ಕ್ರಿಕೆಟ್‌ಗೆ ಬ್ರೇಕ್ ಬೆನ್ನಲ್ಲೇ RBI ಕೆಲಸಕ್ಕೆ ಹಾಜರಾದ ಇಶಾನ್ ಕಿಶನ್! ಸ್ಪೋಟಕ ಬ್ಯಾಟರ್‌ಗೆ ರಿಸರ್ವ್ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದ್ದು ಹೇಗೆ? ಸಂಬಳ ಎಷ್ಟು?

Published : Aug 06, 2026, 05:39 PM IST
Ishan Kishan RBI

ಸಾರಾಂಶ

ಕ್ರಿಕೆಟ್‌ನಿಂದ ವಿರಾಮ ಪಡೆದಿರುವ ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್, ಪಾಟ್ನಾದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಈ ಉದ್ಯೋಗ ಪಡೆದಿದ್ದು, ಅವರ ಸಂಬಳ ಮತ್ತು ಕ್ರಿಕೆಟ್‌ಗೆ ಮರಳುವಿಕೆಯ ಕುರಿತು ಈ ಲೇಖನದಲ್ಲಿ ವಿವರಿಸಲಾಗಿದೆ.

ಬೆಂಗಳೂರು: ಟೀಂ ಇಂಡಿಯಾ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸದ್ಯ ಕ್ರಿಕೆಟ್‌ನಿಂದ ಅಲ್ಪ ವಿರಾಮ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಮೈದಾನಕ್ಕಿಳಿದಾಗ ಬೌಂಡರಿ ಹಾಗೂ ಸಿಕ್ಸರ್ ಸಿಡಿಸುವುದರ ಮೂಲಕ ಸುದ್ದಿಯಾಗುತ್ತಿದ್ದ ಇಶಾನ್ ಕಿಶನ್, ಈಗ ಮೈದಾನದಾಚೆಗಿನ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಹೌದು, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೊಂಚ ಬಿಡುವು ಪಡೆದುಕೊಂಡಿರುವ 28 ವರ್ಷದ ವಿಕೆಟ್ ಕೀಪರ್ ಬ್ಯಾಟರ್, ಇದೀಗ ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಹಾಜರಾಗುವ ಮೂಲಕ ಗಮನ ಸೆಳೆದಿದ್ದಾರೆ. ಇಶಾನ್ ಕಿಶನ್ ಇದೀಗ ಪಾಟ್ನಾದಲ್ಲಿರುವ ಆರ್‌ಬಿಐನ ಆಫೀಸ್‌ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಬನ್ನಿ ನಾವಿಂದು ಕ್ರಿಕೆಟ್ ಹೊರತಾಗಿ, ಇಶಾನ್ ಕಿಶನ್ ಅವರ ಕೆಲಸ ಏನು? ಸಂಬಳ ಎಷ್ಟು? ಮತ್ತೆ ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವುದು ಯಾವಾಗ ಎನ್ನುವುದನ್ನು ನೋಡೋಣ ಬನ್ನಿ.

ಇಶಾನ್ ಕಿಶನ್, ರಿಸರ್ವ್‌ ಬ್ಯಾಂಕ್ ಉದ್ಯೋಗಿ:

ಎಡಗೈ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಸ್ಪೋಟಕ ಬ್ಯಾಟರ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದ್ರೆ ಅವರು ರಿಸರ್ವ್ ಬ್ಯಾಂಕ್ ಉದ್ಯೋಗಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಇಶಾನ್ ಕಿಶನ್, ಆರ್‌ಬಿಐನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಾರೆ. ಪಾಟ್ನಾದಲ್ಲಿರುವ ಆರ್‌ಸಿಬಿ ಪ್ರಾದೇಶಿಕ ಕಚೇರಿಯಲ್ಲಿ ಇಶಾನ್ ಕಿಶನ್ ಉದ್ಯೋಗಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಶಾನ್ ಕಿಶನ್ ಆರ್‌ಬಿಐ ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇಶಾನ್ ಕಿಶನ್ ಕತ್ತಿನಲ್ಲಿ ಆರ್‌ಬಿಐ ಐಡಿ ಕಾರ್ಡ್ ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

ಇಶಾನ್ ಕಿಶನ್‌ಗೆ ಆರ್‌ಬಿಐನಲ್ಲಿ ಕೆಲಸ ಸಿಕ್ಕಿದ್ದು ಹೇಗೆ?

