242 ರನ್ ಚಚ್ಚಿ ದೇಶಿ ಕ್ರಿಕೆಟ್ ಆಳಿದ ಹೀರೋ, ಜೈಲು ಸೇರಿದ್ದು ಹೇಗೆ? ಸಾಯುವಂತಿದ್ದ ಟೀಂ ಇಂಡಿಯಾ ಆಟಗಾರನಿಗೆ ಜೀವ ಕೊಟ್ಟಿದ್ದು RCB ಆಟಗಾರ ಕೊಟ್ಟ ಆ ಚೆಕ್!

Published : Sep 07, 2026, 05:12 PM IST
Jacob Martin

ಸಾರಾಂಶ

ಬರೋಡಾದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್, ರಣಜಿ ಟ್ರೋಫಿಯಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಮಿಂಚಿದರೂ, ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಅಲ್ಪಕಾಲದ್ದಾಗಿತ್ತು. ನಾಯಕನಾಗಿ ಬರೋಡಾಕ್ಕೆ ರಣಜಿ ಟ್ರೋಫಿ ಗೆಲ್ಲಿಸಿಕೊಟ್ಟ ಮಾರ್ಟಿನ್, ನಂತರದ ದಿನಗಳಲ್ಲಿ ಕಾನೂನು ಸಂಘರ್ಷ ಮತ್ತು ಮಾರಣಾಂತಿಕ ಅಪಘಾತವನ್ನು ಎದುರಿಸಿ, ಏಳುಬೀಳುಗಳ ಬದುಕನ್ನು ಸಾಗಿಸಿದರು.

ಬೆಂಗಳೂರು: ಒಂದೇ ಒಂದು ರಣಜಿ ಸೀಸನ್‌ನಲ್ಲಿ ಒಂದು ಸಾವಿರಕ್ಕೂ ಅಧಿಕ ರನ್, 100ಕ್ಕಿಂತ ಹೆಚ್ಚಿನ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ ಆಟಗಾರನನ್ನು ಮರೆಯಲು ಸಾಧ್ಯವೇ? ಆದಾಗ್ಯೂ, ಜಾಕೋಬ್ ಮಾರ್ಟಿನ್‌ಗೆ ಆ ಅಸಾಧಾರಣ ದೇಶೀಯ ಋತುವಿನ ಬಳಿಕ ಜೀವನದ ಅತ್ಯುನ್ನತ ಹಂತಕ್ಕೇರಿದರು. ಇದರ ಜತೆಗೆ ಕೊನೆಯಲ್ಲಿ ವಿವಾದಾತ್ಮಕ ವೃತ್ತಿಜೀವನದ ಮೂಲಕ ಪಾತಾಳಕ್ಕೂ ಕುಸಿದರು. ಯುವ ಕ್ರಿಕೆಟಿಗರ ಪಾಲಿಗೆ ಜೇಕಬ್ ಮಾರ್ಟಿನ್ ವೃತ್ತಿಬದುಕು ಒಂದು ಎಚ್ಚರಿಕೆಯ ಪಾಠ ಎಂದರೆ ಅತಿಶಯೋಕ್ತಿಯಲ್ಲ.

ಬರೋಡದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್, 1998-99ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಸೀಸನ್‌ನಲ್ಲಿ ಐದು ಶತಕ ಸಹಿತ, 103.70 ಬ್ಯಾಟಿಂಗ್ ಸರಾಸರಿಯಲ್ಲಿ 1,037 ರನ್ ಸಿಡಿಸಿದ್ದರು. ಈ ಪೈಕಿ 242 ರನ್‌ಗಳ ಬೃಹತ್ ಇನ್ನಿಂಗ್ಸ್ ಕೂಡಾ ಸೇರಿತ್ತು. ಜಾಕೋಬ್ ಮಾರ್ಟಿನ್‌, ಭಾರತದ ದೇಶಿ ಕ್ರಿಕೆಟ್‌ನಲ್ಲಿ ಔಟ್ ಮಾಡುವುದೇ ಕಷ್ಟಸಾಧ್ಯ ಎನ್ನುವಂತಹ ದಿನಗಳು ಆಗ ಇದ್ದವು. ಭಾರತ ತಂಡಕ್ಕೆ ಆಯ್ಕೆಯಾಗುವುದು ಸಹಜವಾದ ಮುಂದಿನ ಹಂತದಂತೆ ತೋರುತ್ತಿತ್ತು, ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗೆ ಅಂತಹ ಹೆಚ್ಚಿನ ಅವಕಾಶಗಳು ಎಂದಿಗೂ ಸಿಗಲಿಲ್ಲ.

