
ಕೊಚ್ಚಿ(ಡಿ.23): ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿಯಾಟಗಾರನಾಗಿ ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ಹೊರಹೊಮ್ಮಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದ ಸ್ಯಾಮ್ ಕರ್ರನ್ ಅವರನ್ನು 18.50 ಕೋಟಿ ರುಪಾಯಿ ನೀಡಿ ಖರೀದಿಸುವಲ್ಲಿ ಪಂಜಾಬ್ ಕಿಂಗ್ಸ್ ತಂಡವು ಯಶಸ್ವಿಯಾಗಿದೆ.
ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು, ದಾಖಲೆಯ ಮೊತ್ತಕ್ಕೆ ಸ್ಯಾಮ್ ಕರ್ರನ್ ಖರೀದಿಸುವುದರ ಜತೆಗೆ ಜಿಂಬಾಬ್ವೆಯ ತಾರಾ ಆಲ್ರೌಂಡರ್ ಸಿಕಂದರ್ ರಾಜಾ ಅವರನ್ನು ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಒಟ್ಟು ಆರು ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಈ ಆಟಗಾರರ ಪೈಕಿ, ಕರ್ನಾಟಕದ ಪ್ರತಿಭಾನ್ವಿತ ವೇಗಿ ವಿದ್ವತ್ ಕಾವೇರಪ್ಪ ಕೂಡಾ ಮೂಲ ಬೆಲೆಗೆ ಪಂಜಾಬ್ ಕಿಂಗ್ಸ್ ಪಡೆ ಕೂಡಿಕೊಂಡಿದ್ದಾರೆ.
ಐಪಿಎಲ್ ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಖರೀದಿಸಿದ ಆಟಗಾರರ ವಿವರ ಹೀಗಿದೆ:
* ಸ್ಯಾಮ್ ಕರ್ರನ್: ಆಲ್ರೌಂಡರ್ - 18.50 ಕೋಟಿ ರುಪಾಯಿ
* ಸಿಕಂದರ್ ರಾಜಾ: ಆಲ್ರೌಂಡರ್ - 50 ಲಕ್ಷ ರುಪಾಯಿ
* ಹರ್ಪ್ರೀತ್ ಭಾಟಿಯಾ: ಬ್ಯಾಟರ್ - 40 ಲಕ್ಷ ರುಪಾಯಿ
* ಶಿವಂ ಸಿಂಗ್ : ಆಲ್ರೌಂಡರ್ - 20 ಲಕ್ಷ ರುಪಾಯಿ
* ವಿದ್ವತ್ ಕಾವೇರಪ್ಪ - ಬೌಲರ್ - 20 ಲಕ್ಷ ರುಪಾಯಿ
* ಮೋಹಿತ್ ರಾಥೆ - ಆಲ್ರೌಂಡರ್ - 20 ಲಕ್ಷ ರುಪಾಯಿ
ಮಿನಿ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡ ಆಟಗಾರರ ವಿವರ ಹೀಗಿದೆ
ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಜಾನಿ ಬೈರ್‌ಸ್ಟೋವ್, ಪ್ರಬ್‌ಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಶ್‌ದೀಪ್ ಸಿಂಗ್, ಬಲ್ತೇಜ್ ಸಿಂಗ್, ನಾಥನ್ ಎಲ್ಲಿಸ್, ಕಗಿಸೊ ರಬಾಡ, ರಾಹುಲ್ ಚಾಹರ್, ಹರ್‌ಪ್ರೀತ್ ಬ್ರಾರ್
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ಪಾಲ್ಗೊಳ್ಳುತ್ತಾ ಬಂದಿರುವ ಪಂಜಾಬ್ ಕಿಂಗ್ಸ್ ತಂಡವು ಒಮ್ಮೆಯೂ ಟ್ರೋಫಿ ಗೆಲ್ಲಲು ಯಶಸ್ವಿಯಾಗಿಲ್ಲ. ಈ ಬಾರಿ ಶಿಖರ್ ಧವನ್ ನೇತೃತ್ವದಲ್ಲಿ ಹೊಸ ಹುರುಪಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಸೆಣಸಾಟಕ್ಕೆ ಸಜ್ಜಾಗಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.