IPL 2022: ಫಾಫ್ ಡು ಪ್ಲೆಸಿಸ್‌ ಆರ್‌ಸಿಬಿ ಕ್ಯಾಪ್ಟನ್ ಆಗ್ತಾರಾ..? ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?

Suvarna News   | Asianet News
Published : Feb 15, 2022, 01:39 PM IST
IPL 2022: ಫಾಫ್ ಡು ಪ್ಲೆಸಿಸ್‌ ಆರ್‌ಸಿಬಿ ಕ್ಯಾಪ್ಟನ್ ಆಗ್ತಾರಾ..? ಕೋಚ್ ಸಂಜಯ್ ಬಂಗಾರ್ ಹೇಳಿದ್ದೇನು?

ಸಾರಾಂಶ

* ಆರ್‌ಸಿಬಿ ತಂಡ ಕೂಡಿಕೊಂಡ ಅನುಭವಿ ಬ್ಯಾಟರ್‌ ಫಾಫ್ ಡು ಪ್ಲೆಸಿಸ್ * 7 ಕೋಟಿ ರುಪಾಯಿ ಕೊಟ್ಟು ಫಾಫ್ ಡು ಪ್ಲೆಸಿಸ್‌ ಖರೀದಿಸಿದ ಆರ್‌ಸಿಬಿ * ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕರಾಗುವ ಸಾಧ್ಯತೆ

ನವದೆಹಲಿ(ಫೆ.15): ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್‌ ಡು ಪ್ಲೆಸಿಸ್ (Faf du Plessis) ಆಗಮನ ತಂಡದ ಬ್ಯಾಟಿಂಗ್‌ಗೆ ಬಲ ತುಂಬಲಿದೆ ಮತ್ತು ಅವರ ನಾಯಕತ್ವದ ಕೌಶಲ್ಯ ತಂಡಕ್ಕೆ ಲಾಭವಾಗಲಿದೆ ಎಂದು ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (Royal Challengers Bangalore) ತಂಡದ ಪ್ರಧಾನ ಕೋಚ್‌ ಸಂಜಯ್‌ ಬಂಗಾರ್‌ (Sanjay Bangar) ತಿಳಿಸಿದ್ದಾರೆ. ತಂಡಕ್ಕೆ ಹೊಸ ನಾಯಕನ ಹುಡುಕಾಟದಲ್ಲಿರುವಾಗಲೇ ಸಂಜಯ್‌ ಅವರು ಈ ಹೇಳಿಕೆ ನೀಡಿದ್ದು, ಡು ಪ್ಲೆಸಿಸ್ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗುತ್ತಿದೆ. 

‘ತಮ್ಮ ಸಾಮರ್ಥ್ಯ ಏನೆಂಬುದನ್ನು ಡು ಪ್ಲೆಸಿಸ್ ಈಗಾಗಲೇ ಸಾಬೀತು ಪಡಿಸಿದ್ದಾರೆ. ತಂಡಕ್ಕೆ ಅತ್ಯುತ್ತಮ ಆರಂಭಿಕ ಆಟಗಾರನ ಹುಡುಕಾಟದಲ್ಲಿ ಇದ್ದೆವು. ಅವರ ಸೇರ್ಪಡೆಯಿಂದ ಅದು ನಿವಾರಣೆ ಆಗಿದೆ. ಅವರ ಆಗಮನ ಬ್ಯಾಟಿಂಗ್‌ ಸಮಸ್ಯೆ ಮಾತ್ರವಲ್ಲದೇ ನಾಯಕತ್ವದ ಅನುಭವ ಮತ್ತು ಕೌಶಲ್ಯ ತಂಡಕ್ಕೆ ಲಾಭದಾಯಕವಾಗಿದೆ ಎಂದು ಬಂಗಾರ್‌ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ಭಾಗವಾಗಿದ್ದ ಫಾಫ್ ಡು ಪ್ಲೆಸಿಸ್‌ ಅವರನ್ನು ಮೆಗಾ ಹರಾಜಿನಲ್ಲಿ 7 ಕೋಟಿ ರು. ಕೊಟ್ಟು ಆರ್‌ಸಿಬಿ ಖರೀದಿಸಿದೆ. ಐಪಿಎಲ್ ಆಟಗಾರರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವಿರಾಟ್ ಕೊಹ್ಲಿ(Virat Kohli), ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ಅವರನ್ನು ರೀಟೈನ್‌ ಮಾಡಿಕೊಂಡಿತ್ತು. ಇದೀಗ ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್‌, ಜೋಶ್ ಹೇಜಲ್‌ವುಡ್‌, ವನಿಂದು ಹಸರಂಗ ಸೇರಿದಂತೆ 19 ಆಟಗಾರರನ್ನು ಖರೀದಿಸಿದೆ. ಆರ್‌ಸಿಬಿ (RCB) ಇದೀಗ ಮೂವರು ರೀಟೈನ್ ಆಟಗಾರರು ಸೇರಿದಂತೆ 22 ಆಟಗಾರರ ಪಡೆಯನ್ನು ಹೊಂದಿದೆ.

