
ರಾಜ್‌ಕೋಟ್(ಅ.02): 2019-20ರ ರಣಜಿ ಚಾಂಪಿಯನ್ ಸೌರಾಷ್ಟ್ರ ತಂಡದ ವಿರುದ್ಧ ಇರಾನಿ ಟ್ರೋಫಿ ಪಂದ್ಯದಲ್ಲಿ ಶೇಷ ಭಾರತ(ರೆಸ್ಟ್ ಆಫ್ ಇಂಡಿಯಾ) ಮೊದಲ ದಿನ ಮೇಲುಗೈ ಸಾಧಿಸಿದೆ. ಎರಡನೇ ದಿನದಾಟದ ಆರಂಭದಲ್ಲಿ ಶೇಷ ಭಾರತ 4 ವಿಕೆಟ್‌ಗೆ 239 ರನ್ ಗಳಿಸಿದ್ದು, 141 ರನ್ ಮುನ್ನಡೆ ಪಡೆದಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಶೇಷ ಭಾರತದ ಯೋಚನೆ ಆರಂಭದಲ್ಲೇ ತಂಡದ ಕೈ ಹಿಡಿಯಿತು. ಕೇವಲ 5 ರನ್ ಗಳಿಸುವಷ್ಟರಲ್ಲಿ 4 ಪ್ರಮುಖ ವಿಕೆಟ್ ಕಳೆದುಕೊಂಡ ಸೌರಾಷ್ಟ್ರ ಬಳಿಕ ಯಾವ ಕ್ಷಣದಲ್ಲೂ ಪ್ರತಿರೋಧ ತೋರಲಿಲ್ಲ. ನಿರೀಕ್ಷೆ ಮೂಡಿಸಿದ್ದ ಚೇತೇಶ್ವರ ಪೂಜಾರ ಶೂನ್ಯಕ್ಕೆ ನಿರ್ಗಮಿಸಿದರೆ, ಧರ್ಮೇಂದ್ರ ಸಿಂಗ್ ಜಡೇಜಾ(28) ತಂಡದ ಪರ ಗರಿಷ್ಠ ರನ್ ಬಾರಿಸಿದರು. ಮುಖೇಶ್ ಕುಮಾರ್ 4, ಕುಲ್ದೀಪ್ ಸೆನ್ ಹಾಗೂ ಉಮ್ರಾನ್ ಮಲಿಕ್ ತಲಾ 3 ವಿಕೆಟ್ ಕಿತ್ತರು.
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಶೇಷ ಭಾರತಕ್ಕೆ ಸರ್ಫರಾಜ್ ಖಾನ್ ಹಾಗೂ ನಾಯಕ ಹನುಮ ವಿಹಾರಿ ಆಸರೆಯಾದರು. ಶೇಷ ಭಾರತ ತಂಡವು ಖಾತೆ ತೆರಯುವ ಮುನ್ನವೇ ಅಭಿಮನ್ಯು ಈಶ್ವರನ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮಯಾಂಕ್ ಅಗರ್‌ವಾಲ್ ಮತ್ತೊಮ್ಮೆ ಬ್ಯಾಟಿಂಗ್ ವೈಪಲ್ಯ ಅನುಭವಿಸಿದರು. ಮಯಾಂಕ್ ಅಗರ್‌ವಾಲ್ ಕೇವಲ 11 ರನ್ ಬಾರಿಸಿ ಚೇತನ್ ಸಕಾರಿಯಾಗೆ ವಿಕೆಟ್ ಒಪ್ಪಿಸಿದರು. ಇನ್ನು ಯಶ್ ಧುಳ್ ಬ್ಯಾಟಿಂಗ್ ಕೂಡಾ ಕೇವಲ 5 ರನ್‌ಗಳಿಗೆ ಸೀಮಿತವಾಯಿತು. ಯಶ್ ಧುಳ್ ಎಡಗೈ ವೇಗಿ ಜಯದೇವ್ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಶೇಷ ಭಾರತ ತಂಡವು ಒಂದು ಹಂತದಲ್ಲಿ 18 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Irani Cup 2022: ಶೇಷ ಭಾರತ ಮಾರಕ ದಾಳಿಗೆ ಸೌರಾಷ್ಟ್ರಕ್ಕೆ ಆರಂಭಿಕ ಆಘಾತ
ಇದಾದ ಬಳಿಕ ನಾಲ್ಕನೇ ವಿಕೆಟ್‌ಗೆ ಹನುಮ ವಿಹಾರಿ ಹಾಗೂ ಸರ್ಫರಾಜ್ ಖಾನ್ 220 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ದಿನದಾಟದ ಆರಂಭದಲ್ಲೇ ನಾಯಕ ಹನುಮ ವಿಹಾರಿ 82 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ದೇಶಿ ಕ್ರಿಕೆಟ್ ವೃತ್ತಿಜೀವನದಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ ಮತ್ತೊಂದು ಶತಕ ಸಿಡಿಸಿದ್ದು, 138 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸಾಲ್ಟ್ ಅಬ್ಬರ: ಪಾಕಿಸ್ತಾನ ವಿರುದ್ಧ ಗೆದ್ದ ಇಂಗ್ಲೆಂಡ್
ಲಾಹೋರ್: ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ 6ನೇ ಟಿ20 ಪಂದ್ಯದಲ್ಲಿ 8 ವಿಕೆಟ್ ಭರ್ಜರಿ ಜಯಗಳಿಸಿದ್ದು, 7 ಪಂದ್ಯಗಳ ಸರಣಿಯಲ್ಲಿ 3-3 ಸಮಬಲ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಪಾಕ್ 20 ಓವರಲ್ಲಿ 6 ವಿಕೆಟ್‌ಗೆ 169 ರನ್ ಗಳಿಸಿತು. ಬಾಬರ್ ಆಜಂ ಅಜೇಯ 87 ರನ್ ಬಾರಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 14.3 ಓವರ್‌ಗಳಲ್ಲಿ 2 ವಿಕೆಟ್‌ಗೆ ಜಯಗಳಿಸಿತು. ಸಾಲ್ಟ್ 41 ಎಸೆತಗಳಲ್ಲಿ ಔಟಾಗದೆ 88 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕೊನೆ ಪಂದ್ಯ ಭಾನುವಾರ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.