
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಕಾವೇರುತ್ತಿದ್ದು, ನ.30ರಂದು ನಡೆಯಲಿರುವ ಚುನಾವಣೆಗೆ ಬುಧವಾರದಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ‘ಟೀಂ ಗೇಮ್ ಚೇಂಜರ್ಸ್’ ಹೆಸರಿನೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ತಮ್ಮ ತಂಡವನ್ನು ಪರಿಚಯಿಸಿದರು. ಈ ವೇಳೆ ಎದುರಾಳಿ ತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಪ್ರಸಾದ್, ಕೆಎಸ್‌ಸಿಎ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟೀಂ ಗೇಮ್ ಚೇಂಜರ್ಸ್ ತಂಡದ ಪರ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಕಣಕ್ಕಿಳಿಯುತ್ತಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಸುಜಿತ್ ಸೋಮ್‌ಸುಂದರ್, ಕಾರ್ಯದರ್ಶಿ ಸ್ಥಾನಕ್ಕೆ ಕೆಎಸ್‌ಸಿಎ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎವಿ ಶಶಿಧರ, ಖಜಾಂಚಿ ಸ್ಥಾನಕ್ಕೆ ಬಿ.ಎನ್.ಮಧುಕರ್ ಸ್ಪರ್ಧೆ ಮಾಡಲಿದ್ದಾರೆ. ಮಾಜಿ ಕ್ರಿಕೆಟರ್‌ಗಳಾದ ಕಲ್ಪನಾ ವೆಂಕಟಾಚಾರ್, ಅವಿನಾಶ್ ವೈದ್ಯ ಸೇರಿ ಹಲವು ಅನುಭವಿಗಳ ಸಹ ವಿವಿಧ ಹುದ್ದೆಗಳಿಗೆ ಸ್ಪರ್ಧಿಸಲಿದ್ದಾರೆ.
ಮಾಜಿ ಕ್ರಿಕೆಟಿಗ, ಮಾಜಿ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವೆಂಕಟೇಶ್ ಪ್ರಸಾದ್, ‘ಚುನಾವಣೆಯಲ್ಲಿ ಬ್ರಿಜೇಶ್ ತಮ್ಮ ಕೈಗೊಂಬೆಗಳನ್ನು ಕಣಕ್ಕಿಳಿಸುತ್ತಿದ್ದಾರೆ’ ಎಂದು ಆರೋಪಿಸಿದರು. ‘ಕಳೆದ 28 ವರ್ಷಗಳಿಂದ ಕೆಎಸ್‌ಸಿಎಯನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಬ್ರಿಜೇಶ್, ಹಿಂಬದಿ ಆಸನದಲ್ಲಿ ಕೂತು ಸವಾರಿ ಮಾಡುತ್ತಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಅವರಿಷ್ಟದಂತೆ ಎಲ್ಲವೂ ನಡೆಯುತ್ತಿದೆ. ಇದು ನಿಲ್ಲಬೇಕು. ರಾಜ್ಯ ಕ್ರಿಕೆಟ್ ಅಧಃಪತನದತ್ತ ಸಾಗಿದ್ದು, ಅದನ್ನು ತಡೆಯಬೇಕು ಎನ್ನುವ ದೃಢ ಸಂಕಲ್ಪದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಈಗಾಗಲೇ 250-300 ಸದಸ್ಯರನ್ನು ಸಂಪರ್ಕಿಸಿದ್ದು, ಎಲ್ಲರೂ ಬದಲಾವಣೆ ಬಯಸುತ್ತಿದ್ದಾರೆ. ರಾಜ್ಯದ ಬಹುತೇಕ ಮಾಜಿ ಕ್ರಿಕೆಟಿಗರು ನಮ್ಮ ತಂಡವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಕುಂಬ್ಳೆ, ಶ್ರೀನಾಥ್‌ರಂಥ ದಿಗ್ಗಜರು ನಮ್ಮ ಬೆನ್ನಿಗೆ ನಿಂತಿದ್ದಾರೆ’ ಎಂದರು.
ಇದಕ್ಕೂ ಮುನ್ನ ಸುಜಿತ್ ಸೋಮ್‌ಸುಂದರ್ ಮಾತನಾಡಿ, ಶಿವಮೊಗ್ಗ, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ, ಮೈಸೂರುಗಳಲ್ಲಿ ಕ್ರಿಕೆಟ್ ಮೂಲಸೌಕರ್ಯ ಹೇಗೆ ಕುಸಿದಿದೆ, ಮೈದಾನ, ಕ್ರೀಡಾಂಗಣಗಳು ಕಟ್ಟಡಗಳು ಹೇಗೆ ಹಾಳಾಗಿವೆ ಎಂದು ವಿವರಿಸಿದರು. ಜೊತೆಗೆ ಕಿರಿಯರ ವಿಭಾಗದಲ್ಲಿ ಕ್ರಿಕೆಟರ್‌ಗಳಿಗೆ ಆಗುತ್ತಿರುವ ಅನ್ಯಾಯ. ಪಂದ್ಯಗಳ ಸಂಖ್ಯೆ ಎಷ್ಟು ಗಣನೀಯ ಪ್ರಮಾಣದಲ್ಲಿ ಇಳಿದಿದೆ ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಇತ್ತೀಚೆಗೆ ಕೆಎಸ್‌ಸಿಎ ಆಡಳಿತ ಮಂಡಳಿಯು ಟೂರ್ನಿಯ ಮಧ್ಯೆ ಒಂದು ತಂಡಕ್ಕೆ ಅನುಕೂಲವಾಗುವಂತೆ ನಿಯಮಗಳನ್ನು ಬದಲಿಸಿದೆ ಎಂದ ಅವರು, ತಂಡದ ಆಯ್ಕೆ ಕೆಎಸ್‌ಸಿಎ ಮೀಟಿಂಗ್ ರೂಂ ಬದಲು ಪ್ರಭಾವಿಯೊಬ್ಬರ ಮನೆಯಲ್ಲಿ ನಡೆಯುತ್ತಿದೆ ಎಂದೂ ಆರೋಪಿಸಿದರು.
