Duleep Trophy: ಬೆಂಗಳೂರಿನಲ್ಲಿಂದು ದುಲೀಪ್ ಟ್ರೋಫಿ ಸೆಮೀಸ್‌ ಕದನ ಆರಂಭ; ಹಲವು ತಾರೆಯಲು ಭಾಗಿ

By Naveen Kodase  |  First Published Jul 5, 2023, 8:55 AM IST

ಇಂದಿನಿಂದ ದುಲೀಪ್ ಟ್ರೋಫಿ ಸೆಮಿಫೈನಲ್ ಕದನ ಆರಂಭ
ಬಲಿಷ್ಠ ದಕ್ಷಿಣ ವಲಯಕ್ಕೆ ಉತ್ತರ ವಲಯ ಸವಾಲು
ಕೇಂದ್ರ ವಲಯಕ್ಕೆ ಸವಾಲೆಸೆಯಲು ಸಜ್ಜಾದ ಪಶ್ಚಿಮ ವಲಯ


ಬೆಂಗಳೂರು(ಜು.05): ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿದ್ದು, ದಕ್ಷಿಣ ವಲಯಕ್ಕೆ ಉತ್ತರ ವಲಯದ ಸವಾಲು ಎದುರಾಗಲಿದೆ. ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ದಕ್ಷಿಣ ವಲಯ ಕಳೆದ ಋತುವಿನ ದುಲೀಪ್ ಟ್ರೋಫಿ ಟೂರ್ನಿಯಲ್ಲಿ(Duleep Trophy) ಫೈನಲ್‌ಗೇರಿದ್ದರಿಂದ ಈ ಬಾರಿ ನೇರವಾಗಿ ಸೆಮೀಸ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದೆ. ಉತ್ತರ ವಲಯ ಕ್ವಾರ್ಟರ್‌ನಲ್ಲಿ ಈಶಾನ್ಯ ವಲಯದ ವಿರುದ್ಧ 511 ರನ್‌ ಜಯಸಾಧಿಸಿ ಅಂತಿಮ 4ರ ಘಟ್ಟ ಪ್ರವೇಶಿಸಿತ್ತು. ದಕ್ಷಿಣ ವಲಯವನ್ನು ಹನುಮ ವಿಹಾರಿ ಮುನ್ನಡೆಸಲಿದ್ದು, ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌, ಆರ್‌.ಸಮರ್ಥ್‌, ವೇಗಿಗಳಾದ ವೈಶಾಖ್‌, ವಿದ್ವತ್‌ ಕಾವೇರಪ್ಪ ಕೂಡಾ ತಂಡದಲ್ಲಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಸಾಯಿ ಸುದರ್ಶನ್, ತಿಲಕ್ ವರ್ಮಾ ಬಲ ಕೂಡಾ ದಕ್ಷಿಣ ವಲಯಕ್ಕಿದೆ. ಇದರ ಜತೆಗೆ ಮೂರು ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಇದೀಗ ಉತ್ತರ ವಲಯ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.

Latest Videos

undefined

ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಜಿತ್‌ ಅಗರ್ಕರ್‌ ಆಯ್ಕೆ

ಕರ್ನಾಟಕ ಮೂಲದ ವೇಗಿಗಳಾದ ವಿದ್ವತ್ ಕಾವೇರಪ್ಪ ಹಾಗೂ ವಿ ವೈಶಾಕ್‌ ಹೊಸ ಚೆಂಡಿನೊಂದಿಗೆ ತವರಿನ ಮೈದಾನದಲ್ಲಿ ದಾಳಿಗಿಳಿಯುವ ಸಾಧ್ಯತೆಯಿದೆ. ಈ ಜೋಡಿ ಕಳೆದ ಆವೃತ್ತಿಯ ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿ ಗಮನ ಸೆಳೆದಿತ್ತು. ಇನ್ನು ಮೂರನೇ ವೇಗಿ ರೂಪದಲ್ಲಿ 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಂಧ್ರ ಪರ 7 ಪಂದ್ಯಗಳನ್ನಾಡಿ 29 ವಿಕೆಟ್ ಕಬಳಿಸಿದ್ದ ಕೆ.ವಿ ಸಸಿಕಾಂತ್ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.  ಸ್ಪಿನ್ ಬೌಲಿಂಗ್ ರೂಪದಲ್ಲಿ ಆರ್ ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಮೇಲ್ನೋಟಕ್ಕೆ ಉತ್ತರ ವಲಯಕ್ಕಿಂತ ದಕ್ಷಿಣ ವಲಯ ಸಾಕಷ್ಟು ಬಲಾಢ್ಯವಾಗಿ ಗುರುತಿಸಿಕೊಂಡಿದೆ.