ಜಾಕೋಬ್ ಮಾರ್ಟಿನ್ ಭಾರತ ಪರ ಕೇವಲ 10 ಪಂದ್ಯಗಳನ್ನಾಡಿ, 22.57ರ ಬ್ಯಾಟಿಂಗ್ ಸರಾಸರಿಯಲ್ಲಿ 158 ರನ್ ಗಳಿಸಲಷ್ಟೇ ಶಕ್ತರಾದರು. ಅಂದಹಾಗೆ ಜಾಕೋಬ್ ಮಾರ್ಟಿನ್, ಭಾರತ ಪರ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಜಾಕೋಬ್ ಮಾರ್ಟಿನ್ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಕೇವಲ 39 ರನ್ ಮಾತ್ರ. ಆದರೆ, ಬರೋಡಾ ತಂಡವನ್ನು ಐತಿಹಾಸಿಕ ರಣಜಿ ಟ್ರೋಫಿ ಗೆಲುವಿನತ್ತ ಮುನ್ನಡೆಸಿದ್ದು, 9,000ಕ್ಕೂ ಹೆಚ್ಚು ಪ್ರಥಮ ದರ್ಜೆ ರನ್‌ಗಳನ್ನು ಗಳಿಸಿದ್ದು, ನಿವೃತ್ತಿಯ ನಂತರ ಮತ್ತೆ ಕ್ರಿಕೆಟ್‌ಗೆ ಮರಳಿದ್ದು, ಸುದೀರ್ಘ ಕಾನೂನು ಹೋರಾಟವನ್ನು ಎದುರಿಸಿದ್ದು, ಪ್ರಾಣಾಪಾಯದಿಂದ ಪಾರಾಗುವಂತಹ ರಸ್ತೆ ಅಪಘಾತವೊಂದರಿಂದ ಬದುಕುಳಿದಿದ್ದು ಮತ್ತು ನಂತರ ಮತ್ತೊಂದು ಕಾರು ಅಪಘಾತದ ಬಳಿಕ ಮತ್ತೆ ಸುದ್ದಿಯಲ್ಲಿ ಕಾಣಿಸಿಕೊಂಡಿದ್ದು. ಇವೆಲ್ಲವೂ ಜಾಕೋಬ್ ಮಾರ್ಟಿನ್ ಅವರ ಜೀವನದಲ್ಲಿ ಸಂಭವಿಸಿದ ಪ್ರಮುಖ ಘಟನೆಗಳು.

ಯಾರು ಈ ಜಾಕೋಬ್ ಮಾರ್ಟಿನ್?

ಜಾಕೋಬ್ ಮಾರ್ಟಿನ್ ಬರೋಡಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, 1990ರ ದಶಕದಲ್ಲಿ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವು 1991-92ರ ರಣಜಿ ಟ್ರೋಫಿ ಋತುವಿನಲ್ಲಿ ಬರೋಡಾ ತಂಡದೊಂದಿಗೆ ಆರಂಭವಾಯಿತು. ಕುತೂಹಲಕಾರಿ ಸಂಗತಿಯೆಂದರೆ, ಮಾರ್ಟಿನ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಗಳಿಸುವ ಹಾಗೂ ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಆಲ್‌ರೌಂಡರ್ ಸಾಮರ್ಥ್ಯವನ್ನು ಅನಾವರಣ ಮಾಡಿದ್ದರು.

ಆದರೆ, ವೃತ್ತಿಜೀವನದ ಆರಂಭದಲ್ಲೇ ಬೌಲಿಂಗ್‌ಗೆ ಗುಡ್‌ ಬೈ ಹೇಳಿ ಬ್ಯಾಟಿಂಗ್‌ನತ್ತ ಗಮನ ಹರಿಸಿದರು. ಅಂತಿಮವಾಗಿ ಅವರು ಕೇವಲ 10 ಪ್ರಥಮ ದರ್ಜೆ ವಿಕೆಟ್‌ಗಳನ್ನು ಪಡೆದರು. ಮಾರ್ಟಿನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು ಮುಕ್ತಾಯಗೊಳಿಸುವ ಹೊತ್ತಿಗೆ, 138 ಪಂದ್ಯಗಳಲ್ಲಿ 46.65ರ ಸರಾಸರಿಯೊಂದಿಗೆ ಒಟ್ಟು 9,192 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ 23 ಶತಕಗಳು ಮತ್ತು 47 ಅರ್ಧಶತಕಗಳು ಸೇರಿದ್ದವು.