ಇಶಾನ್ ಕಿಶನ್‌ ಅಂಡರ್-19 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದರು. ಹೀಗಾಗಿ ಇಶಾನ್ ಕಿಶನ್‌ಗೆ 18 ವರ್ಷ ತುಂಬುತ್ತಿದ್ದಂತೆಯೇ 2017ರಲ್ಲಿ ಆರ್‌ಬಿಐ ಉದ್ಯೋಗಿಯಾಗಿ ನೇಮಕವಾದರು. ಪ್ರತಿಭಾನ್ವಿಯ ಅಥ್ಲೀಟ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾ ಕೋಟಾದಡಿಯಲ್ಲಿ ಇಶಾನ್ ಕಿಶನ್‌ಗೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಉದ್ಯೋಗ ನೀಡಲಾಯಿತು. ಈ ರೀತಿಯಾಗಿ ಇಶಾನ್‌ ಕಿಶನ್‌ಗೆ ಆರ್‌ಬಿಐನಲ್ಲಿ ಕೆಲಸ ಸಿಕ್ಕಿತು.

ಆರ್‌ಬಿಐನಲ್ಲಿ ಅಸಿಸ್ಟೆಂಟ್ ಬ್ಯಾಂಕ್ ಮ್ಯಾನೇಜರ್ ಆಗಿರುವ ಇಶಾನ್ ಕಿಶನ್‌ಗೆ ಸಂಬಳ ಎಷ್ಟು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗ್ರೇಡ್-ಎ ಹಂತದ ಉದ್ಯೋಗಿಗಳಿಗೆ ಬೇಸಿಕ್ ಸಂಬಳ 45,000 ದಿಂದ 49,000 ಸಾವಿರ ರುಪಾಯಿಗಳಾಗಿದೆ. ಇನ್ನು ಇದರ ಜತೆಗೆ ಹೌಸ್ ರೆಂಟ್ ಅಲೊವೆನ್ಸ್‌, ಇನ್ನಿತರ ಭತ್ಯೆಗಳು ಸೇರಿ ಸುಮಾರು 90,000 ದಿಂದ 1,15,000 ರುಪಾಯಿ ಸಂಬಳ ಸಿಗುತ್ತದೆ. ಇದರಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್ ಕಳೆದು ಇಶಾನ್ ಕಿಶನ್‌ ಕೈಗೆ ಆರ್‌ಬಿಐನಿಂದ ಸರಿಸುಮಾರು ₹75,000 ದಿಂದ ₹90,000 ಸಂಬಳ ಸಿಗಲಿದೆ.

 

ಇಶಾನ್ ಕಿಶನ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯೋದು ಯಾವಾಗ?

ಸದ್ಯ ಭಾರತ ತಂಡವು ಶ್ರೀಲಂಕಾ ಪ್ರವಾಸದಲ್ಲಿದ್ದು, ಅಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಗೆ ಇಶಾನ್ ಕಿಶನ್ ಆಯ್ಕೆಯಾಗಿಲ್ಲ. ಕ್ರಿಕೆಟ್ ಪಂದ್ಯಾಟಗಳು ಇಲ್ಲದೇ ಇದ್ದಾಗ ಮಾತ್ರ ಇಶಾನ್ ಕಿಶನ್, ಆರ್‌ಬಿಐನಲ್ಲಿ ತಾತ್ಕಾಲಿಕವಾಗಿ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಸದ್ಯ ಕ್ರಿಕೆಟ್‌ನಿಂದ ಕೊಂಚ ಬಿಡುವು ಪಡೆದುಕೊಂಡಿರುವ ಇಶಾನ್ ಕಿಶನ್, ಆಗಸ್ಟ್‌ ತಿಂಗಳಿನಂತ್ಯದ ವೇಳೆಗೆ ಮತ್ತೆ ಕ್ರಿಕೆಟ್ ಆಡಲು ಮೈದಾನಕ್ಕಿಳಿಯಲಿದ್ದಾರೆ. ಇಶಾನ್ ಕಿಶನ್, ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪೂರ್ವ ವಲಯದ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ. ಇದೇ ಆಗಸ್ಟ್ 23ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಶಾನ್ ಕಿಶನ್ ಈಸ್ಟ್ ಝೋನ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಿಲಕ್ ವರ್ಮಾ-ಅಮೃತಾ ಫಡ್ನವಿಸ್ ನಡುವಿನ ಸಂಭಾಷಣೆಯ ವಿಡಿಯೋ ಭಾರೀ ವೈರಲ್
ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಅಪರೂಪದ ವಿಶ್ವದಾಖಲೆ ನುಚ್ಚುನೂರು; ಟಿ20 ಕ್ರಿಕೆಟ್‌ಗೆ ಜೋಸ್ ಬಟ್ಲರ್ ಹೊಸ ಬಾಸ್