IPL ಟೂರ್ನಿಗಿಂತ ಪಾಕಿಸ್ತಾನ ಸೂಪರ್ ಲೀಗ್ ನೋಡಿದವರೆ ಹೆಚ್ಚು: ಪಿಸಿಬಿ ಅಧ್ಯಕ್ಷರ ಅಚ್ಚರಿಯ ಹೇಳಿಕೆ

By Naveen KodaseFirst Published Mar 21, 2023, 11:45 AM IST
Highlights

* 8ನೇ ಆವೃತ್ತಿಯ ಪಿಎಸ್‌ಎಲ್ ಟೂರ್ನಿ ಯಶಸ್ವಿ ಮುಕ್ತಾಯ
* ಮುಲ್ತಾನ್ ಸುಲ್ತಾನ್ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಲಾಹೋರ್ ಖಲಂದರ್ಸ್
* ಐಪಿಎಲ್‌ಗಿಂತ ಪಿಎಸ್‌ಎಲ್ ಹೆಚ್ಚು ಸಕ್ಸಸ್ ಎಂದ ಪಿಸಿಬಿ ಅಧ್ಯಕ್ಷ ನಜಂ ಸೇಠಿ

ಇಸ್ಲಾಮಾಬಾದ್‌(ಮಾ.21): ಎಂಟನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಮುಲ್ತಾನ್ ಸುಲ್ತಾನ್ಸ್ ಎದುರು ಲಾಹೋರ್ ಖಲಂದರ್ಸ್‌ ತಂಡವು ಒಂದು ರನ್ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಶನಿವಾರ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಶಾಹೀನ್ ಅಫ್ರಿದಿ ನೇತೃತ್ವದ ಲಾಹೋರ್‌ ತಂಡವು ರೋಚಕವಾಗಿ ಗೆಲುವಿನ ನಗು ಬೀರುವಲ್ಲಿ ಯಶಸ್ವಿಯಾಗಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಾಹೋರ್ ಖಲಂದರ್ಸ್‌ ತಂಡವು ಅಬ್ದುಲ್ಲಾ ಶಫೀಕ್(65 ರನ್ 44 ಎಸೆತ) ಹಾಗೂ ನಾಯಕ ಶಾಹೀನ್ ಅಫ್ರಿದಿ ಬಾರಿಸಿದ ಸ್ಪೋಟಕ ಬ್ಯಾಟಿಂಗ್(15 ಎಸೆತಗಳಲ್ಲಿ ಅಜೇಯ 44 ರನ್) ನೆರವಿನಿಂದ ಲಾಹೋರ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು. ಇದಾದ ಬಳಿಕ ಕಠಿಣ ಗುರಿ ಬೆನ್ನತ್ತಿದ ಮುಲ್ತಾನ್ ಸುಲ್ತಾನ್ಸ್ ತಂಡವನ್ನು 199 ರನ್‌ಗಳಿಗೆ ನಿಯಂತ್ರಿಸುವ ಮೂಲಕ ಲಾಹೋರ್ ತಂಡವು ರೋಚಕ ಜಯ ಸಾಧಿಸಿತು. ಈ ಮೂಲಕ ಲಾಹೋರ್ ಖಲಂದರ್ಸ್‌ ತಂಡವು ಎರಡನೇ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಪಿಎಸ್‌ಎಲ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಇದೀಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ಇದೇ ಮಾರ್ಚ್ 31ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನತ್ತ ನೆಟ್ಟಿದೆ.

ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಟಿ20 ಲೀಗ್ ಎನ್ನುವ ಹಿರಿಮೆಗೆ ಐಪಿಎಲ್ ಟೂರ್ನಿ ಪಾತ್ರವಾಗಿದೆ. ಐಪಿಎಲ್ ಟೂರ್ನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದು, ವರ್ಷದಿಂದ ವರ್ಷಕ್ಕೆ ಐಪಿಎಲ್ ಟೂರ್ನಿಯ ರೋಚಕತೆ ಹೆಚ್ಚುತ್ತಲೇ ಸಾಗುತ್ತಿದೆ. ಹೀಗಿರುವಾಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜಂ ಸೇಠಿ, ಪಿಎಸ್‌ಎಲ್ ಟೂರ್ನಿಯು ಐಪಿಎಲ್‌ಗಿಂತ ಹೆಚ್ಚಿನ ಯಶಸ್ಸನ್ನು ಕಂಡಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

8ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ನಜಂ ಸೇಠಿ, " ನಮ್ಮ ಪಿಎಸ್‌ಎಲ್ ಟೂರ್ನಿಯ ಡಿಜಿಟಲ್ ರೇಟಿಂಗ್ ಬಗ್ಗೆ ಹೇಳುವುದಾದರೇ, ಪಿಎಸ್‌ಎಲ್ ಅರ್ಧದ ಹಂತದಲ್ಲಿದ್ದಾಗ, ಟಿವಿ ರೇಟಿಂಗ್ 0.5 ಇತ್ತು, ಆದರೆ ಈಗ 11ಕ್ಕಿಂತ ಹೆಚ್ಚಿನ ರೇಟಿಂಗ್ ಹೊಂದಿದೆ. ಇದು ಪಿಎಸ್‌ಎಲ್ ಟೂರ್ನಿ ಮುಕ್ತಾಯದ ವೇಳೆಗೆ 18ರಿಂದ 20 ತಲುಪುವ ಸಾಧ್ಯತೆಯಿದೆ ಎಂದು ಪಿಸಿಬಿ ಅಧ್ಯಕ್ಷರು ಹೇಳಿದ್ದರು.

IPL ಹಣದಿಂದ ಯಾವ ಕಾರು ಖರೀದಿಸಬೇಕೆಂದು ಯೋಚಿಸುತ್ತಿದ್ದೆ: ರೋಹಿತ್‌ ಶರ್ಮಾ!

"ಡಿಜಿಟಲ್ ಮಾಧ್ಯಮದ ಮೂಲಕ 150 ಮಿಲಿಯನ್ ಮಂದಿ ಪಿಎಸ್‌ಎಲ್ ಟೂರ್ನಿಯನ್ನು ವೀಕ್ಷಿಸಿದ್ದಾರೆ. ಇದೇನು ಸಣ್ಣ ಸಾಧನೆಯೇನಲ್ಲ. ಇನ್ನು ಇದೇ ವೇಳೆ ಐಪಿಎಲ್‌ ಡಿಜಿಟಲ್‌ ರೇಟಿಂಗ್ 130 ಮಿಲಿಯನ್ ಇತ್ತು. ಆದರೆ ಪಿಎಸ್‌ಎಲ್‌ 150 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದರಿಂದ ಪಿಎಸ್‌ಎಲ್ ಟೂರ್ನಿಯು ಹೆಚ್ಚು ಯಶಸ್ಸನ್ನು ಕಂಡಿದೆ ಎಂದು ನಜಂ ಸೇಠಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್‌ 31ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯಲ್ಲಿ 10  ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಈ ಹೈವೋಲ್ಟೇಜ್ ಟಿ20 ಲೀಗ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

click me!