IPL Auction 2022: ಹರಾಜಿನ ಬಳಿಕ ಐಪಿಎಲ್‌ ತಂಡಗಳ ಬಲಾಬಲ ಹೇಗಿದೆ..?

ಈ ಮೊದಲು ಫಾಫ್‌ ಡು ಪ್ಲೆಸಿಸ್‌ ನಾಯಕನಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ (Ab De Villiers) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಬೆನ್ನಲ್ಲೇ ಫಾಫ್ ಅವರ ಆಗಮನ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬುವಂತೆ ಮಾಡಿದೆ.

ಫೀಲ್ಡಿಂಗ್‌ ವೇಳೆ ಸ್ಮಿತ್‌ ತಲೆಗೆ ಪೆಟ್ಟು: ಲಂಕಾ ವಿರುದ್ಧದ ಟಿ20 ಸರಣಿಯಿಂದ ಔಟ್‌

ಸಿಡ್ನಿ: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ಆಸ್ಪ್ರೇಲಿಯಾದ ಬ್ಯಾಟರ್‌ ಸ್ಟೀವ್‌ ಸ್ಮಿತ್‌ (Steve Smith) ತಲೆಗೆ ಪೆಟ್ಟು ಬಿದ್ದಿದ್ದು, ಸರಣಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. 

ಭಾನುವಾರ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ ಸಿಕ್ಸರ್‌ ತಡೆಯುವ ಪ್ರಯತ್ನದ ವೇಳೆ ಸ್ಟೀವ್‌ ಸ್ಮಿತ್‌ ತಲೆ ಮೈದಾನಕ್ಕೆ ಬಲವಾಗಿ ಅಪ್ಪಳಿಸಿತ್ತು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾರದೊಳಗೆ ಸ್ಮಿತ್‌ ಚೇತರಿಸಿಕೊಳ್ಳಲಿದ್ದಾರೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತಿಳಿಸಿದ್ದು, ಆದಾಗ್ಯೂ ಸರಣಿಯ ಉಳಿದ ಪಂದ್ಯಗಳಿಗೆ ಅವರು ಲಭ್ಯ ಇರುವುದಿಲ್ಲ ಎಂದಿದೆ. 5 ಪಂದ್ಯಗಳ ಸರಣಿಯಲ್ಲಿ ಆಸ್ಪ್ರೇಲಿಯಾ 2-0 ಮುನ್ನಡೆ ಸಾಧಿಸಿದೆ.

ಕೀಗನ್‌, ಹೀಥರ್‌ ನೈಟ್‌ ಐಸಿಸಿ ತಿಂಗಳ ಆಟಗಾರರು

ದುಬೈ: ದಕ್ಷಿಣ ಆಫ್ರಿಕಾದ ಉದಯೋನ್ಮುಖ ಬ್ಯಾಟರ್‌ ಕೀಗನ್‌ ಪೀಟರ್‌ಸನ್‌ ಹಾಗೂ ಇಂಗ್ಲೆಂಡ್‌ ಮಹಿಳಾ ತಂಡದ ನಾಯಕಿ ಹೀಥರ್‌ ನೈಟ್‌ ಜನವರಿ ತಿಂಗಳ ಐಸಿಸಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಪೀಟರ್‌ಸನ್‌ ಪುರುಷರ ವಿಭಾಗದ ರೇಸ್‌ನಲ್ಲಿದ್ದ ದ.ಆಫ್ರಿಕಾದವರೇ ಆದ ಡೆವಾಲ್ಡ್‌ ಬ್ರೆವಿಸ್‌ ಹಾಗೂ ಬಾಂಗ್ಲಾದೇಶದ ವೇಗದ ಬೌಲರ್‌ ಎಬಾದತ್‌ ಹೊಸೈನ್‌ರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 

ಕಳೆದ ತಿಂಗಳಷ್ಟೇ ಭಾರತ ವಿರುದ್ಧ ನಡೆದ ಟೆಸ್ಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸುವಲ್ಲಿ ಕೀಗನ್‌ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಮಹಿಳಾ ವಿಭಾಗದಲ್ಲಿ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಟಾಪಟ್ಟು ಅವರನ್ನು ಹಿಂದಿಕ್ಕಿ ಹೀಥರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!
ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!