ಕ್ರಿಸ್ ಗೇಲ್ ಜತೆ ಏಕಕಾಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ:

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಮಾರ್ಟಿನ್, ವೆಸ್ಟ್ ಇಂಡೀಸ್ ಎದುರು 1999ರ ಸೆಪ್ಟೆಂಬರ್ 11ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದ ಹಾಗೆ ಅದೇ ಪಂದ್ಯದಲ್ಲಿ ಕ್ರಿಸ್ ಗೇಲ್ ಭಾರತ ಎದುರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಗೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯೂನಿವರ್ಸಲ್ ಬಾಸ್‌ನಂತೆ ಬೆಳೆದು ನಿಂತರೆ, ಜಾಕೋಬ್ ಮಾರ್ಟಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕು ಕೇವಲ 10 ಏಕದಿನ ಪಂದ್ಯಗಳಿಗೆ ಸೀಮಿತವಾಯಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಾಕೋಬ್ ಮಾರ್ಟಿನ್‌ಗೆ ನಿರೀಕ್ಷಿತ ಯಶಸ್ಸು ಸಿಗದಿದ್ದರೂ, ದೇಶಿ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರನಾಗಿ ಬೆಳೆದು ನಿಂತರು. ನಾಯಕನಾಗಿ 2000-01ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಾಕೋಬ್, ಬರೋಡಾ ತಂಡವನ್ನು ಯಶಸ್ವಿಯಾಗಿ ಫೈನಲ್‌ಗೆ ಕೊಂಡೊಯ್ದರು. ಈ ಮೂಲಕ ನಾಲ್ಕು ದಶಕಗಳ ಬಳಿಕ ಬರೋಡಾ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊದಲ ಸಲ ಫೈನಲ್‌ಗೇರಿತ್ತು. ಫೈನಲ್‌ನಲ್ಲಿ ರೈಲ್ವೇಸ್ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕನ ಆಟವಾಡಿದ ಜಾಕೋಬ್, ಆಕರ್ಷಕ ಅಜೇಯ 87 ರನ್ ಸಿಡಿಸಿ ಬೃಹತ್ ಮುನ್ನಡೆ ಸಾಧಿಸಲು ನೆರವಾದರು. ಗೆಲ್ಲಲು 223 ರನ್‌ಗಳ ಗುರಿ ಬೆನ್ನತ್ತಿದ ರೈಲ್ವೇಸ್ ತಂಡವು ಜಹೀರ್ ಖಾನ್ ಮಾರಕ ದಾಳಿಗೆ ತತ್ತರಿಸಿ 201 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಬರೋಡಾ ತಂಡವು ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಜಾಕೋಬ್ ಮಾರ್ಟಿನ್ ಮತ್ತು ಕಾನೂನು ಸಂಘರ್ಷದ ಕಥೆ:

ಕ್ರಿಕೆಟ್ ತಂಡದ ಸದಸ್ಯನೆಂದು ಬಿಂಬಿಸಿ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬ್ರಿಟನ್‌ಗೆ ಕರೆದೊಯ್ಯಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ, 2004ರ ಪ್ರಕರಣವೊಂದರಲ್ಲಿ ಮಾರ್ಟಿನ್ ಸಿಲುಕಿಕೊಂಡರು. ಕ್ರಿಕೆಟ್ ಕ್ಲಬ್ ಒಂದರೊಂದಿಗಿನ ಸಂಪರ್ಕದ ಮೂಲಕ ಆತನ ಹೆಸರು ಈ ಪ್ರಕರಣದೊಂದಿಗೆ ಥಳುಕುಹಾಕಿಕೊಂಡಿತು. ಈ ವ್ಯವಸ್ಥೆಯಲ್ಲಿ ಆತ ಭಾಗಿಯಾಗಿದ್ದನೆಂದು ತನಿಖಾಧಿಕಾರಿಗಳು ಆರೋಪಿಸಿದರು; ಆದರೆ ಮಾರ್ಟಿನ್ ಈ ಆರೋಪಗಳನ್ನು ನಿರಾಕರಿಸಿದರು. ವರ್ಷಗಳ ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳ ನಂತರ 2011ರಲ್ಲಿ ಅವರನ್ನು ಬಂಧಿಸಲಾಯಿತು. ಈ ಪ್ರಕರಣವು ಎರಡು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯಿತು. ಇದು ಅವರ ಕ್ರಿಕೆಟ್-ನಂತರದ ಜೀವನದ ಅತ್ಯಂತ ವಿವಾದಾತ್ಮಕ ಅಧ್ಯಾಯಗಳಲ್ಲಿ ಒಂದಾಗಿ ಪರಿಣಮಿಸಿತು.

