
ಮೆಲ್ಬೋರ್ನ್: ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಜೋಶ್ ಇಂಗ್ಲಿಶ್‌ಗಾಗಿ ಲಖನೌ ಸೂಪರ್ ಜೈಂಟ್ಸ್ 8.6 ಕೋಟಿ ರೂ. ಖರ್ಚು ಮಾಡಿದಾಗ, ಇತರ ತಂಡಗಳು ಮಾತ್ರವಲ್ಲದೆ ಅಭಿಮಾನಿಗಳೂ ಆಶ್ಚರ್ಯಚಕಿತರಾದರು. ಮದುವೆಯಾಗಲಿರುವ ಕಾರಣ, ಮುಂದಿನ ಐಪಿಎಲ್‌ನಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡುವುದಾಗಿ ಇಂಗ್ಲಿಶ್ ಹರಾಜಿಗೂ ಮೊದಲೇ ಸ್ಪಷ್ಟಪಡಿಸಿದ್ದರು. ಆದರೂ ಲಖನೌ 8.6 ಕೋಟಿ ಖರ್ಚು ಮಾಡಿ ಇಂಗ್ಲಿಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ನಾಯಕ ರಿಷಭ್ ಪಂತ್ ಮತ್ತು ನಿಕೋಲಸ್ ಪೂರನ್ ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿದ್ದರೂ ಲಖನೌ ಈ ಸಾಹಸ ಮಾಡಿತ್ತು. ಸನ್‌ರೈಸರ್ಸ್ ಹೈದರಾಬಾದ್ ಕೂಡ ಇಂಗ್ಲಿಶ್‌ಗಾಗಿ ಲಖನೌ ಜೊತೆ ತೀವ್ರ ಪೈಪೋಟಿ ನೀಡಿತ್ತು. ಅಂತಿಮವಾಗಿ, ಆಸೀಸ್ ಆಟಗಾರನನ್ನು ಲಖನೌ 8.6 ಕೋಟಿಗೆ ಮಿನಿ ಹರಾಜಿನಲ್ಲಿ ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ಐಪಿಎಲ್ ಹರಾಜಿನಲ್ಲಿ ಲಖನೌ ತಂಡಕ್ಕೆ ದೊಡ್ಡ ಮೊತ್ತಕ್ಕೆ ಸೇರ್ಪಡೆಯಾದ ನಂತರ, ಏಪ್ರಿಲ್ 18 ರಂದು ಮದುವೆಯಾಗಲಿರುವ ಇಂಗ್ಲಿಶ್, ಸದ್ಯಕ್ಕೆ ತಮ್ಮ ಹನಿಮೂನ್ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತಿವೆ. ಕಳೆದ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಆಟಗಾರನಾಗಿದ್ದ ಇಂಗ್ಲಿಶ್, ಮುಂಬರುವ ಸೀಸನ್‌ನಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡುವುದಾಗಿ ಸ್ಪಷ್ಟಪಡಿಸಿದ ನಂತರ, ಪಂಜಾಬ್ ಕೋಚ್ ರಿಕಿ ಪಾಂಟಿಂಗ್ ಅವರನ್ನು ಕೈಬಿಡಲು ನಿರ್ಧರಿಸಿದ್ದರು. ಆದರೆ, ಹರಾಜಿನಲ್ಲಿ ದೊಡ್ಡ ಮೊತ್ತ ಸಿಕ್ಕರೆ ಇಂಗ್ಲಿಶ್ ಮನಸ್ಸು ಬದಲಾಯಿಸಬಹುದು ಎಂದು ಮೊದಲೇ ಅರಿತಿದ್ದ ಲಖನೌ ಕೋಚ್ ಜಸ್ಟಿನ್ ಲ್ಯಾಂಗರ್ ಮತ್ತು ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್, ಹರಾಜಿನಲ್ಲಿ ಇಂಗ್ಲಿಶ್‌ಗಾಗಿ ದೊಡ್ಡ ಮೊತ್ತವನ್ನು ವ್ಯಯಿಸಲು ಸಿದ್ಧರಾಗಿದ್ದರು ಎನ್ನಲಾಗಿದೆ. ಆದರೆ ಈ ವಿಷಯ ಪಾಂಟಿಂಗ್‌ಗೆ ತಿಳಿದಿರಲಿಲ್ಲ.
ಏಪ್ರಿಲ್ 18 ರಂದು ನಡೆಯುವ ಮದುವೆಯ ನಂತರ ಹನಿಮೂನ್‌ಗೆ ಹೋಗುವುದರಿಂದ ಇಂಗ್ಲಿಶ್ ಐಪಿಎಲ್‌ನಿಂದ ದೂರವಿರಲು ಮೊದಲು ನಿರ್ಧರಿಸಿದ್ದರು. ಆದರೆ ಹರಾಜಿನಲ್ಲಿ ಲಖನೌ ದೊಡ್ಡ ಮೊತ್ತವನ್ನು ಖರ್ಚು ಮಾಡಿದ ಕಾರಣ, ಇಂಗ್ಲಿಶ್ ಹನಿಮೂನ್ ಮುಂದೂಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಈ ಹಿಂದೆ, ಹರಾಜಿನ ನಂತರ ಪಂಜಾಬ್ ತಂಡದ ಸಹ-ಮಾಲೀಕ ನೆಸ್ ವಾಡಿಯಾ ಇಂಗ್ಲಿಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮುಂದಿನ ಸೀಸನ್‌ನಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡುವುದಾಗಿ ಇಂಗ್ಲಿಶ್ ತಂಡಕ್ಕೆ ಮುಂಚಿತವಾಗಿ ತಿಳಿಸಿರಲಿಲ್ಲ ಮತ್ತು ಕೊನೆಯ ಕ್ಷಣದಲ್ಲಿ ಮಾತ್ರ ಈ ವಿಷಯವನ್ನು ತಿಳಿಸಿದ್ದಾರೆ ಎಂದು ನೆಸ್ ವಾಡಿಯಾ ಆರೋಪಿಸಿದ್ದರು. ಇದು ವೃತ್ತಿಪರ ಆಟಗಾರನಿಗೆ ಸರಿಹೊಂದುವ ರೀತಿಯಲ್ಲ ಎಂದು ನೆಸ್ ವಾಡಿಯಾ ಹೇಳಿದ್ದರು. ಆಟಗಾರರ ರೀಟೈನ್ ಮಾಡಿಕೊಳ್ಳಲು ಡೆಡ್‌ಲೈನ್‌ಗೆ ಕೊನೆಯ 45 ನಿಮಿಷ ಬಾಕಿ ಇದ್ದಾಗ ತಾವು ಮದುವೆಯಾಗುವುದಾಗಿ ತಿಳಿಸಿದ್ದರು. ನಾವು ಅವರು ಹೀಗೆ ಕೊನೆಯ ಕ್ಷಣದಲ್ಲಿ ಹೇಳಿರದಿದ್ದರೇ ಅವರನ್ನು ರೀಟೈನ್ ಮಾಡಿಕೊಳ್ಳುತ್ತಿದ್ದೆವು ಎಂದು ನೆಸ್ ವಾಡಿಯಾ ಆರೋಪಿಸಿದ್ದರು.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಅದ್ಭುತ ಪ್ರದರ್ಶನ ತೋರುವ ಮೂಲಕ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆರ್‌ಸಿಬಿ ಎದುರು ಮುಗ್ಗರಿಸುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಈ ಬಾರಿ ಶ್ರೇಯಸ್ ಅಯ್ಯರ್ ಪಡೆ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.