
ಬೆಂಗಳೂರು: ವೆಸ್ಟ್ ಇಂಡೀಸ್ ಮಾಜಿ ಆಲ್ರೌಂಡರ್ ಕೀರನ್ ಪೊಲ್ಲಾರ್ಡ್ ಮತ್ತೊಮ್ಮೆ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಪೊಲ್ಲಾರ್ಡ್ ಅತಿಹೆಚ್ಚು ರನ್ ಸಿಡಿಸುವ ಮೂಲಕ ಇದೀಗ ಮತ್ತೊಮ್ಮೆ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಕೆರಿಬಿಯನ್ ಮೂಲದ ಕ್ರಿಕೆಟಿಗ ಯಶಸ್ವಿಯಾಗಿದ್ದಾರೆ.
ಟಿ20 ಕ್ರಿಕೆಟ್ ಮಾದರಿಯಲ್ಲಿ ಮುಂಬೈ ಇಂಡಿಯನ್ಸ್ ಮಾಜಿ ಕ್ರಿಕೆಟಿಗ ಇದೀಗ ಜೋಸ್ ಬಟ್ಲರ್ ಅವರ 14,890 ರನ್‌ಗಳ ದಾಖಲೆಯನ್ನು ಹಿಂದಿಕ್ಕಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದೀಗ ಕೀರನ್ ಪೊಲ್ಲಾರ್ಡ್ 749 ಟಿ20 ಪಂದ್ಯಗಳನ್ನಾಡಿ 14,921 ರನ್ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
ಅಂದಹಾಗೆ ಪೊಲ್ಲಾರ್ಡ್, ಈ ವರ್ಷಾರಂಭದಲ್ಲೇ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಗರಿಷ್ಠ ಟಿ20 ರನ್ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಆದರೆ ಇದೇ 2026ರ ಆಗಸ್ಟ್‌ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಜೋಸ್ ಬಟ್ಲರ್, ದಿ ಹಂಡ್ರೆಡ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದು, ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇದೀಗ ಮತ್ತೆ ಬಟ್ಲರ್ ಹಿಂದಿಕ್ಕಿ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಪೊಲ್ಲಾರ್ಡ್ ನಂ.1 ಸ್ಥಾನಕ್ಕೇರಿದ್ದಾರೆ.
ಜೋಸ್ ಬಟ್ಲರ್ ಅವರ ಹೆಸರಿನಲ್ಲಿದ್ದ ಗರಿಷ್ಠ ರನ್ ದಾಖಲೆ ಮುರಿಯಲು 39 ವರ್ಷದ ಕೀರನ್ ಪೊಲ್ಲಾರ್ಡ್ ಅವರಿಗೆ ಕೇವಲ 35 ರನ್ ಅಗತ್ಯವಿತ್ತು. ಸೈಂಟ್ ಲೂಸಿಯಾ ಕಿಂಗ್ಸ್ ಎದುರು ಕಣಕ್ಕಿಳಿದ ಟ್ರಿನ್‌ಬಾಗೋ ನೈಟ್ ರೈಡರ್ಸ್ ತಂಡದ ಪೊಲ್ಲಾರ್ಡ್ ಕೇವಲ 26 ಎಸೆತಗಳಲ್ಲಿ ಸ್ಪೋಟಕ 65 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟರು. ಪೊಲ್ಲಾರ್ಡ್ 749 ಟಿ20 ಪಂದ್ಯಗಳ 666 ಇನ್ನಿಂಗ್ಸ್‌ಗಳಿಂದ 14,921 ರನ್ ಸಿಡಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 15 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲು ಇನ್ನು ಕೇವಲ 79 ರನ್‌ಗಳ ಅಗತ್ಯವಿದೆ. ಶುಕ್ರವಾರ ಇದೇ ಮೈದಾನದಲ್ಲಿ ಪೊಲ್ಲಾರ್ಡ್ ಬಾರ್ಬಡೋಸ್ ಟ್ರಿಡೆಂಟ್ಸ್ ಎದುರು ಕಣಕ್ಕಿಳಿಯಲ್ಲಿದ್ದು, ಇದೇ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.