
ಬೆಂಗಳೂರು: ಈ ಬಾರಿ ರಣಜಿ ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ 2ನೇ ಪಂದ್ಯದಲ್ಲೂ ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಆಂಧ್ರ ವಿರುದ್ಧ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ರಾಜ್ಯ ತಂಡ, ಈಗ ಆಲೂರಿನಲ್ಲಿ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲೂ ಡ್ರಾಗೆ ತೃಪ್ತವಾಗಿದೆ. ಇದರೊಂದಿಗೆ ತಂಡ 1 ಅಂಕ ಪಡೆಯಿತು. ಒಟ್ಟು 2 ಪಂದ್ಯಗಳಲ್ಲಿ 2 ಅಂಕ ಗಳಿಸಿದ್ದು, ‘ಬಿ’ ಗುಂಪಿನಲ್ಲಿ 6ನೇ ಸ್ಥಾನದಲ್ಲಿದೆ. ಮುಂದಿನ 5 ಪಂದ್ಯಗಳ ಪೈಕಿ ರಾಜ್ಯಕ್ಕೆ ಇನ್ನು 4 ಗೆಲುವು ಅಗತ್ಯವಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 342 ರನ್ ಗಳಿಸಿದ್ದರೆ, ಸೌರಾಷ್ಟ್ರ 349 ರನ್ ಕಲೆಹಾಕಿ ಇನ್ನಿಂಗ್ಸ್ ಮುನ್ನಡೆ ಪಡೆದಿತ್ತು. ಕೆಳ ಮಧ್ಯಮ ಕ್ರಮಾಂಕದ ಹೋರಾಟ ಸೌರಾಷ್ಟ್ರ ಮೇಲುಗೈ ಸಾಧಿಸುವಂತೆ ಮಾಡಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ್ದ ರಾಜ್ಯ ತಂಡ ಬುಧವಾರ 7 ವಿಕೆಟ್‌ಗೆ 243 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಅನೀಶ್ ಕೆ.ವಿ. 79, ಶ್ರೀಜಿತ್ 52, ಮನ್ವಂತ್ 31, ರೋಹನ್ 38, ಕರುಣ್ ನಾಯರ್ 33 ರನ್ ಗಳಿಸಿದರು. ಗೆಲುವಿಗೆ 237 ರನ್ ಗುರಿ ಪಡೆದಿದ್ದ ಸೌರಾಷ್ಟ್ರ, 2 ವಿಕೆಟ್‌ಗೆ 137 ರನ್ ಗಳಿಸಿದ್ದಾಗ ಪಂದ್ಯ ಡ್ರಾಗೊಳಿಸಲಾಯಿತು.
ಸ್ಕೋರ್: ಕರ್ನಾಟಕ 342/10 ಮತ್ತು 243/7 ಡಿಕ್ಲೇರ್(ಅನೀಶ್ 79, ಶ್ರೀಜಿತ್ 52, ರೋಹನ್ 38, ಪಾರ್ಥ್ 3-80), ಸೌರಾಷ್ಟ್ರ 349/10 ಮತ್ತು 137/2 (ಚಿರಾಗ್ ಜಾನಿ ಔಟಾಗದೆ 63, ಮನ್ವಂತ್ 1-29)
ಹಿಮಾಚಲ ಪ್ರದೇಶ ವಿರುದ್ಧ ಮುಂಬೈ ಇನ್ನಿಂಗ್ಸ್ ಹಾಗೂ 97 ರನ್ ಅಂತರದಲ್ಲಿ ಗೆದ್ದರೆ, ತಮಿಳುನಾಡು ತಂಡ ಉತ್ತರಾಖಂಡ ವಿರುದ್ಧ ಇನ್ನಿಂಗ್ಸ್ ಹಾಗೂ 66 ರನ್‌ಗಳಲ್ಲಿ ಜಯಗಳಿಸಿತು. ಒಡಿಶಾ ವಿರುದ್ಧ ಕೇರಳ ಇನ್ನಿಂಗ್ಸ್ ಹಾಗೂ 36 ಅಂತರದಲ್ಲಿ ಗೆಲುವು ಸಾಧಿಸಿತು. ಆದರೆ ಹಾಲಿ ಚಾಂಪಿಯನ್ ಜಮ್ಮು-ಕಾಶ್ಮೀರ ತಂಡ ವಿದರ್ಭ ವಿರುದ್ಧ 3 ವಿಕೆಟ್ ಸೋಲನುಭವಿಸಿತು.
ದುಬೈ: 3ನೇ ಆವೃತ್ತಿಯ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಮುಂದಿನ ವರ್ಷದ ಜನವರಿ 21ರಿಂದ ಫೆಬ್ರವರಿ 6 ತನಕ ನಡೆಯಲಿದೆ. ನೇಪಾಳ ಮತ್ತು ಬಾಂಗ್ಲಾದೇಶದ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ.
ಹಾಲಿ ಚಾಂಪಿಯನ್ ಭಾರತ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದ್ದು, ಜ.22ರ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಬಾಂಗ್ಲಾದ ಚಿತ್ತಗಾಂಗ್, ಸಿಲೆಟ್, ನೇಪಾಳದ ಕಾಠ್ಮಂಡುವಿನಲ್ಲಿ ಪಂದ್ಯಗಳು ನಡೆಯಲಿದ್ದು, ನಾಲ್ಕು ಗುಂಪಿನಲ್ಲಿ ತಲಾ 4 ತಂಡಗಳಿವೆ. ಎರಡು ಬಾರಿಯ ಚಾಂಪಿಯನ್ ಭಾರತ ‘ಎ’ ಗುಂಪಿನಲ್ಲಿ ಬಾಂಗ್ಲಾ, ಯುಎಇ, ಆಸ್ಟ್ರೇಲಿಯಾ ತಂಡದ ಜೊತೆಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.