
ಬೆಂಗಳೂರು (ನ.3): ಭಾರತೀಯ ಮಹಿಳಾ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧನಾ ಮೈದಾನದಲ್ಲಿ ಅತ್ಯಂತ ಶಾಂತ ಹಾಗೂ ಹಸನ್ಮುಖಿಯಾಗಿ ಕಾಣಿಸಿಕೊಳ್ಳುತ್ತಾರೆ: ಆದರೆ ಸಿಟ್ಟು ಬಂದರೆ ಅವರು ಹೇಗೆ ವರ್ತಿಸುತ್ತಾರೆ? ಅವರ ಆಪ್ತ ಗೆಳತಿ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಜೆಮಿಮಾ ರೋಡ್ರಿಗಸ್ (Jemimah Rodrigues) ಪಾಡ್‌ಕಾಸ್ಟ್ ಒಂದರಲ್ಲಿ ಸ್ಮೃತಿಯವರ ಈ 'ಸೈಲೆಂಟ್' ರೂಪದ ರಹಸ್ಯವನ್ನು ತಮಾಷೆಯಾಗಿ ಬಿಚ್ಚಿಟ್ಟಿದ್ದಾರೆ. ತಂಡದ ಸಹಆಟಗಾರ್ತಿ ಹಾಗೂ ಸದಾ ಲವಲವಿಕೆಯಲ್ಲಿರುವ ಜೆಮಿಮಾ ರೋಡ್ರಿಗಸ್, ಸ್ಮೃತಿ ಮಂಧನಾ ಅವರಿಗೆ ಸಿಟ್ಟು ಬಂದರೆ ಅವರು ಯಾರ ಮೇಲೆಯೂ ಕಿರುಚಾಡುವುದಿಲ್ಲ ಅಥವಾ ಬೈಯುವುದಿಲ್ಲ. ಬದಲಿಗೆ ನೀಡುವ 'ಸೈಲೆಂಟ್ ಟ್ರೀಟ್‌ಮೆಂಟ್' (Silent Treatment) ಬೈಗುಳಕ್ಕಿಂತಲೂ ಅತ್ಯಂತ ಭಯಾನಕವಾಗಿರುತ್ತದೆ ಎಂದು ಹೇಳಿದ್ದಾರೆ.
ಒಮ್ಮೆ ಸ್ಮೃತಿ ಮಂಧನಾ ಬೇಡ ಎಂದಿದ್ದ ಕೆಲಸವೊಂದನ್ನು ಮಾಡಿ ತಾವು ತಪ್ಪು ಎಸಗಿದ್ದ ಘಟನೆಯನ್ನು ನೆನಪಿಸಿಕೊಂಡ ಜೆಮಿಮಾ, 'ಸ್ಮೃತಿ ಯಾರ ಮೇಲೆಯೂ ರೇಗುವುದಿಲ್ಲ. ಬದಲಿಗೆ ಸಂಪೂರ್ಣ ಮೌನ ವಹಿಸಿ ಸೈಲೆಂಟ್ ಟ್ರೀಟ್‌ಮೆಂಟ್ ನೀಡುತ್ತಾರೆ, ಅದು ಬೈಯುವುದಕ್ಕಿಂತಲೂ ತುಂಬಾ ಕೆಟ್ಟದಾಗಿರುತ್ತದೆ. ಒಮ್ಮೆ ಅವರು ಮಾಡಬೇಡ ಎಂದಿದ್ದ ಕೆಲಸವನ್ನು ನಾನು ಮಾಡಿ ಎಡವಟ್ಟು ಮಾಡಿಕೊಂಡಿದ್ದೆ. ನನ್ನದೇ ತಪ್ಪು ಎಂದು ನನಗೂ ಗೊತ್ತಿತ್ತು. ಅಂದು ಪ್ರಾಕ್ಟೀಸ್ ಇಡೀ ದಿನ ಅವರು ನನ್ನ ಮುಖವನ್ನೂ ನೋಡಲಿಲ್ಲ. ಅವರು ಬ್ಯಾಟಿಂಗ್ ಮಾಡುವಾಗ ನಾನು ಬೇಕೆಂತಲೇ ಅವರ ಮುಂದೆ ಹೋಗಿ ನಿಂತರೂ ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ' ಎಂದು ಜೆಮಿಮಾ ನೆನಪಿಸಿಕೊಂಡಿದ್ದಾರೆ.