ವೆಂಕಿ ತಂಡಕ್ಕೆ ಬೆಂಬಲ ನೀಡಲು ಆಗಮಿಸಿದ್ದ ಭಾರತದ ಮಾಜಿ ನಾಯಕ, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್ ಕುಂಬ್ಳೆ ಮಾತನಾಡಿ, ‘15 ವರ್ಷಗಳ ಹಿಂದೆ ನಾವು ಮಾಡಿದ್ದ ಕೆಲಸಗಳೆಲ್ಲವೂ ಈಗ ವ್ಯರ್ಥ ಎನ್ನುವಂತಾಗಿದೆ. ಪ್ರಮುಖವಾಗಿ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆ ಅತೀವ ನೋವು ತಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣ ನಮಗೆಲ್ಲಾ ದೇವಸ್ಥಾನ ಇದ್ದ ಹಾಗೆ. ಈಗಲೂ ಅದರ ಸುತ್ತ ಮುತ್ತ ಓಡಾಡುವಾಗ ನಮಸ್ಕಾರ ಮಾಡಿಕೊಂಡು ಹೋಗುತ್ತೇವೆ. ಆದರೀಗ ಅಲ್ಲಿ ಕ್ರಿಕೆಟ್ ಸಂಪೂರ್ಣವಾಗಿ ನಿಂತು ಹೋಗಿದೆ. ಒಂದೂ ಅಂ.ರಾ. ಪಂದ್ಯ ಸಿಗುತ್ತಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವ ಮರಳಬೇಕು. ಅದಕ್ಕಾಗಿ ಪ್ರಸಾದ್‌ರ ತಂಡ ಅಧಿಕಾರಕ್ಕೆ ಬರಬೇಕು’ ಎಂದರು.
ಜಾವಗಲ್ ಶ್ರೀನಾಥ್ ಮಾತನಾಡಿ, ‘2010-13ರ ವರೆಗೂ ನಾವು ಕೆಎಸ್‌ಸಿಎ ಆಡಳಿತದಲ್ಲಿ ಇದ್ದಾಗ ಬ್ರಿಜೇಶ್ ಪಟೇಲ್ ಕೈಯಲ್ಲಿ ಯಾವ ಅಧಿಕಾರವೂ ಇರಲಿಲ್ಲ. ಆ 3 ವರ್ಷಗಳಲ್ಲಿ ನಾವು 13 ಹೊಸ ಮೈದಾನಗಳನ್ನು ಮಾಡಿದ್ದೆವು. ಆ ಬಳಿಕ ಒಂದೇ ಒಂದು ಮೈದಾನ ಆಗಿಲ್ಲ. ಅಲ್ಲದೇ ಅವೆಲ್ಲವೂ ಈಗ ಹಾಳಾಗಿವೆ. ಈ ರೀತಿಯ ಆಡಳಿತ ಇರಬಾರದು’ ಎಂದು ಬೇಸರ ವ್ಯಕ್ತಪಡಿಸಿದರು.
‘ಆಟಗಾರರು ಪನ್ನೀರ್ ಕೇಳಿದರೂ ಕೊಟ್ಟಿಲ್ಲ’
ಕೆಎಸ್‌ಸಿಎಗೆ ಪ್ರತಿ ವರ್ಷ ಬಿಸಿಸಿಐನಿಂದ ನೂರಾರು ಕೋಟಿ ಅನುದಾನ ಸಿಗುತ್ತದೆ. ಕಳೆದ ವರ್ಷ 115 ಕೋಟಿ ರು. ಬಂದಿದೆ. ಎಲ್ಲವನ್ನೂ ಬ್ಯಾಂಕ್‌ನಲ್ಲಿ ಎಫ್‌ಡಿ ಇಡುವುದರಿಂದ ಕ್ರಿಕೆಟ್ ಬೆಳವಣಿಗೆ ಆಗುವುದಿಲ್ಲ. ಅದನ್ನು ಮಾಡಲು ಕ್ರಿಕೆಟ್ ಆಡಳಿತಗಾರರಾಗಬೇಕಾಗಿಲ್ಲ. ಕಳೆದ 3 ವರ್ಷದಲ್ಲಿ ಕೆಎಸ್‌ಸಿಎ ಆಡಳಿತ ಎಷ್ಟು ಕಳಪೆಯಾಗಿದೆ ಎಂದರೆ, ಆಟಗಾರರು ಪ್ರೊಟೀನ್‌ಗಾಗಿ ಪನ್ನೀರ್ ಕೇಳಿದರೆ ಅದನ್ನೂ ಕೊಟ್ಟಿಲ್ಲ. ಇನ್ನು, ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಅಂತೂ ಹೇಳ ಹೆಸರಿಲ್ಲದಂತಾಗಿದೆ. ಇದೆಲ್ಲವೂ ಬದಲಾಗಬೇಕು.
- ವೆಂಕಟೇಶ್ ಪ್ರಸಾದ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.