ಉತ್ತರ ಪ್ರದೇಶ ಮೇಲೆ ಬ್ಯಾಟಿಂಗ್‌ ಪ್ರಹಾರ, ಸಿಕೆ ನಾಯ್ಡು ಟ್ರೋಫಿ ಗೆದ್ದ ಕರ್ನಾಟಕ

By Santosh Naik  |  First Published Mar 13, 2024, 7:04 PM IST


ಸಮ್ರನ್‌ ನೇತೃತ್ವದ ಕರ್ನಾಟಕ 23 ವಯೋಮಿತಿ ತಂಡ, ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಕರ್ನಲ್‌ ಸಿಕೆ ನಾಯ್ಡು ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದೆ.
 


ಬೆಂಗಳೂರು (ಮಾ.13): ಕರ್ನಾಟಕ ತಂಡ ಮೊಟ್ಟಮೊದಲ ಬಾರಿಗೆ ಸಿಕೆ ನಾಯ್ಡು ಟ್ರೋಫಿ ಚಾಂಪಿಯನ್‌ ಆಗಿದೆ. ಕರ್ನಾಟಕ ಹಾಗೂ ಉತ್ತರ ಪ್ರದೇಶ ತಂಡಗಳ ನಡುವೆ ಬುಧವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 23 ವಯೋಮಿತಿಯ ಸಿಕೆ ನಾಯ್ಡು ಕ್ರಿಕೆಟ್‌ ಟೂರ್ನಿಯ ಫೈನಲ್‌ನ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದುಕೊಂಡ ಆಧಾರದಲ್ಲಿ ಕರ್ನಾಟಕ ತಂಡ ಚಾಂಪಿಯನ್‌ ಎನಿಸಿಕೊಂಡಿತು. ಬಿಸಿಸಿಐ ನಡೆಸುವ ದೇಶದ ಪ್ರಮುಖ 23 ವಯೋಮಿತಿ ಟೂರ್ನಿಯನ್ನು 2007-08ರ ಋತುವಿನಿಂದ ಸಿಕೆ ನಾಯ್ಡು 23 ವಯೋಮಿತಿ ಕ್ರಿಕೆಟ್‌ ಟೂರ್ನಿ ಎನ್ನುವ ಹೆಸರಿನಲ್ಲಿ ಆಡಿಸಲಾಗುತ್ತದೆ. ಸಿಕೆ ನಾಯ್ಡು ಟ್ರೋಫಿ ಎಂದು ಹೆಸರು ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ತಂಡ ಈ ಟ್ರೋಫಿ ಜಯಿಸಿದೆ. ಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ 358 ರನ್‌ ಪೇರಿಸಿದರೆ, ಪ್ರತಿಯಾಗಿ ಉತ್ತರ ಪ್ರದೇಶ 139 ರನ್‌ಗೆ ಆಲೌಟ್‌ ಆಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 585 ರನ್‌ಗಳ ಭರ್ಜರಿ ಮೊತ್ತ ಪೇರಿಸಿತ್ತು. ಗೆಲುವಿಗಾಗಿ ಅಸಾಧ್ಯ 805 ರನ್‌ಗಳ ಗುರಿ ಪಡೆದುಕೊಂಡಿದ್ದ ಉತ್ತರ ಪ್ರದೇಶ 6 ವಿಕೆಟ್‌ಗೆ 174 ರನ್‌ ಬಾರಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

click me!