
ಕರಾಚಿ(ನ.15): ಕೆಲವು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ಕೊನೆಯುಸಿರೆಳೆದ ಆಸೀಸ್ ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್ ಅವರಿಗೆ ಪಾಕಿಸ್ತಾನ ಸೂಪರ್ ಲೀಗ್(PSL) ಟೂರ್ನಿಯ ಪ್ಲೇ ಆಫ್ ಪಂದ್ಯ ಆರಂಭಕ್ಕೂ ಮುನ್ನ ವಿನೂತನ ಗೌರವ ಸಲ್ಲಿಸಲಾಯಿತು.
ಹೌದು, ಕೊರೋನಾ ಭೀತಿಯಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದ್ದ 5ನೇ ಆವೃತ್ತಿಯ ಪಿಎಸ್‌ಎಲ್ ಲೀಗ್ ಟೂರ್ನಿಯು ಶನಿವಾರ(ನ.14)ದಿಂದ ಆರಂಭವಾಯಿತು. ಮೊದಲ ಪ್ಲೇ ಆಫ್ ಪಂದ್ಯ ಆರಂಭಕ್ಕೂ ಮುನ್ನ ಕಳೆದ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಖ್ಯಾತ ವೀಕ್ಷಕ ವಿವರಣೆಗಾರ ಡೀನೋಗೆ ಕರಾಚಿ ಕಿಂಗ್ಸ್ ಹಾಗೂ ಮುಲ್ತಾನ್ ಸುಲ್ತಾನ್ಸ್ ತಂಡಗಳು 'D' ಆಕಾರದಲ್ಲಿ ನಿಂತು ಗೌರವ ಸಲ್ಲಿಸಿದವು. ಈ ವರ್ಷಾರಂಭದಲ್ಲಿ ಡೀನೋ ಕರಾಚಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಕೊನೆಯುಸಿರೆಳೆದ ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್..!
ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಆರಂಭವಾದಾಗಿನಿಂದಲೂ ಡೀನ್ ಜೋನ್ಸ್ ಪಿಎಸ್‌ಎಲ್ ಜತೆ ಗುರುತಿಸಿಕೊಂಡಿದ್ದರು. ಕರಾಚಿ ಕಿಂಗ್ಸ್ ಕೋಚ್ ಆಗುವ ಮುನ್ನ ಡೀನೋ ಇಸ್ಲಾಮಾಬಾದ್ ಯುನೈಟೆಡ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಡೀನೋ ಮಾರ್ಗದರ್ಶನದಲ್ಲಿ ಇಸ್ಲಾಮಾಬಾದ್ 2016 ಹಾಗೂ 2018ನೇ ಆವೃತ್ತಿಯ ಪಿಎಸ್‌ಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಈ ಆವೃತ್ತಿಯಲ್ಲಿ ಕರಾಚಿ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸೀಂ ಅಕ್ರಂ ಅವರು ಕರಾಚಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಲ್ತಾನ್ ಸುಲ್ತಾನ್ ತಂಡವನ್ನು ಸೂಪರ್ ಓವರ್‌ನಲ್ಲಿ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿ ಕರಾಚಿ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.