
ಬೆಂಗಳೂರು: ₹200 ಹಿಂಬಾಕಿ ಪಾವತಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಹುದ್ದೆಗೆ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ.ಎನ್.ಶಾಂತಕುಮಾರ್ ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಗುರುವಾರ ಅರ್ಜಿದಾರರು ಮತ್ತು ಚುನಾವಣಾಧಿಕಾರಿ ಸೇರಿ ಎಲ್ಲರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರ ಪೀಠ ತೀರ್ಪು ಕಾಯ್ದಿರಿಸಿದೆ. ಅಲ್ಲದೆ, ಅಧ್ಯಕ್ಷರ ಹುದ್ದೆ ಆಕಾಂಕ್ಷಿಗಳ ಪೈಕಿ ಕಣದಲ್ಲಿರುವವರ ಪಟ್ಟಿಯನ್ನು ಅರ್ಜಿ ಕುರಿತು ತೀರ್ಪು ನೀಡುವವರೆಗೆ ಪ್ರಕಟಿಸಬಾರದು ಎಂದು ಚುನಾವಣಾಧಿಕಾರಿಗೆ ಸೂಚಿಸಿರುವ ನ್ಯಾಯಪೀಠ, ಸೋಮವಾರ ಅಂತಿಮ ಆದೇಶ ಪ್ರಕಟಿಸುವ ಸುಳಿವು ನೀಡಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಚುನಾವಣಾಧಿಕಾರಿ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ನಾಮಪತ್ರ ಪರಿಶೀಲನೆಯ ವಿಡಿಯೊ ರೆಕಾರ್ಡ್ ಅನ್ನು ಪೀಠಕ್ಕೆ ಸಲ್ಲಿಸಿದರು. ಅರ್ಜಿದಾರರು ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ರೀಡಾ ಕ್ಲಬ್ ಪ್ರತಿನಿಧಿಸಲಿದ್ದಾರೆ. ಬಾಕಿಯಿದ್ದ ಕ್ಲಬ್‌ನ 200 ರು. ಚಂದಾ ಹಣ ಪಾವತಿಸಿರುವ ರಶೀದಿಯನ್ನು ನಾಮಪತ್ರ ಪರಿಶೀಲನೆ ವೇಳೆಗೆ ಅರ್ಜಿದಾರರು ಹಾಜರುಪಡಿಸಿದ್ದರು ಎಂದು ಸ್ಪಷ್ಟಪಡಿಸಿದರು.
ಅರ್ಜಿದಾರರ ಪರ ವಕೀಲರು, ನಾಮಪತ್ರ ಪರಿಶೀಲನೆ ವೇಳೆಗೆ ಅರ್ಜಿದಾರರು ಹಿಂಬಾಕಿಯಿದ್ದ 200 ರು. ಚಂದಾ ಹಣ ಪಾವತಿಸಿರುವ ರಶೀದಿ ಹಾಜರುಪಡಿಸಿದ್ದಾರೆ ಎಂಬುದಾಗಿ ಚುನಾವಣಾಧಿಕಾರಿ ಇಂದು ನ್ಯಾಯಲಯಕ್ಕೆ ಸ್ಪಷ್ಪಪಡಿಸಿದ್ದಾರೆ. ಇದರಿಂದ ವಾಸ್ತವಿಕ ವಿಚಾರಗಳ ಕುರಿತು ಯಾವುದೇ ತಕರಾರು ಉಳಿದಿಲ್ಲ. ಆದರೂ ಹಿಂಬಾಕಿಯಿರುವವರ ಪಟ್ಟಿಯನ್ನು ಕೆಎಸ್‌ಸಿಎ ಪ್ರಕಟಿಸಬೇಕಿತ್ತು ಎಂದು ವಾದಿಸಿದರು.
ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಮತ್ತು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪರ ವಕೀಲರು, ಕೆಎಸ್‌ಸಿಎ ಅಧ್ಯಕ್ಷ ಗಾದಿಯ ಆಕಾಂಕ್ಷಿಯಾಗಿರುವ ಅರ್ಜಿದಾರರು 200ರು. ಹಿಂಬಾಕಿ ಉಳಿಸಿಕೊಂಡಿದ್ದಾರೆ. 200 ರು. ರುಪಾಯಿ ಏನೇನೂ ಅಲ್ಲ. ಆದರೆ, ನಾಮಪತ್ರ ಸಲ್ಲಿಸುವಾಗಲೇ ಅವರು ಹಿಂಬಾಕಿ ಪಾವತಿಸಬೇಕಿತ್ತು ಎಂದರು.
ಕೆಎಸ್‌ಸಿಎ ಪರ ವಕೀಲರು, ಹಿಂಬಾಕಿ ಪಾವತಿಸದಿದ್ದರೂ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಕ್ಲಬ್‌ಗೆ ಟೂರ್ನಿಯಲ್ಲಿ ಭಾಗವಹಿಸಲು ಅನುಮತಿಸಲಾಗಿತ್ತು. ಹಿಂಬಾಕಿ ಪಾವತಿ ಮಾಡದಿದ್ದವರ ಪಟ್ಟಿಯನ್ನು ಕೆಎಸ್‌ಸಿಎ ಸಿದ್ಧಪಡಿಸಬೇಕಿತ್ತು. ಅದನ್ನು ಮಾಡದಿರುವುದು ನಮ್ಮ (ಕೆಎಸ್‌ಸಿಎ) ತಪ್ಪು ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.