
ಲಂಡನ್: ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತದ ಕರುಣ್ ನಾಯರ್ ಡಬಲ್ ಸೆಂಚುರಿ ಬಾರಿಸಿದ್ದಾರೆ. 272 ಎಸೆತಗಳಲ್ಲಿ ಕರುಣ್ ಈ ಸಾಧನೆ ಮಾಡಿದರು. 409-3 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡವು, ಸದ್ಯ 7 ವಿಕೆಟ್‌ಗಳ ನಷ್ಟಕ್ಕೆ 494 ರನ್ ಗಳಿಸಿದೆ. 204 ರನ್ ಗಳಿಸಿ ಕರುಣ್ ನಾಯರ್ ವಿಕೆಟ್ ಒಪ್ಪಿಸಿದ್ದಾರೆ.
ಎರಡನೇ ದಿನದ ಆರಂಭದಲ್ಲಿ ಧ್ರುವ್ ಜುರೆಲ್ ವಿಕೆಟ್ ಕಳೆದುಕೊಂಡಿದ್ದು ಇಂಡಿಯಾ ಎ ತಂಡಕ್ಕೆ ಹಿನ್ನಡೆಯಾಯಿತು. ಮೊದಲ ದಿನ 84 ರನ್ ಗಳಿಸಿದ್ದ ಜುರೆಲ್, ಕೇವಲ 10 ರನ್‌ಗಳನ್ನು ಸೇರಿಸಿ 94 ರನ್‌ಗಳಿಗೆ ಔಟಾದರು. ಅಜೀತ್ ಡೇಲ್ ಜುರೆಲ್‌ರನ್ನು ಔಟ್ ಮಾಡಿದರು. 120 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ಜುರೆಲ್ 94 ರನ್ ಗಳಿಸಿದರು. ಕರುಣ್ ಮತ್ತು ಜುರೆಲ್ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಜೊತೆಯಾಟ ನೀಡಿದರು.
ನಂತರ ಕ್ರೀಸ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ನಿರಾಸೆ ಮೂಡಿಸಿದರು. 22 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ ನಿತೀಶ್ ಕುಮಾರ್‌ರನ್ನು ಎಡ್ಡಿ ಜಾಕ್ ಬೌಲಿಂಗ್‌ನಲ್ಲಿ ಜೇಸ್ ರೂ ಕ್ಯಾಚ್ ಹಿಡಿದರು. ಆದರೆ ಶಾರ್ದೂಲ್ ಠಾಕೂರ್ ಜೊತೆಗೂಡಿ ಕರುಣ್ ನಾಯರ್ ಡಬಲ್ ಸೆಂಚುರಿ ಪೂರ್ಣಗೊಳಿಸಿ ಭಾರತ ತಂಡದ ಮೊತ್ತವನ್ನು 450ರ ಗಡಿ ದಾಟಿಸಿದರು. 274 ಎಸೆತಗಳಲ್ಲಿ 26 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 204 ರನ್ ಗಳಿಸಿ ಝಮಾನ್ ಅಖ್ತರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು.
ನಿನ್ನೆ ಸೇಂಟ್ ಲಾರೆನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಎ ತಂಡಕ್ಕೆ ಆರಂಭದಲ್ಲಿ ವಿಕೆಟ್‌ಗಳು ಬೇಗನೆ ಬಿದ್ದವು. ಆರನೇ ಓವರ್‌ನಲ್ಲಿ ನಾಯಕ ಮತ್ತು ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಔಟಾದರು. 17 ಎಸೆತಗಳಲ್ಲಿ 8 ರನ್ ಗಳಿಸಿದ ಅಭಿಮನ್ಯು ಅವರನ್ನು ಜೋಶ್ ಹಲ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ಇನ್ನೊಬ್ಬ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 55 ಎಸೆತಗಳಲ್ಲಿ 24 ರನ್ ಗಳಿಸಿದ ಜೈಸ್ವಾಲ್‌ರನ್ನು 17ನೇ ಓವರ್‌ನಲ್ಲಿ ಎಡ್ಡಿ ಜಾಕ್ ಔಟ್ ಮಾಡಿದರು.
ಆದರೆ ಇದರ ನಂತರ ಮೂರನೇ ವಿಕೆಟ್‌ಗೆ 181 ರನ್‌ಗಳ ಜೊತೆಯಾಟ ನೀಡಿದ ಕರುಣ್ ನಾಯರ್ ಮತ್ತು ಸರ್ಫರಾಜ್ ಖಾನ್ ಇಂಡಿಯಾ ಎ ತಂಡಕ್ಕೆ ಆಸರೆಯಾದರು. ಸೆಂಚುರಿ ಸಮೀಪದಲ್ಲಿದ್ದಾಗ ಸರ್ಫರಾಜ್ ವಿಕೆಟ್ ಕಳೆದುಕೊಂಡಿದ್ದು ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. 119 ಎಸೆತಗಳಲ್ಲಿ 92 ರನ್ ಗಳಿಸಿದ ಸರ್ಫರಾಜ್‌ರನ್ನು ಜೋಶ್ ಹಲ್ ಔಟ್ ಮಾಡಿದರು. ಇದರ ನಂತರ ಕ್ರೀಸ್‌ಗೆ ಬಂದ ಕರುಣ್ ನಾಯರ್ ಮತ್ತು ಧ್ರುವ್ ಜುರೆಲ್ ಜೋಡಿ ಭಾರತ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು. ಇಂಗ್ಲೆಂಡ್ ಲಯನ್ಸ್ ಪರ ಎಡ್ಡಿ ಜಾಕ್ ಮತ್ತು ಜೋಶ್ ಹಲ್ ತಲಾ ಎರಡು ವಿಕೆಟ್ ಪಡೆದರು.
ಇಂಗ್ಲೆಂಡ್ ವಿರುದ್ಧ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಕಣಕ್ಕೆ?
ನವದೆಹಲಿ: ಇಂಗ್ಲೆಂಡ್ ಲಯನ್ಸ್ ವಿರುದ್ದ ಜೂನ್ 6ರಿಂದ ಆರಂಭಗೊಳ್ಳಲಿರುವ 4 ದಿನಗಳ 2ನೇ ಅನಧಿಕೃತ ಟೆಸ್ಟ್ ನಲ್ಲಿ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಭಾರತ 'ಎ' ತಂಡದ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾಗಿರುವ ಮುಖ್ಯ ತಂಡದಲ್ಲಿರುವ ರಾಹುಲ್, ಸೋಮವಾರ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ತಾವು 2ನೇ ಅಭ್ಯಾಸ ಪಂದ್ಯದಲ್ಲಿ ಆಯ್ಕೆಗೆ ಲಭ್ಯವಿರುವುದಾಗಿ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಸರಣಿಗೆ ಸಿದ್ಧತೆ ನಡೆಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.