ಉತ್ತರ ವಲಯಕ್ಕೆ ಮನ್‌ದೀಪ್‌ ಸಿಂಗ್‌ ನಾಯಕತ್ವ ವಹಿಸಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ಮೈದಾನಲ್ಲಿ ಧೃವ್ ಶೊರೆ, ನಿಶಾಂತ್ ಸಂಧು ಹಾಗೂ ಸ್ಪೋಟಕ ಬ್ಯಾಟರ್‌ ಹರ್ಷಿತ್ ರಾಣಾ ಭರ್ಜರಿ ಪ್ರದರ್ಶನದ ಮೂಲಕ ಮಿಂಚಿದ್ದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನು ಆಫ್‌ಸ್ಪಿನ್ನರ್ ಪುಲ್ಕಿತ್ ನಾರಾಗ್‌ ಕಳೆದ ಈಶಾನ್ಯ ವಲಯ ಎದುರಿನ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ್ದು, ಇದೀಗ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ಎದುರು ಅದೇ ಲಯ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. 

ಪಶ್ಚಿಮ ವಲಯದಲ್ಲಿ ತಾರೆಯರ ದಂಡು

ಆಲೂರು ಕ್ರೀಡಾಂಗಣದಲ್ಲಿ ನಡೆಯಲಿರುವ ಮತ್ತೊಂದು ಸೆಮೀಸ್‌ನಲ್ಲಿ ಪಶ್ಚಿಮ ವಲಯ ಹಾಗೂ ಕೇಂದ್ರ ವಲಯ ತಂಡಗಳು ಸೆಣಸಲಿವೆ. ಪಶ್ಚಿಮ ವಲಯ ಕಳೆದ ಬಾರಿ ಚಾಂಪಿಯನ್‌ ಆಗಿದ್ದರಿಂದ ಈ ಬಾರಿ ನೇರವಾಗಿ ಸೆಮೀಸ್‌ಗೇರಿದೆ. ಕೇಂದ್ರ ತಂಡ ಪೂರ್ವ ವಲಯದ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ 170 ರನ್‌ ಗೆಲುವು ಸಾಧಿಸಿತ್ತು. ಪಶ್ಚಿಮ ವಲಯದಲ್ಲಿರುವ ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಹಾಗೂ ಸರ್ಫರಾಜ್ ಖಾನ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

It's as cloudy as it can get in Alur as West takes on Central in

Outfield not as heavy as the last game, where run scoring was a little difficult. pic.twitter.com/edd6ZYkNH5

— Pranay Rajiv (@iraiva4716)

ಪಶ್ಚಿಮ ವಲಯದ ಬ್ಯಾಟಿಂಗ್‌ಗೆ ಹೋಲಿಸಿದರೆ ಬೌಲಿಂಗ್ ವಿಭಾಗ ಕೊಂಚ ಮಂಕಾದಂತೆ ಕಂಡು ಬರುತ್ತಿದೆ. ಸೌರಾಷ್ಟ್ರ ಮೂಲದ ಅನುಭವಿ ಎಡಗೈ ವೇಗಿ ಜಯದೇವ್ ಉನಾದ್ಕತ್, ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ಇನ್ನು ಗಾಯದ ಸಮಸ್ಯೆಯಿಂದಾಗಿ ಚೇತನ್ ಸಕಾರಿಯಾ ಕೂಡಾ ದುಲೀಪ್ ಟ್ರೋಫಿ ಸೆಮಿಫೈನಲ್‌ನಿಂದ ಹಿಂದೆ ಸರಿದಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

click me!