ಬುಮ್ರಾ ಆಕರ್ಷಕ ಅರ್ಧಶತಕ; ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ..!

Suvarna News   | Asianet News
Published : Dec 11, 2020, 05:33 PM IST
ಬುಮ್ರಾ ಆಕರ್ಷಕ ಅರ್ಧಶತಕ; ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ..!

ಸಾರಾಂಶ

ಆಸ್ಟ್ರೇಲಿಯಾ 'ಎ' ವಿರುದ್ದದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಮೊದಲ ದಿಟದಾಟ ಹೇಗಿತ್ತು ಎನ್ನುವುದರ ವಿವರ ಇಲ್ಲಿದೆ ನೋಡಿ

ಸಿಡ್ನಿ(ಡಿ.11): ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬಾರಿಸಿದ ಚೊಚ್ಚಲ ಅರ್ಧಶತಕ ಹಾಗೂ ಟೀಂ ಇಂಡಿಯಾ ವೇಗಿಗಳ ಕರಾರುವಕ್ಕಾದ ದಾಳಿಯ ನೆರವಿನಿಂದ ಭಾರತ ತಂಡ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಮೊದಲ ದಿನ ಕೊಂಚ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆರಂಭದಲ್ಲೇ ಕನ್ನಡಿಗ ಮಯಾಂಕ್ ಅಗರ್‌ವಾಲ್ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಗೆ ಎರಡನೇ ವಿಕೆಟ್‌ಗೆ ಪೃಥ್ವಿ ಶಾ ಹಾಗೂ ಶುಭ್‌ಮನ್ ಗಿಲ್ ಜೋಡಿ 63 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಪೃಥ್ವಿ ಶಾ ಕೇವಲ 29 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 40 ರನ್ ಚಚ್ಚಿದರೆ, ಮತ್ತೊಂದು ತುದಿಯಲ್ಲಿ ಶುಭ್‌ಮನ್ ಗಿಲ್ ಕೂಡಾ 58 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 43 ರನ್ ಬಾರಿಸಿ ಗ್ರೀನ್‌ಗೆ ವಿಕೆಟ್ ಒಪ್ಪಿಸಿದರು.

ದಿಢೀರ್ ಕುಸಿದ ಮಧ್ಯಮ ಕ್ರಮಾಂಕ: ಮಧ್ಯದಲ್ಲಿ ಹನುಮ ವಿಹಾರಿ(15) ಹೊರತು ಪಡಿಸಿದಂತೆ ಮಧ್ಯಮ ಕ್ರಮಾಂಕದಲ್ಲಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಒಂದು ಹಂತದಲ್ಲಿ 123 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಆಸರೆಯಾದರು.

ಹೌದು, ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಕೇವಲ 57 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 55 ರನ್ ಬಾರಿಸಿದರು. ಅಂದಹಾಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಬುಮ್ರಾ ಬಾರಿಸಿದ ಮೊದಲ ಅರ್ಧಶತಕ ಇದಾಗಿದೆ. ಇನ್ನು ಮತ್ತೊಂದು ತುದಿಯಲ್ಲಿ ಮೊಹಮ್ಮದ್ ಸಿರಾಜ್ 22 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಸಮೀಪ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

ಇಂದಿನಿಂದ ಭಾರತಕ್ಕೆ ಪಿಂಕ್ ಬಾಲ್ ಅಭ್ಯಾಸ

ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ 'ಎ' ತಂಡ ಟೀಂ ಇಂಡಿಯಾ ವೇಗಿಗಳ ದಾಳಿಗೆ ತತ್ತರಿಸಿ ಹೋಗಿದೆ. 32.2 ಓವರ್‌ ಮುಗಿಯುವಷ್ಟರಲ್ಲಿ 108 ರನ್‌ಗಳಿಗೆ ಸರ್ವಪತನ ಕಂಡಿದ್ದು, ಭಾರತ 86 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದಿದೆ. ಆಸೀಸ್‌ ಎ ತಂಡದ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಶೂನ್ಯ ಸುತ್ತಿದರೆ, ನಾಯಕ ಅಲೆಕ್ಸ್‌ ಕ್ಯಾರಿ(32) ಕೊಂಚ ಪ್ರತಿರೋಧ ತೋರಿದ್ದಾರೆ.

ಭಾರತ ಪರ ಮೊಹಮ್ಮದ್ ಶಮಿ, ನವದೀಪ್ ಸೈನಿ ತಲಾ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ 2 ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!