ್ಗೆ ಮಾತನಾಡಿದ ಬಿನ್ನಿ, ಕ್ರೀಡಾಂಗಣದಲ್ಲಿ ಈಗಾಗಲೇ ಸೌರ ಶಕ್ತಿ ಬಳಕೆ, ಸಬ್‌-ಏರ್‌ ವ್ಯವಸ್ಥೆ, ಮಳೆ ನೀರು ಕೊಯ್ಲು, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಹಲವು ಪರಿಸರ ಸಂರಕ್ಷಣೆ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಈಗ ಪ್ಲಾಸ್ಟಿಕ್‌ ಶ್ರೆಡ್ಡರ್‌ ಯಂತ್ರ ಕಾರ್ಯನಿರ್ವಹಿಸಲಿದೆ ಎಂದರು.

ಇದು ವಿರಾಟ್ ಕೊಹ್ಲಿಯ ಅವಿಸ್ಮರಣೀಯ ಕ್ಷಣವಂತೆ..!

ಕ್ರೀಡಾಂಗಣದ ಆವರಣದಲ್ಲಿ ಪ್ರಾಯೋಗಿಕವಾಗಿ ಪ್ಲಾಸ್ಟಿಕ್‌ ಶ್ರೆಡ್ಡರ್‌ ಯಂತ್ರವನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ಸುತ್ತಲು ಈ ಯಂತ್ರ ಅಳವಡಿಸುವ ಯೋಜನೆ ಇದೆ. ಪಂದ್ಯದ ವೇಳೆ ಪ್ಲಾಸ್ಟಿಕ್‌ ಬಾಟಲಿಗಳನ್ನು ನಿಷೇಧಿಸಲಾಗಿದೆ. ಆದರೂ ಕ್ರೀಡಾಂಗಣದಲ್ಲಿ ವರ್ಷಕ್ಕೆ ಸುಮಾರು 4 ಲಕ್ಷ ಪ್ಲಾಸ್ಟಿಕ್‌ ಬಾಟಲಿಗಳು ಸಂಗ್ರಹವಾಗುತ್ತಿವೆ. ಇದನ್ನು ಶ್ರೆಡ್ಡರ್‌ನಲ್ಲಿ ಹಾಕಲಾಗುತ್ತದೆ. ನಂತರ ಅದರಿಂದ ಸಿಗುವ ತ್ಯಾಜ್ಯವನ್ನು ಟೀ-ಶರ್ಟ್‌, ಸ್ಪೋರ್ಟ್ಸ್ ಶೂ, ಎಲೆಕ್ಟ್ರಾನಿಕ್ಸ್‌ ಉಪಕರಣಗಳು, ರಸ್ತೆಗೆ ಹಾಕುವ ಟಾರ್‌ನಲ್ಲಿ ಬಳಸಲಾಗುತ್ತದೆ. ದೇಶದಲ್ಲೇ ಇಂತಹ ಯಂತ್ರವನ್ನು ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿದ್ದು, ಕೆಎಸ್‌ಸಿಎ ಹೆಮ್ಮೆಯಾಗಿದೆ ಎಂದು ಖಜಾಂಚಿ ವಿನಯ್‌ ಮೃತ್ಯುಂಜಯ ವಿವರಿಸಿದರು.

 

click me!