ಮಗಳ ಜತೆ ಕ್ರಿಕೆಟ್ ಪ್ರಾಕ್ಟೀಸ್‌; ಮುದ್ದಾದ ವಿಡಿಯೋ ಹಂಚಿಕೊಂಡ ಕೇನ್ ವಿಲಿಯಮ್ಸನ್‌..!

By Naveen KodaseFirst Published Jul 5, 2023, 10:55 AM IST
Highlights

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ಸೂಚನೆ
ಐಪಿಎಲ್‌ ವೇಳೆ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್‌

ವೆಲ್ಲಿಂಗ್ಟನ್‌(ಜು.05): ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್, 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲೇ ಕ್ಷೇತ್ರ ರಕ್ಷಣೆ ಮಾಡುವ ವೇಳೆ ಬಿದ್ದು ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಐಪಿಎಲ್‌ನಿಂದ ಹೊರಬಿದ್ದ ವಿಲಿಯಮ್ಸನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಕಳೆದ ಏಪ್ರಿಲ್‌ ತಿಂಗಳಿನಿಂದ ವಿಲಿಯಮ್ಸನ್ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದೀಗ ಮನೆಯಲ್ಲಿಯೇ ಮಗಳ ಜತೆ ಕ್ರಿಕೆಟ್ ಅಭ್ಯಾಸ ನಡೆಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಇನ್ನು ಮಗಳ ಜತೆ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಕೇನ್ ವಿಲಿಯಮ್ಸನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವೀಗ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕೇನ್ ವಿಲಿಯಮ್ಸನ್‌, 2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಉದ್ಘಾಟನಾ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಗಾಯಗೊಂಡ ವಿಲಿಯಮ್ಸನ್, ಐಪಿಎಲ್‌ನಿಂದ ಹೊರಬಿದ್ದಿದ್ದು ಮಾತ್ರವಲ್ಲದೇ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಅಲಭ್ಯರಾಗುವ ಭೀತಿ ಎದುರಾಗಿದೆ. ಇನ್ನು ಇದೆಲ್ಲದರ ನಡುವೆ 32 ವರ್ಷದ ಕೇನ್ ವಿಲಿಯಮ್ಸನ್, ತಮ್ಮ ಗ್ರೇ ನಿಕೋಲ್ಸ್ ಬ್ಯಾಟ್ ಹಿಡಿದು ಮಗಳು ಮ್ಯಾಗ್ಗಿ ಹಾಕಿದ ರಬ್ಬರ್ ಬಾಲ್‌ನಲ್ಲಿಯೇ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Kane Williamson (@kane_s_w)

ಈ ಕುರಿತಂತೆ ವಿಡಿಯೋ ಜತೆಗೆ ಕೇನ್ ವಿಲಿಯಮ್ಸನ್, ಮೊದಲ ಸ್ಪರ್ಧಾತ್ಮಕ ಆಟಕ್ಕೆ ಮರಳಿದ್ದೇನೆ. ಗ್ಯಾರಿ ನಿಕೋಲ್ಸ್ ಬ್ಯಾಟ್ ಕೈಯಲ್ಲಿ ಹಿಡಿದುಕೊಳ್ಳುವುದಕ್ಕೆ ಖುಷಿಯಾಗುತ್ತಿದೆ ಎಂದು ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್‌ ಬರೆದುಕೊಂಡಿದ್ದಾರೆ.

ಜಿಂಬಾಬ್ವೆ ವಿಶ್ವಕಪ್ ಕನಸನ್ನು ಛಿದ್ರಗೊಳಿಸಿದ ಸ್ಕಾಟ್ಲೆಂಡ್‌..! ಪ್ರಧಾನ ಸುತ್ತಿಗೇರುವ 10ನೇ ತಂಡ ಯಾವುದು..?:

ಶಸ್ತ್ರ ಚಿಕಿತ್ಸೆ ಬಳಿಕ ಗುಣಮುಖರಾಗುತ್ತಿರುವ ಕುರಿತಂತೆ ಕೆಲದಿನಗಳ ಹಿಂದಷ್ಟೇ ಪ್ರತಿಕ್ರಿಯೆ ನೀಡಿದ್ದ ಕೇನ್ ವಿಲಿಯಮ್ಸನ್‌, "ನಾನು ವಾರದಿಂದ ವಾರಕ್ಕೆ ಗುಣಮುಖರಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳಿದ್ದರು. "ನಾನು ಚೇತರಿಕೆಯ ಹಾದಿಯಲ್ಲಿಯೇ ಸಾಗುತ್ತಿದ್ದೇನೆ. ಆದರೆ ದಿನಕ್ಕೆ ಇಷ್ಟ ಮಟ್ಟಕ್ಕೆ ಸುಧಾರಿಸಿಕೊಳ್ಳಬೇಕು ಎನ್ನುವ ಗುರಿ ನಿಗದಿ ಮಾಡಿಕೊಂಡಿಲ್ಲ. ನಾನು ಈ ಮೊದಲು ಇಷ್ಟು ದೊಡ್ಡ ಮಟ್ಟದ ಗಾಯಕ್ಕೊಳಗಾಗಿರಲಿಲ್ಲ. ಇದೊಂದು ದೀರ್ಘಕಾಲಿಕ ಪ್ರಕ್ರಿಯೆಯಾಗಿದ್ದು, ಹಂತಹಂತವಾಗಿ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿದ್ದೇನೆ ಎಂದು ನ್ಯೂಜಿಲೆಂಡ್ ತಂಡದ ಕ್ಯಾಪ್ಟನ್ ಕೂಲ್ ಹೇಳಿದ್ದರು.

2019ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವು ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಬೌಂಡರಿ ಕೌಂಟ್ ಆಧಾರದಲ್ಲಿ ಸೋಲು ಅನುಭವಿಸುವ ಮೂಲಕ ಸತತ ಎರಡನೇ ಬಾರಿಗೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2015ರಲ್ಲೂ ನ್ಯೂಜಿಲೆಂಡ್ ತಂಡವು ಏಕದಿನ ವಿಶ್ವಕಪ್‌ ಫೈನಲ್‌ಗೇರಿ ಆಸೀಸ್‌ ಎದುರು ಮುಗ್ಗರಿಸಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಇದೀಗ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್‌ ಅಪ್‌ ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿಯುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಅಕ್ಟೋಬರ್ 05ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ.

click me!