
ಬೆಂಗಳೂರು(ನ.22): ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಇದೀಗ ಹಲವು ವಿಚಾರಗಳ ಮೂಲಕ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚೆಗಷ್ಟೇ ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆಯಲ್ಲೂ ಕಪಿಲ್ ದೇವ್ ದಿಟ್ಟ ನುಡಿಯ ಮೂಲಕ ಗಮನ ಸೆಳೆದಿದ್ದರು. ಇದೀಗ ಕಪಿಲ್ ದೇವ್ ಕನ್ನಡ ಮಾತನಾಡಿ ಗಮನ ಸೆಳೆದಿದ್ದಾರೆ.
ಹೌದು, ಹರ್ಯಾಣ ಹರಿಕೇನ್ ಖ್ಯಾತಿಯ ಕಪಿಲ್ ದೇವ್, ಇದೀಗ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದಾರೆ. ಈ ಕುರಿತಂತೆ ಸಂಯುಕ್ತ ಹೊರನಾಡು ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಕಪಿಲ್ ದೇವ್, 'ನನಗೆ ಕನ್ನಡ ಅಂದ್ರೆ ತುಂಬಾ ಇಷ್ಟ' ಎಂದು ಸುಸ್ಪಷ್ಟವಾಗಿ ಕನ್ನಡದಲ್ಲೇ ಮಾತನಾಡಿದ್ದು, ಈ ವಿಡಿಯೋ ಕನ್ನಡಿಗರ ಮೆಚ್ಚುಗೆ ಪಾತ್ರವಾಗಿದೆ.
ಇತ್ತೀಚೆಗಷ್ಟೇ ಪಂದ್ಯದ ವೀಕ್ಷಣೆಗೆ ಅಹಮದಾಬಾದ್‌ಗೆ ಬರುವಂತೆ ಬಿಸಿಸಿಐ ತಮ್ಮನ್ನು ಆಹ್ವಾನಿಸಿರಲಿಲ್ಲ ಎನ್ನುವ ಆಘಾತಕಾರಿ ವಿಷಯವನ್ನು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಬಹಿರಂಗಪಡಿಸಿ ಸುದ್ದಿಯಾಗಿದ್ದರು. ಈ ಕುರಿತಂತೆ ಸುದ್ದಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಪಿಲ್‌ರನ್ನು ನಿರೂಪಕ ನೀವೇಕೆ ವಿಶ್ವಕಪ್ ಫೈನಲ್ ವೀಕ್ಷಣೆಗೆ ಹೋಗಲಿಲ್ಲ ಎಂದು ಕೇಳಿದಾಗ, ‘ಅವರು ನನ್ನನ್ನು ಕರೆದಿಲ್ಲ ಅದಕ್ಕೆ ನಾನು ಹೋಗಿಲ್ಲ. ನೀವು ಆಹ್ವಾನಿಸಿದ್ದೀರ ಹಾಗಾಗಿ ಇಲ್ಲಿಗೆ ಬಂದಿದ್ದೇನೆ’ ಎಂದರು. ಇನ್ನು 2011ರ ವಿಶ್ವಕಪ್ ವಿಜೇತ ನಾಯಕ ಎಂ.ಎಸ್.ಧೋನಿ ಕೂಡ ಫೈನಲ್ ವೀಕ್ಷಣೆಗೆ ನರೇಂದ್ರ ಮೋದಿ ಸ್ಟೇಡಿಯಂಗೆ ಹೋಗಿರಲಿಲ್ಲ.
ಲಖನೌ ತೊರೆದ ಗಂಭೀರ್, ಕೈಬೀಸಿ ಕರೆದ ಕೆಕೆಆರ್: ಚಾಂಪಿಯನ್ ನಾಯಕ ಈಗ ಕೋಲ್ಕತಾ ಮೆಂಟರ್
ಇನ್ನು ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮುಗಿದು ಸುಮಾರು 72 ಗಂಟೆಗಳೆ ಕಳೆಯುತ್ತಾ ಬಂದರೂ, ಇನ್ನೂ ಭಾರತ ವಿಶ್ವಕಪ್ ಸೋತ ಗುಂಗಿನಿಂದ ಹೊರಬಂದಿಲ್ಲ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, "ಕ್ರೀಡಾಪಟುಗಳಾದವರು ಮುಂದೆ ಸಾಗಬೇಕು. ಒಂದು ವೈಫಲ್ಯವನ್ನೇ ನೆನೆದು ಜೀವನಪೂರ್ತಿ ಕೊರಗುತ್ತಾ ಕೂರಬಾರದು. ಅದನ್ನು ಫ್ಯಾನ್ಸ್ ಮಾಡುತ್ತಾರೆ ಆದರೆ ಕ್ರೀಡಾಪಟುಗಳು ಹಾಗೆ ಮಾಡಬಾರದು. ಆಟಗಾರರು ಮುಂದಿನ ದಿನಕ್ಕೆ ಪ್ಲಾನ್ ಮಾಡಿಕೊಳ್ಳಬೇಕು. ಹಿಂದೆ ಏನಾಗಿದೆ ಎನ್ನುವುದನ್ನು ಬದಲಿಸಲು ಸಾಧ್ಯವಿಲ್ಲ, ಕಠಿಣ ಪರಿಶ್ರಮದಿಂದ ಮುಂದೆ ಏನು ಮಾಡಲು ಸಾಧ್ಯವೋ ಅದರತ್ತ ಗಮನ ಕೊಡಬೇಕು" ಎಂದು ಕಪಿಲ್ ದೇವ್ ಟೀಂ ಇಂಡಿಯಾ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ.
2023ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿತ್ತು. ಆದರೆ ನವೆಂಬರ್ 19ರಂದು ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 6 ವಿಕೆಟ್ ಸೋಲು ಕಾಣುವ ಮೂಲಕ ತವರಿನಲ್ಲಿ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸನ್ನು ಕೈಚೆಲ್ಲಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.