ಅದಾದ ಬಳಿಕ ನಡೆದ ಸನ್ನಿವೇಶ ಇನ್ನಷ್ಟು ತಮಾಷೆಯಾಗಿತ್ತು ಎಂದ ಜೆಮಿಮಾ, 'ಆ ದಿನ ಸ್ಮೃತಿ ಅವರ ರೂಮ್‌ನಲ್ಲಿ ಕಾಫಿ ಪೌಡರ್ ಖಾಲಿಯಾಗಿತ್ತು. ನನ್ನ ರೂಮ್‌ನಲ್ಲಿದ್ದ ಕಾಫಿ ಪೌಡರ್ ಪಡೆಯಲು ನನಗೆ ಫೋನ್ ಮಾಡಿ, 'ಹಲೋ, ಕಾಫಿ ಪೌಡರ್ ಇದೆಯಾ?' ಎಂದು ಸಣ್ಣ ಧ್ವನಿಯಲ್ಲಿ ಕೇಳಿದರು. ನಾನು 'ಹೌದು ಇದೆ, ನಾನೇ ತಂದುಕೊಡಲೇ?' ಎಂದಿದ್ದಕ್ಕೆ, 'ಬೇಡ, ನಾನೇ ಬರ್ತೀನಿ' ಅಂದರು. ನನ್ನ ರೂಮ್‌ಗೆ ಬಂದರು, ಡೋರ್ ಓಪನ್ ಮಾಡಿ ಕಾಫಿ ಪೌಡರ್ ತಗೊಂಡರು. ನಾನು ಅಲ್ಲೇ ನಿಂತು ಅವರ ಮುಖ ನೋಡುತ್ತಿದ್ದರೂ, ನನ್ನನ್ನು ಕಣ್ಣೆತ್ತಿ ನೋಡದೆ ಕಾಫಿ ಪೌಡರ್ ತಗೊಂಡು ಹೊರಟೇ ಹೋದರು! ಆಗ ನನಗೆ ಅರ್ಥವಾಯಿತು, ಸ್ಮೃತಿಗೆ ನನ್ನ ಮೇಲೆ ಭಾರಿ ಕೋಪ ಬಂದಿದೆ ಅಂತ" ಎಂದು ನಕ್ಕಿದ್ದಾರೆ.
ಸ್ಮೃತಿಯವರ ಈ ಕೋಪ ತಾತ್ಕಾಲಿಕವಾಗಿತ್ತು. ರಾತ್ರಿಯಾಗುತ್ತಿದ್ದಂತೆಯೇ ಜೆಮಿಮಾ ರೂಮ್‌ಗೆ ಬಂದ ಸ್ಮೃತಿ ಮಂಧನಾ, ಯಾವುದೇ ರೀತಿಯಲ್ಲಿ ರೇಗಾಡದೆ ಪ್ರೀತಿ ಮತ್ತು ಸಮಾಧಾನದಿಂದ ಬುದ್ಧಿಮಾತು ಹೇಳಿದರು.'ಅವರು ಎಂದೂ ಕಿರುಚಾಡುವುದಿಲ್ಲ. ಅವರ ಧ್ವನಿಯಲ್ಲೊಂದು ಕಟ್ಟುನಿಟ್ಟಿನ ಟೋನ್ ಇರುತ್ತದೆಯಷ್ಟೇ. ರಾತ್ರಿ ಬಂದು 'ನೀನು ಎಂತಹ ವ್ಯಕ್ತಿ ಎಂಬುದು ನನಗೆ ಗೊತ್ತು, ನಿನ್ನಿಂದ ಇಂತಹ ತಪ್ಪನ್ನು ನಾನು ನಿರೀಕ್ಷಿಸಿರಲಿಲ್ಲ' ಎಂದು ತಿಳಿಹೇಳಿದರು. ತಕ್ಷಣವೇ ನಾನು, 'ಖಂಡಿತ ಸ್ಮೃತಿ, ಇನ್ಮುಂದೆ ನಾನು ಇಂತಹ ತಪ್ಪು ಮಾಡುವುದಿಲ್ಲ, ಐ ಆಮ್ ಸಾರಿ' ಎಂದು ಕ್ಷಮೆ ಕೇಳಿದೆ" ಎಂದು ಜೆಮಿಮಾ ವಿವರಿಸಿದರು.
ಸನ್ನಿವೇಶ ತಿಳಿಯಾಗುತ್ತಿದ್ದಂತೆಯೇ ಸ್ಮೃತಿ ಮಂಧನಾ ತಮ್ಮ ತಮಾಷೆಯ ಶೈಲಿಯಲ್ಲಿ ಜೆಮಿಮಾ ಕಾಲೆಳೆದಿದ್ದಾರೆ. 'ತಕ್ಷಣವೇ ಸ್ಮೃತಿ ನಗುತ್ತಾ, 'ಸರಿ, ಈಗ ನಿನ್ನ ಸೆಷನ್ ಮುಗಿಯಿತಲ್ಲವೇ? ನನ್ನ 1 ಲಕ್ಷ ರೂಪಾಯಿ ಕೋಚಿಂಗ್ ಫೀಸ್ (Coaching Fee) ಎಲ್ಲಿದೆ? ತೆಗೆಡುಕೊಡು ನೋಡೋಣ! ಬಹಳ ಹೊತ್ತಿನಿಂದ ನಿನಗೆ ಉಚಿತವಾಗಿ ಜ್ಞಾನ ನೀಡಿದ್ದೇನೆ' ಎಂದು ತಮಾಷೆ ಮಾಡಿದರು. ಅದಕ್ಕೆ ನಾನು 'ಅಯ್ಯೋ, ನಾನು ನಿನ್ನ ತಂಗಿಯಿದ್ದಂತೆ, ಅಕ್ಕನಾದವಳು ತಂಗಿ ಹತ್ತಿರ ಹಣ ಪಡಿತಾರಾ?' ಎಂದು ಕೇಳಿದರೆ, 'ಅದಕ್ಕೇನಂತೆ, ನಾನು ಪಡಿತೀನಿ, ಯಾಕೆ ಪಡಿಬಾರದು?' ಎಂದು ಹಾಸ್ಯ ಮಾಡಿದರು" ಎಂದು ಜೆಮಿಮಾ ನೆನಪಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.