ಕೊನೆಗೂ ಆರೋಪ ಮುಕ್ತರಾದ ಮಾರ್ಟಿನ್

ಜೂನ್ 11, 2026 ರಂದು, ತನ್ನ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯವೊಂದು ಮಾರ್ಟಿನ್ ಅವರನ್ನು ದೋಷಮುಕ್ತಗೊಳಿಸಿತು. ಆರೋಪಿತ ಚಟುವಟಿಕೆಗೆ ಮಾರ್ಟಿನ್ ಅವರು ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯಗಳು ಸಾಕಷ್ಟಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅಲ್ಲದೆ, ಅವರಿಗೆ ಹಣ ಸಂದಾಯವಾಗಿರುವುದನ್ನು ತೋರಿಸುವ ಯಾವುದೇ ಹಣಕಾಸಿನ ವಹಿವಾಟಿನ ಕುರುಹು ಇಲ್ಲದಿರುವುದು ಹಾಗೂ ಪ್ರಕರಣದ ಕೇಂದ್ರಬಿಂದುವಾಗಿರುವ ಕ್ಲಬ್ ಅವರ ಒಡೆತನದಲ್ಲಿದೆ ಎಂಬುದಕ್ಕೆ ಸಾಕ್ಷ್ಯದ ಕೊರತೆ ಇರುವುದನ್ನೂ ನ್ಯಾಯಾಲಯವು ಗಮನಿಸಿತು. 20 ವರ್ಷಗಳಿಗೂ ಹೆಚ್ಚು ಸಮಯದ ನಂತರ, ಮಾರ್ಟಿನ್ ಅವರ ಜೀವನದ ಅತ್ಯಂತ ಕಠಿಣ ಅಧ್ಯಾಯವೊಂದು ಅಂತಿಮವಾಗಿ ಯಾವುದೇ ಅಪರಾಧ ಸಾಬೀತಾಗದೆಯೇ ಕೊನೆಗೊಂಡಿತು.

ಜೀವ ಉಳಿಸಿದ ಆರ್‌ಸಿಬಿ ಆಟಗಾರ ಕೊಟ್ಟ ಚೆಕ್:

ಇನ್ನೇನು ಆರೋಪ ಮುಕ್ತನಾದೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಾರ್ಟಿನ್‌ಗೆ ಎದುರಾಗಿದ್ದು ಮಾರಣಾಂತಿಕ ಅಪಘಾತದ ಸಂಕಷ್ಟ. 2018ರ ಡಿಸೆಂಬರ್‌ನಲ್ಲಿ ಜಾಕೋಬ್ ಮಾರ್ಟಿನ್ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಈ ಅಪಘಾತದಲ್ಲಿ ಮಾರ್ಟಿನ್ ಅವರ ಶ್ವಾಸಕೋಶ ಹಾಗೂ ಲಿವರ್‌ಗೆ ಭಾರೀ ಹಾನಿಯುಂಟಾಗಿತ್ತು. ಬದುಕುವುದೇ ಕಷ್ಟ ಎನ್ನುವಂತ ಸಂದರ್ಭದಲ್ಲಿ ಬಿಸಿಸಿಐ, ಚೆನ್ನೈ ಸೂಪರ್ ಕಿಂಗ್ಸ್, ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಆಶಿಶ್ ನೆಹ್ರಾ, ಜಹೀರ್ ಖಾನ್ ಆರ್ಥಿಕವಾಗಿ ಸಹಾಯ ಮಾಡಿದರು. ಇಷ್ಟಾಗಿಯೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಈ ಆಟಗಾರನ ಬೆನ್ನಿಗೆ ನಿಂತಿದ್ದು, ಈಗಿನ ಆರ್‌ಸಿಬಿ ಆಲ್ರೌಂಡರ್ ಕೃನಾಲ್ ಪಾಂಡ್ಯ. ಜಾಕೋಬ್ ಮಾರ್ಟಿನ್ ನೆರವಿಗೆ ಬಂದ ಕೃನಾಲ್ ಪಾಂಡ್ಯ, ಅವರಿಗೆ ಖಾಲಿ ಚೆಕ್ ಕೊಟ್ಟು ನಿಮಗೆಷ್ಟು ಬೇಕೋ ಅಷ್ಟು ಅಮೌಂಟ್ ಬರೆದುಕೊಳ್ಳಿ ಎಂದು ಹೃದಯ ವೈಶಾಲ್ಯ ಮೆರೆದರು. ಇದಾದ ಬಳಿಕವೇ ಮಾರ್ಟಿನ್ ಪ್ರಾಣಾಪಾಯದಿಂದ ಪಾರಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟಾಪ್-10 ಟೆಸ್ಟ್ ವೇಗದ ಬೌಲರ್ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್; ಲಿಸ್ಟ್‌ನಲ್ಲಿವೆ ಅಚ್ಚರಿ ಹೆಸರು..!
ದುಲೀಪ್ ಟ್ರೋಫಿ ಫೈನಲ್: ಇಶಾನ್ ಕಿಶನ್ ಸ್ಪೋಟಕ ಶತಕ, ಮೊದಲ ದಿನವೇ ದಕ್ಷಿಣ ವಲಯ ಎದುರು ಪೂರ್ವ ವಲಯ ಮೇಲುಗೈ