
ಬೆಂಗಳೂರು(ಡಿ.06): ಭಾರತೀಯ ಕ್ರಿಕೆಟಿಗರ ಪಾಲಿಗೆ ಡಿಸೆಂಬರ್ 06 ಒಂದು ರೀತಿಯ ಸ್ಮರಣೀಯ ದಿನಗಳಲ್ಲಿ ಒಂದು. ಏಕೆಂದರೆ ಡಿಸೆಂಬರ್ 06ರಂದು ಟೀಂ ಇಂಡಿಯಾದ ಐವರು ತಾರಾ ಕ್ರಿಕೆಟಿಗರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಾರೆ. ಹೌದು, ಟೀಂ ಇಂಡಿಯಾ (Team India) ಮಾಜಿ ವೇಗಿ ರುದ್ರಪ್ರತಾಪ್ ಸಿಂಗ್(ಆರ್‌ಪಿ ಸಿಂಗ್), ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಕರುಣ್ ನಾಯರ್ ಹಾಗೂ ಶ್ರೇಯಸ್ ಅಯ್ಯರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಎಲ್ಲಾ ಕ್ರಿಕೆಟಿಗರು ಭಾರತ ತಂಡಕ್ಕೆ ತನ್ನದೇ ಆದ ಮಹತ್ವದ ಕಾಣಿಕೆ ನೀಡಿದ್ದಾರೆ.
ಕಳೆದ 10 ವರ್ಷಗಳಿಂದ ರವೀಂದ್ರ ಜಡೇಜಾ (Ravindra Jadeja) ಟೀಂ ಇಂಡಿಯಾ ಪರ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಜಡೇಜಾ ಇಂದು 33ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಈ ಕಾರಣಕ್ಕಾಗಿಯೇ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ರವೀಂದ್ರ ಜಡೇಜಾ ಅವರನ್ನು 16 ಕೋಟಿ ರುಪಾಯಿ ನೀಡಿ ಮೊದಲ ಆಯ್ಕೆಯ ಆಟಗಾರನಾಗಿ ಸಿಎಸ್‌ಕೆ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿದೆ.
ತಮ್ಮ ವಿಶಿಷ್ಠ ಬೌಲಿಂಗ್ ಶೈಲಿಯ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಂಗಾಲು ಮಾಡುವ ಕ್ಷಮತೆ ಹೊಂದಿರುವ ಜಸ್ಪ್ರೀತ್ ಬುಮ್ರಾ (Jasprit Bumrah) 1993ರಲ್ಲಿ ಜನಿಸಿದ್ದರು. ಇದೀಗ ಬೂಮ್ ಬೂಮ್ ಬುಮ್ರಾ ತನ್ನ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರಗಣ್ಯ ಬೌಲರ್ ಆಗಿ ಬುಮ್ರಾ ಗುರುತಿಸಿಕೊಂಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಅವಿಭಾಜ್ಯ ಅಂಗವಾಗಿ ಬುಮ್ರಾ ಗುರುತಿಸಿಕೊಂಡಿದ್ದಾರೆ.
ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಶ್ರೇಯಸ್ ಅಯ್ಯರ್ (Shreyas Iyer), ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುವವರ ಪೈಕಿ ಕಿರಿಯ ಆಟಗಾರ. ಅಯ್ಯರ್ ತಮ್ಮ 27 ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ದ ತಾವಾಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಹಾಗೂ ಅರ್ಧಶತಕ ಸಿಡಿಸುವ ಮೂಲಕ ಗಮನ ಸೆಳೆದಿರುವ ಅಯ್ಯರ್, ಟೀಂ ಇಂಡಿಯಾದ ಭವಿಷ್ಯದ ನಾಯಕ ಎನ್ನುವಂತೆ ಬಿಂಬಿಸಲಾಗುತ್ತಿದೆ. ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದ ಅಯ್ಯರ್ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ರೀಟೈನ್ ಮಾಡಿಕೊಂಡಿಲ್ಲ. ಮುಂಬರುವ ಐಪಿಎಲ್‌ನಲ್ಲಿ ಅಯ್ಯರ್ ಅಹಮದಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಈ ಮೂವರ ಹುಟ್ಟುಹಬ್ಬಕ್ಕೆ ಬಿಸಿಸಿಐ ವಿನೂತನವಾಗಿ ಶುಭ ಕೋರಿದೆ.
ಇನ್ನು ಕರ್ನಾಟಕ ಮೂಲದ ಪ್ರತಿಭಾನ್ವಿತ ಬ್ಯಾಟರ್ ಕರುಣ್ ನಾಯರ್ (Karun Nair) ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿರೇಂದ್ರ ಸೆಹ್ವಾಗ್ (Virender Sehwag) ಬಳಿಕ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ದಾಖಲೆ ಕರುಣ್ ನಾಯರ್ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ದ ಮೊಹಾಲಿಯಲ್ಲಿ ನಡೆದ ಟೆಸ್ಟ್ ಪಂದ್ತದಲ್ಲಿ ಕರುಣ್ ನಾಯರ್ ಅಜೇಯ 303 ರನ್ ಬಾರಿಸಿದ್ದರು. ಇನ್ನು ಕರುಣ್ ನಾಯರ್ ಕರ್ನಾಟಕ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.
IPL 2022: ಅಹಮದಾಬಾದ್ ತಂಡಕ್ಕೆ ಗ್ರೀನ್ ಸಿಗ್ನಲ್..?
ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರುದ್ರಪ್ರತಾಪ್ ಸಿಂಗ್ (RP Singh) ಡಿಸೆಂಬರ್ 06ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಆಟಗಾರರ ಪೈಕಿ ಅತಿ ಹಿರಿಯ ಕ್ರಿಕೆಟಿಗನೆನಿಸಿದ್ದಾರೆ. ಆರ್‌ಪಿ ಸಿಂಗ್ 36ನೇ ವಸಂತಕ್ಕೆ ಕಾಲಿರಿಸಿದ್ದಾರೆ. 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಆರ್‌ಪಿ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು. 2007ರ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಎಡಗೈ ವೇಗಿ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳೆನಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ 7 ಪಂದ್ಯಗಳಿಂದ 12 ವಿಕೆಟ್ ಕಬಳಿಸಿದ್ದರು. ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಡಿಸೆಂಬರ್ 06ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಎಲ್ಲಾ ಐವರು ಕ್ರಿಕೆಟಿಗರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ವತಿಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.