ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕೆಕೆಆರ್ ತಂಡಕ್ಕೆ ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ಆಪತ್ಬಾಂದವ ಎನಿಸಿಕೊಂಡರು, ಮುಂಬೈ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದ ವೆಂಕಿ ಅಯ್ಯರ್ ಕೇವಲ 21 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 42 ರನ್ ಬಾರಿಸಿ ಪೀಯೂಸ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.
ಕೋಲ್ಕತಾ(ಮೇ.11): ವೆಂಕಟೇಶ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿಗದಿತ 16 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಬಾರಿಸಿದ್ದು, ಮುಂಬೈ ಇಂಡಿಯನ್ಸ್‌ಗೆ ಸವಾಲಿನ ಗುರಿ ನೀಡಿದೆ. ಮುಂಬೈ-ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಪ್ರತಿ ಇನಿಂಗ್ಸ್ 16 ಓವರ್‌ಗೆ ನಿಗದಿ ಪಡಿಸಲಾಗಿದೆ.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿ ಹೋಯಿತು. ಫಿಲ್ ಸಾಲ್ಟ್ 6 ರನ್ ಬಾರಿಸಿ ನುವಾನ್ ತುಷಾರಗೆ ವಿಕೆಟ್ ಒಪ್ಪಿಸಿದರೆ, ಸುನಿಲ್ ನರೈನ್ ಖಾತೆ ತೆರೆಯುವ ಮುನ್ನ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಕೆಕೆಆರ್ ತಂಡವು 10 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಹಾದಿ ಹಿಡಿದರು. ಇನ್ನು ನಾಯಕ ಶ್ರೇಯಸ್ ಅಯ್ಯರ್ ಮತ್ತೊಮ್ಮೆ ಬ್ಯಾಟಿಂಗ್ ವೈಪಲ್ಯ ಅನುಭವಿಸಿದರು. ಶ್ರೇಯಸ್ ಅಯ್ಯರ್ 7 ರನ್ ಗಳಿಸಿ ಕಂಬೋಜ್‌ಗೆ ವಿಕೆಟ್ ಒಪ್ಪಿಸಿದರು.
ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕೆಕೆಆರ್ ತಂಡಕ್ಕೆ ವೆಂಕಟೇಶ್ ಅಯ್ಯರ್ ಮತ್ತೊಮ್ಮೆ ಆಪತ್ಬಾಂದವ ಎನಿಸಿಕೊಂಡರು, ಮುಂಬೈ ಬೌಲರ್‌ಗಳ ಎದುರು ಸ್ಪೋಟಕ ಬ್ಯಾಟಿಂಗ್ ನಡೆಸಿದ ವೆಂಕಿ ಅಯ್ಯರ್ ಕೇವಲ 21 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 42 ರನ್ ಬಾರಿಸಿ ಪೀಯೂಸ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.
ಇನ್ನು ಅಂಗ್‌ಕೃಷ್ ರಘುವಂಶಿ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ನಿತೀಶ್ ರಾಣಾ 23 ಎಸೆತಗಳಲ್ಲಿ 33 ರನ್ ಬಾರಿಸಿ ರನೌಟ್ ಆದರೆ, ರಸೆಲ್ 14 ಎಸೆತಗಳಲ್ಲಿ 24 ರನ್ ಬಾರಿಸಿ ಪೀಯೂಸ್ ಚಾವ್ಲಾಗೆ ಎರಡನೇ ಬಲಿಯಾದರು.
ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್ 12 ಎಸೆತಗಳಲ್ಲಿ 20 ರನ್ ಬಾರಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಇನ್ನು ರಮಣ್‌ದೀಪ್ ಸಿಂಗ್ ಅಜೇಯ 17 ರನ್ ಸಿಡಿಸಿ ತಂಡದ ಮೊತ್ತವನ್ನು 155ರ ಗಡಿ ದಾಟಿಸಿದರು.
ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ ಹಾಗೂ ಪೀಯೂಸ್ ಚಾವ್ಲಾ ತಲಾ 2 ವಿಕೆಟ್ ಪಡೆದರೆ, ನುವಾನ್ ತುಷಾರ ಮತ್ತು ಅನ್ಸೂಲ್ ಕಂಬೊಜ್ ತಲಾ ಒಂದೊಂದು ವಿಕೆಟ್ ಪಡೆದರು.